ರುದ್ರೇಶ್ ಹತ್ಯೆಯಲ್ಲಿ ರೋಷನ್ ಬೇಗ್ ಕೈವಾಡ ಇರುವುದಕ್ಕೆ ಸಾಕ್ಷಿ ಇದೆಯೇ?: ಬಿಜೆಪಿಗೆ ಸಿಎಂ ಪ್ರಶ್ನೆ

By Suvarna Web Desk  |  First Published Nov 6, 2016, 5:24 AM IST

ಬಿಜೆಪಿ ಈ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದು, ಇಂಥವರ ಕೈಗೆ ಅಕಾರ ಸಿಕ್ಕರೆ ರಾಜ್ಯದ ಕಥೆ ಮುಗಿದೇ ಹೋಯಿತು ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.


ಬೆಂಗಳೂರು: ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆಯನ್ನು ಸಚಿವ ರೋಶನ್ ಬೇಗ್ ಅವರೇ ಮಾಡಿಸಿದ್ದಾರೆ ಎಂಬುದಕ್ಕೆ ಏನು ಸಾಕ್ಷಿ ಇದೆ ಎಂದು ಪ್ರಶ್ನಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಕ್ಷುಲ್ಲಕ ರಾಜಕೀಯ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಶನಿವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಈ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದು, ಇಂಥವರ ಕೈಗೆ ಅಕಾರ ಸಿಕ್ಕರೆ ರಾಜ್ಯದ ಕಥೆ ಮುಗಿದೇ ಹೋಯಿತು ಎಂದು ವ್ಯಂಗ್ಯವಾಡಿದರು.

Tap to resize

Latest Videos

ಪ್ರಮುಖ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಕೆಲ ಹತ್ಯೆ ಪ್ರಕರಣಗಳನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಕೋಮು ಸೌಹಾರ್ದತೆ ಕದಡುತ್ತಿದೆ. ದಲಿತ ವಿರೋಧಿ ಬಿಜೆಪಿ ನಾಯಕರು ಇದೀಗ ಅಂಬೇಡ್ಕರ್ ಅವರ ಹೆಸರನ್ನು ಹೇಳುತ್ತಿದ್ದಾರೆ. ಅದಕ್ಕಾಗಿ ಎಸ್ಸಿ, ಎಸ್ಟಿ , ಯುವ ಮೋರ್ಚಾ ಸಭೆಗಳನ್ನು ನಡೆಸುತ್ತಿದ್ದಾರೆ. ಇದು ಅಕಾರ ಚುಕ್ಕಾಣಿ ಹಿಡಿಯಲು ಬಿಜೆಪಿ ಮಾಡುತ್ತಿರುವ ಗಿಮಿಕ್ ಎಂದು ಟೀಕಿಸಿದರು.

ಶೋಭಾ ಹೊಣೆ ಎಂದ ಪರಂ: ರುದ್ರೇಶ್ ಹತ್ಯೆಗೆ ಸಚಿವ ರೋಷನ್‌'ಬೇಗ್ ಕೈವಾಡವಿರುವುದಾಗಿ ಹೇಳಿರುವ ಸಂಸದೆ ಶೋಭಾ ಕರಂದ್ಲಾಜೆ ಆರೋಪ ಕುರಿತು ಸೂಕ್ತ ಪುರಾವೆ ಒದಗಿಸದಿದ್ದಲ್ಲಿ ಅವರೇ ಹೊಣೆಯಾಗಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ನಡೆಸುತ್ತಿರುವ ತನಿಖೆಯಿಂದ ಸಚಿವ ರೋಷನ್ ಬೇಗ್ ವಿರುದ್ಧ ಸಂಶಯಕ್ಕೆ ಕಾರಣವಾಗುವಂತಹ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ. ಆದರೆ, ಶೋಭಾ ಕರಂದ್ಲಾಜೆ ಅವರು ಎಲ್ಲ ದಾಖಲೆಗಳೊಂದಿಗೆ ಆರೋಪಿಸಿರುತ್ತಾರೆ. ಆದ್ದರಿಂದ ಹೇಳಿಕೆಗೆ ಅವರು ಬದ್ಧರಾಗಿರಬೇಕು. ಅಲ್ಲದೆ, ಹೇಳಿಕೆ ಸಾಬೀತುಪಡಿಸಬೇಕು. ಹಾಗಾಗಿ ಆರೋಪ ಕುರಿತು ಸೂಕ್ತ ದಾಖಲೆಗಳನ್ನು ತನಿಖಾಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಒದಗಿಸಬೇಕು. ಇಲ್ಲವಾದರೆ ಆರೋಪಕ್ಕೆ ಹೊಣೆಯಾಲಿದ್ದಾರೆ ಎಂದರು.

ಪ್ರಕರಣ ಸಂಬಂಧ ತನಿಖಾಕಾರಿಗಳು ಯಾರಿಗೂ ಹೆದರುವ ಅವಶ್ಯಕತೆಯಿಲ್ಲ. ಆದರೆ, ಇಲ್ಲಿಯವರೆಗೂ ನಡೆದಿರುವ ತನಿಖೆಯಲ್ಲಿ ಬೇಗ್ ವಿರುದ್ಧ ಯಾವುದೇ ಸಾಕ್ಷ್ಯಗಳ ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.

ನಾಳೆ ಮಾನನಷ್ಟ ಮೊಕದ್ದಮೆ:
ತಮ್ಮ ವಿರುದ್ಧ ವಿನಾ ಕಾರಣ ಆರೋಪಿಸಿರುವ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಸೋಮವಾರ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ನಗರಾಭಿವೃದ್ಧಿ ಸಚಿವ ರೋಷನ್‌ಬೇಗ್ ಹೇಳಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಿನಿಂದ ತಾವು ಸಾರ್ವಜನಿಕ ಜೀವವನದಲ್ಲಿದ್ದು, ಸಮಾಜದಲ್ಲಿ ಘನತೆ ಉಳಿಸಿಕೊಂಡು ಬಂದಿದ್ದೇನೆ. ವಿನಾ ಕಾರಣ ಆರೋಪ ಮಾಡಿರುವುದನ್ನು ಸಹಿಸಲು ಸಾಧ್ಯವೇ ಇಲ್ಲ. ಹಾಗಾಗಿ ವಕೀಲರೊಂದಿಗೆ ಈಗಾಗಲೇ ಚರ್ಚಿಸಿದ್ದು, ಸೋಮವಾರ ಮೊಕದ್ದಮೆ ದಾಖಲಿಸಲಾಗುವುದು ಎಂದರು.

(ಕನ್ನಡಪ್ರಭ ವಾರ್ತೆ)

click me!