ಬಿತ್ತಿದಂತೆ ಬೆಳೆ - ಜುಲೈ ತಿಂಗಳಲ್ಲಿ ಕರ್ನಾಟಕದಲ್ಲಿ ಮೋಡ ಬಿತ್ತನೆ!

By Web DeskFirst Published Jun 29, 2019, 8:10 AM IST
Highlights

ಜೂನ್ ಮುಗಿಯುತ್ತಾ ಬಂದರೂ ರಾಜ್ಯದಲ್ಲಿ ಮಳೆ ಅಭಾವ | ಮಳೆ ಅಭಾವದಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆ |ಹುಬ್ಬಳ್ಳಿ, ಮೈಸೂರು ಕೇಂದ್ರವಾಗಿಟ್ಟುಕೊಂಡು ಬಿತ್ತನೆ | 

ಬೆಂಗಳೂರು (ಜೂ. 29): ರಾಜ್ಯದಲ್ಲಿ ಮಳೆಯ ಅಭಾವ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಕಾರ್ಯವನ್ನು ಜುಲೈ ತಿಂಗಳ ಎರಡನೇ ವಾರದಲ್ಲಿ ಆರಂಭಿಸಲು ಸರ್ಕಾರ ತೀರ್ಮಾನಿಸಿದ್ದು, ಈ ಮೊದಲು ತೀರ್ಮಾನಿಸಿದಂತೆ ಬೆಂಗಳೂರಿನ ಬದಲು ಮೈಸೂರು ಕೇಂದ್ರವಾಗಿಟ್ಟುಕೊಂಡು ಬಿತ್ತನೆ ಮಾಡಲು ನಿರ್ಧರಿಸಿದೆ.

ಮೋಡ ಬಿತ್ತನೆ ಕಾರ್ಯಕ್ಕೆ ಕೇಂದ್ರ ಸರ್ಕಾರವು ಅನುಮತಿ ಸಹ ನೀಡಿದೆ. ಮೋಡ ಬಿತ್ತನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜುಲೈ ತಿಂಗಳ ಎರಡನೇ ವಾರದಲ್ಲಿ ಹುಬ್ಬಳ್ಳಿ ಮತ್ತು ಮೈಸೂರನ್ನು ಕೇಂದ್ರವಾಗಿಟ್ಟುಕೊಂಡು ಆರಂಭಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಈ ಮೊದಲು ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಮೋಡ ಬಿತ್ತನೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ವಿಮಾನಯಾನ ಮತ್ತು ರಕ್ಷಣಾ ಇಲಾಖೆಯೊಂದಿಗೆ ರಾಜ್ಯದ ಅಧಿಕಾರಿಗಳು ಸಭೆ ನಡೆಸಿದ ಬಳಿಕ ಬೆಂಗಳೂರು ಬದಲು ಮೈಸೂರನ್ನು ಕೇಂದ್ರವಾಗಿಟ್ಟುಕೊಂಡು ಬಿತ್ತನೆ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ.

ಬೆಂಗಳೂರಲ್ಲಿ ಎಚ್‌ಎಎಲ್‌, ಜಕ್ಕೂರು ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಹೆಚ್ಚಾಗಿ ವಿಮಾನಗಳ ಹಾರಾಟ ನಡೆಯಲಿದೆ. ಹೀಗಾಗಿ ಬೆಂಗಳೂರಲ್ಲಿ ಮೋಡಬಿತ್ತನೆ ಕಾರ್ಯ ಕೈಗೊಳ್ಳುವುದು ಸಮಂಜಸವಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾದ ಕಾರಣ ಸ್ಥಳ ಬದಲಾವಣೆ ಮಾಡಲಾಗಿದೆ ಎಂದು ಹೇಳಿದರು.

click me!