ವೀರಶೈವ, ಲಿಂಗಾಯತ, ಪಂಚಮಸಾಲಿ 4 ಶಾಸಕರಿಗೆ ಮಂತ್ರಿ ಸ್ಥಾನ?

By Web DeskFirst Published Jul 30, 2019, 8:23 AM IST
Highlights

ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ಸರ್ಕಾರ ರಚನೆ ಆಗುತ್ತಿದ್ದಂತೆ ಇಲ್ಲಿ ಸಚಿವ ಸ್ಥಾನಕ್ಕೆ ಲಾಬಿ ಶುರುವಾಗಿದೆ. ಇದೀಗ ನಾಲ್ವರಿಗೆ ಮಂತ್ರಿ ಸ್ಥಾನಕ್ಕಾಗಿ ವೀರಶೈವ ಸಂಘ ಒತ್ತಾಯಿಸಿದೆ.

ಬೆಂಗಳೂರು (ಜು.30) :  ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ನಾಲ್ವರು ಶಾಸಕರಿಗೆ ಮಂತ್ರಿ ಸ್ಥಾನ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಕರ್ನಾಟಕ ರಾಜ್ಯ ವೀರಶೈವ ಪಂಚಮಸಾಲಿ ಸಂಘ ಒತ್ತಾಯಿಸಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ನಿಕಟಪೂರ್ವ ಅಧ್ಯಕ್ಷ ಬಸವರಾಜ ದಿಂಡೂರ, ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದವರು ರಾಜ್ಯದಲ್ಲಿ 82 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಬಿಜೆಪಿ ಸರ್ಕಾರದಲ್ಲಿ 16 ಶಾಸಕರು ಈ ಸಮುದಾಯದವರಿದ್ದು, ಈ ಪೈಕಿ ನಾಲ್ವರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದರು.

ಜತೆಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರ ಸರ್ಕಾರ ಜಾರಿ ಮಾಡಿದ ಶೇ.10 ಮೀಸಲಾತಿಯನ್ನು ಕೂಡಲೇ ಜಾರಿ ಮಾಡುವುದು. ಬೆಳಗಾವಿ ಸುವರ್ಣ ಸೌಧದಲ್ಲಿ 20 ದಿನ ಅಧಿವೇಶನ ನಡೆಸಬೇಕು, ಮೈತ್ರಿ ಸರ್ಕಾರ ಒಂಬತ್ತು ಇಲಾಖೆಯನ್ನು ಸುವರ್ಣ ಸೌಧಕ್ಕೆ ವರ್ಗಾಯಿಸಿ ಹೊರಡಸಿದ್ದ ಆದೇಶ ಶೀಘ್ರವೇ ಜಾರಿಗೊಳಿಸಬೇಕೆಂದು ಅವರು ಆಗ್ರಹಿಸಿದರು. ಸಂಘದ ಬೇಡಿಕೆ ಕುರಿತಂತೆ ಈಗಾಗಲೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಸಂಘದ ಗೌರವಾಧ್ಯಕ್ಷ ಕಲಕನಗೌಡ ಪಾಟೀಲ್‌, ಕೊಪ್ಪಳ ಜಿಲ್ಲಾಧ್ಯಕ್ಷ ಬಸವಲಿಂಗಪ್ಪ ಭೂತೆ, ಕಾರ್ಯದರ್ಶಿ ಕೆ.ಜಿ ಪಲ್ಯದ, ವಕೀಲರಾದ ಸಿ.ಎಚ್‌. ಪಾಟೀಲ್‌ ಮತ್ತು ಶಂಕರಗೌಡ ಮತ್ತಿತರರು ಉಪಸ್ಥಿತರಿದ್ದರು.

click me!