ಸರ್ಕಾರ ರಚಿಸಲು ತೆರೆಮರೆಯಲ್ಲಿ ಸಹಾಯ ಮಾಡಿದವರಿಗೆ ಸಿಎಂ ಕೃತಜ್ಞತೆ

By Web DeskFirst Published Jul 30, 2019, 8:27 AM IST
Highlights

ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ತೆರೆ ಮರೆಯಲ್ಲಿ ಸಹಾಯ ಮಾಡಿದವರಿಗೆ ಕೃತಜ್ಞತೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. 

ಬೆಂಗಳೂರು [ಜು.30]:  ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲು ಕಳೆದ ಸುಮಾರು 20 ದಿನಗಳಿಂದ ತೆರೆಮರೆಯಲ್ಲಿ ಸೇವೆ ಸಲ್ಲಿಸಿದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ತಂಡಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಅವಧಿಯಲ್ಲಿ ಶಾಸಕರಿಗೆ ರೆಸಾರ್ಟ್‌ನಲ್ಲಿ ಊಟ-ವಸತಿ ವ್ಯವಸ್ಥೆಯೊಂದಿಗೆ ಅವರನ್ನು ವಿಧಾನಸೌಧಕ್ಕೆ ಬಸ್‌ಗಳಲ್ಲಿ ಕರೆದುಕೊಂಡು ಬರುವಲ್ಲಿ ಈ ತಂಡ ಅವಿರತವಾಗಿ ಶ್ರಮಿಸಿದೆ. ಮೇಲಾಗಿ ಶಾಸಕರ ಸಣ್ಣ ಪುಟ್ಟಅಗತ್ಯಗಳನ್ನು ಸ್ವಲ್ಪವೂ ವಿಳಂಬ ಮಾಡದೆ ಪೂರೈಸುವ ಮೂಲಕ ಅವರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ನೋಡಿಕೊಳ್ಳಲಾಗಿದೆ. ಜೊತೆಗೆ ಸಾಂಸ್ಕೃತಿಕ ಮನರಂಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದೇವಸ್ಥಾನಗಳಿಗೆ ಕರೆದೊಯ್ಯಲಾಗಿದೆ. ಇದೆಲ್ಲವನ್ನೂ ಕಾರ್ಯಕರ್ತರ ಪಡೆ ಶ್ರದ್ಧೆಯಿಂದ ನಿಭಾಯಿಸುವುದರ ಫಲವಾಗಿ ಪಕ್ಷದ ಶಾಸಕರನ್ನು ಸೆಳೆಯಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು ಪ್ರಯತ್ನ ನಡೆಸಿದರೂ ಯಶಸ್ಸು ಕಾಣಲಿಲ್ಲ ಎಂದು ಮೂಲಗಳು ತಿಳಿಸಿವೆ.

ಭಾನುವಾರ ರಾತ್ರಿ ಖಾಸಗಿ ಹೋಟೆಲ್‌ನಲ್ಲಿ ಶಾಸಕಾಂಗ ಪಕ್ಷದ ಸಭೆಯ ನಂತರ ಇದುವರೆಗೆ ಈ ಪ್ರಕ್ರಿಯೆಯಲ್ಲಿ ದುಡಿದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಕೆಲಕಾಲ ಕಳೆದ ಯಡಿಯೂರಪ್ಪ ಅವರು ಖುಷಿ ಖುಷಿಯಾಗಿ ಮಾತನಾಡಿದರು. ಅವರಿಗೆ ಧನ್ಯವಾದಗಳನ್ನು ಅರ್ಪಿಸಿ ಅವರ ಸೇವೆಯನ್ನು ಶ್ಲಾಘಿಸಿದರು. ಅವರೊಂದಿಗೆ ಫೋಟೋಗೆ ಪೋಸು ನೀಡಿದರು. ಶಾಸಕರಾದ ಎಸ್‌.ಆರ್‌.ವಿಶ್ವನಾಥ್‌, ಎನ್‌.ರವಿಕುಮಾರ್‌, ಮುಖಂಡರಾದ ಎ.ಎಚ್‌.ಆನಂದ್‌, ತಮ್ಮೇಶ್‌ಗೌಡ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

click me!