ಮುಂದಿನ ತಿಂಗಳು ಬಿಎಸ್‌ವೈ ಬಜೆಟ್‌ ಮಂಡನೆ ಸಂಭವ

By Web DeskFirst Published Aug 5, 2019, 9:44 AM IST
Highlights

ಬಿಎಸ್ ವೈ ಹೊಸ ಸರ್ಕಾರದಿಂದ ಹೊಸ ಬಜೆಟ್‌ ರೂಪಿಸಲು ಗಂಭೀರ ಚಿಂತನೆ |  ಭಾಗ್ಯಲಕ್ಷ್ಮೇ ಬಾಂಡ್‌, ಸೈಕಲ್‌ ವಿತರಣೆ ಯೋಜನೆ ಮತ್ತೆ ಜಾರಿ? |  ಇದಕ್ಕೇನಾ 3 ತಿಂಗಳ ಲೇಖಾನುದಾನ ಪಡೆದುಕೊಂಡಿದ್ದು?

ಬೆಂಗಳೂರು (ಆ. 05): ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಿರಂತರವಾಗಿ ಇಲಾಖಾವಾರು ಸಭೆಗಳನ್ನು ನಡೆಸುತ್ತಿರುವ ಬಿ.ಎಸ್‌.ಯಡಿಯೂರಪ್ಪ ಅವರು ಸೆಪ್ಟೆಂಬರ್‌ ತಿಂಗಳಲ್ಲಿ ಬಜೆಟ್‌ ಮಂಡಿಸುವ ಚಿಂತನೆ ಹೊಂದಿದ್ದಾರೆ ಎನ್ನಲಾಗಿದೆ.

ತಮ್ಮ ಸರ್ಕಾರದ ಸಚಿವ ಸಂಪುಟ ರಚನೆ ಬಳಿಕ ಆಡಳಿತ ಯಂತ್ರಕ್ಕೆ ಮತ್ತಷ್ಟುಚುರುಕುಗೊಳಿಸಿ ಇಲಾಖಾವಾರು ಅನುದಾನ, ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಸೆಪ್ಟೆಂಬರ್‌ ತಿಂಗಳಲ್ಲಿ ನೂತನ ಸರ್ಕಾರದ ಹೊಸ ಬಜೆಟ್‌ ಮಂಡನೆಗೆ ಯಡಿಯೂರಪ್ಪ ಗಂಭೀರವಾಗಿ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಹಲವು ಸಭೆಗಳನ್ನು ನಡೆಸಿರುವ ಯಡಿಯೂರಪ್ಪ ಅವರು ರಾಜ್ಯದ ಆರ್ಥಿಕ ಪರಿಸ್ಥಿತಿ, ಸಂಪನ್ಮೂಲ ಕ್ರೋಢೀಕರಣ ಸೇರಿದಂತೆ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೇ, ಕಳೆದ ಮೈತ್ರಿ ಸರ್ಕಾರದ ಅವಧಿಯಲ್ಲಿ ಮಂಡನೆಯಾಗಿರುವ ಬಜೆಟ್‌ನಲ್ಲಿ ಖರ್ಚಾಗಿರುವ ಅನುದಾನದ, ತಾವು ಘೋಷಣೆ ಮಾಡಲು ಬೇಕಾದ ಅನುದಾನ ಸೇರಿದಂತೆ ಹಲವು ವಿಚಾರವಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಸೆಪ್ಟೆಂಬರ್‌ನಲ್ಲಿ ಅಧಿವೇಶನ ನಡೆಸುವ ಆಲೋಚನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದಾರೆ. ಬಹುಮತ ಸಾಬೀತು ಪಡಿಸುವ ವೇಳೆ ಮೈತ್ರಿ ಸರ್ಕಾರದ ಬಜೆಟ್‌ಗೆ ಕೇವಲ ಮೂರು ತಿಂಗಳ ಲೇಖಾನುದಾನ ಪಡೆದುಕೊಂಡಿದ್ದಾರೆ.

ಒಂದು ವೇಳೆ ಪೂರ್ಣವಧಿಗೆ ಲೇಖಾನುದಾನ ಪಡೆದುಕೊಂಡಿದ್ದರೆ ಹೊಸ ಬಜೆಟ್‌ ಮಂಡಿಸಲು ಅವಕಾಶ ಸಿಗುವುದಿಲ್ಲ ಎಂಬ ಕಾರಣಕ್ಕಾಗಿ ಮೂರು ತಿಂಗಳ ಅವಧಿಗೆ ಲೇಖಾನುದಾನ ಪಡೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ತಮ್ಮ ಹಳೆಯ ಯೋಜನೆಗಳಾದ ಸೈಕಲ್‌ ವಿತರಣೆ, ಭಾಗಲಕ್ಷ್ಮೇ ಯೋಜನೆ ಸೇರಿದಂತೆ ಇತರೆ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಣೆ ಮಾಡುವ ನಿರೀಕ್ಷೆ ಇದೆ. ಅಲ್ಲದೇ, ರೈತರಿಗೆ, ವೃದ್ಧರಿಗೆ, ಮಹಿಳೆಯರಿಗೆ ಸಹಕಾರಿಯಾಗುವಂತಹ ಕಾರ್ಯಕ್ರಮಗಳನ್ನು ಪ್ರಕಟಿಸುವ ಸಾಧ್ಯತೆ ಇದೆ.

ಅನ್ನಭಾಗ್ಯ ಯೋಜನೆ ಸೇರಿದಂತೆ ಮೈತ್ರಿ ಸರ್ಕಾರದ ಯೋಜನೆಗಳಿಗೆ ಯಾವ ಕ್ರಮ ಜರುಗಿಸಲಿದ್ದಾರೆ ಎಂಬ ಕುತೂಹಲ ಇದ್ದು, ಹಿಂದುಳಿದ ವರ್ಗ, ಪರಿಶಿಷ್ಟಜಾತಿ/ವರ್ಗಗಳಿಗೆ ವಿಶೇಷ ಒತ್ತು ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

click me!