ಜಗತ್ತಿನ ಪರಿವಿಯೇ ಇಲ್ಲದ 3 ವರ್ಷದ ಮಗುವೊಂದು ಭಿಕ್ಷೆ ಬೇಡಿ, ಕಂಡವರ ಬಳಿ ಆಹಾರ ಬೇಡಿ ಪಡೆದು ಆ ತಾಯಿಯನ್ನು ಜೋಪಾನ ಮಾಡುತ್ತಿದ್ದ ವರದಿ ಮಾಧ್ಯಮಗಳಲ್ಲಿ ಬಿತ್ತರವಾದ ನಂತರ ಆಡಳಿತ ಎಚ್ಚೆತ್ತುಕೊಂಡು ರಕ್ಷಣಾ ಕ್ರಮಕ್ಕೆ ಮುಂದಾಗಿದೆ.
ಬೆಂಗಳೂರು[ಮೇ. 27] ಕೊಪ್ಪಳ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಬಾಲಕಿಯೊಬ್ಬಳು ಭಿಕ್ಷೆ ಬೇಡಿ ತಾಯಿಯನ್ನು ಪೋಷಿಸುತ್ತಿರುವ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದ್ದನ್ನು ಗಮನಿಸಿದ ಸಿಎಂ ಕುಮಾರಸ್ವಾಮಿ ಮಹಿಳೆಯ ಹಾಗೂ ಬಾಲಕಿಯ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ.
ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಮತ್ತು ಇತರ ಸಿಬ್ಬಂದಿ ಮಹಿಳೆಗೆ ಸೂಕ್ತ ಚಿಕಿತ್ಸೆಯ ನಂತರ ಸ್ವಾಧಾರ ಕೇಂದ್ರಕ್ಕೆ ಸೇರಿಸಲು ಕ್ರಮ ಕೈಗೊಂಡಿವೆ.
ಭಿಕ್ಷೆ ಬೇಡಿ ನಿಶ್ಶಕ್ತ ತಾಯಿಯನ್ನು ಸಲಹುತ್ತಿದೆ 3 ವರ್ಷದ ಮಗು!
ಮಹಿಳೆ ದುರುಗವ್ವಳ ಮಕ್ಕಳನ್ನು ಬಾಲಮಂದಿರಕ್ಕೆ ದಾಖಲಿಸಿ ಶಿಕ್ಷಣ ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸೋದರಿ ತಮ್ಮೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ. ಮಾಧ್ಯಮ ವರದಿ ನೋಡಿ ಕೊಪ್ಪಳಕ್ಕೆ ಆಗಮಿಸಿರುವುದಾಗಿ ಆಕೆಯ ಸೋದರ ಲಕ್ಷ್ಮಣ ತಿಳಿಸಿದ್ದು ಅವರನ್ನು ಮಕ್ಕಳ ಕಲ್ಯಾಣ ಸಮಿತಿ ಸಭೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಮುಖ್ಯಮಂತ್ರಿಗೆ ಮಾಹಿತಿ ನೀಡಿದ್ದಾರೆ.