
ಬೆಂಗಳೂರು: ರಾಷ್ಟ್ರದಾದ್ಯಂತ ವಿವಾದ ಅಲೆ ಸೃಷ್ಟಿಸಿದ್ದ ದೇಶ ವಿರೋಧಿ ಘೋಷಣೆ ಆರೋಪಕ್ಕೆ ಸಂಬಂಧಿಸಿದಂತೆ ‘ಅಮ್ನೆಸ್ಟಿ ಇಂಟರ್’ನ್ಯಾಷನಲ್’ ಸಂಸ್ಥೆ ದೋಷಮುಕ್ತವಾಗಿದೆ. ಈ ಪ್ರಕರಣ ತನಿಖೆಯನ್ನು ಪೂರ್ಣಗೊಳಿಸಿರುವ ಬೆಂಗಳೂರು ಪೊಲೀಸರು, ಸಾಕ್ಷ್ಯಾಧಾರದ ಕೊರತೆಯಲ್ಲಿ ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಿದ್ದಾರೆ.
ಅತ್ಯಂತ ಗಂಭೀರ ಪ್ರಕರಣವನ್ನು ಸುಮಾರು ಒಂದು ವರ್ಷ ಕಾಲ ಸುದೀರ್ಘ ತನಿಖೆ ನಡೆಸಿರುವ ಜೆ.ಸಿ.ನಗರ ಎಸಿಪಿ ಮಂಜುನಾಥ್ ನೇತೃತ್ವದ ತಂಡ 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಜು.12ರಂದು ‘ಬಿ-ರಿಪೋರ್ಟ್’ ಸಲ್ಲಿಸಿದೆ. ವಿಧಿವಿಜ್ಞಾನ ಪ್ರಯೋಗಾಲಯದಿಂದ ಬಂದ ವರದಿಯಲ್ಲಿ ದೇಶದ್ರೋಹ ಘೋಷಣೆ ಕೂಗಿಲ್ಲ ಎಂದು ಹೇಳಲಾಗಿದೆ.
ಇದಲ್ಲದೇ, ಸೈನ್ಯದ ವಿರುದ್ಧ ಘೋಷಣೆ ಕೂಗಿರುವ ಬಗ್ಗೆ ಇನ್ನಾವುದೇ ದಾಖಲೆಗಳು ಇಲ್ಲ. ದೂರುದಾರರು ನೀಡಿರುವ ಹೇಳಿಯಲ್ಲಿ ನಿಜಾಂಶ ಕಂಡುಬಂದಿಲ್ಲ ಎಂಬುವುದು ತನಿಖೆಯಿಂದ ಸ್ಪಷ್ಟವಾಗಿದೆ. ಸಾಕ್ಷ್ಯಾಧಾರದ ಕೊರೆತಯಿಂದಾಗಿ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಲಾಗಿದೆ ಎಂದು ಪ್ರಕರಣದ ತನಿಖಾಧಿಕಾರಿಯಾಗಿರುವ ಜೆ.ಸಿ. ನಗರದ ಎಸಿಪಿ ಮಂಜುನಾಥ್ ಬಾಬು ‘ಕನ್ನಡಪ್ರಭ’ಕ್ಕೆ’ ತಿಳಿಸಿದ್ದಾರೆ.
2016 ಆ.14ರಂದು ಬೆಂಗಳೂರಿನ ವಸಂತನಗರ ದಿ ಯುನೈಟೆಡ್ ಥಿಯಾಲಜಿಕಲ್ ಕಾಲೇಜಿನಲ್ಲಿ ‘ಅಮ್ನೆಸ್ಟಿ ಇಂಟರ್’ನ್ಯಾಷನಲ್’ ಇಂಡಿಯಾ ಸಂಸ್ಥೆ ‘ಬ್ರೋಕನ್ ಫ್ಯಾಮಿಲೀಸ್- ಜರ್ನಿ ಫಾರ್ ಜಸ್ಟಿಸ್’ ಎಂಬ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ಕೆಲವರು ಆಜಾದಿ ಹೆಸರಿನಲ್ಲಿ ಭಾರತೀಯ ಸೇನೆ ವಿರುದ್ಧ ಘೋಷಣೆ ಕೂಗಿದರು ಎಂದು ಸ್ಥಳದಲ್ಲಿದ್ದ ಎಬಿವಿಪಿ ಕಾರ್ಯಕರ್ತರು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಸಿದ್ದರಲ್ಲದೆ, ಇದು ದೇಶದೆಲ್ಲೆಡೆ ಸುದ್ದಿ ಮಾಡಿತ್ತು.
ಬಿ-ರಿಪೋರ್ಟ್ ಯಾಕೆ: ಘಟನೆಗೆ ಸಂಬಂಧಿಸಿದಂತೆ ನೂರಕ್ಕೂ ಹೆಚ್ಚು ಮಂದಿಯ ವಿಚಾರಣೆ ನಡೆಸಿದ್ದು, ಕಾಶ್ಮೀರಿ ಪಂಡಿತರು ಮತ್ತು ಅಮ್ನೆಸ್ಟಿ ಸಂಸ್ಥೆಯ ಆಯೋಜಕರು ಸೇರಿದಂತೆ 42 ಮಂದಿಯಿಂದ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.
ಅಮ್ನೆಸ್ಟಿ ಸಂಸ್ಥೆಯ ವಿಡಿಯೋ ಹಾಗೂ ಕಾರ್ಯಕ್ರಮದ ವರದಿ ಮಾಡಲು ಬಂದಿದ್ದ ಖಾಸಗಿ ಚ್ಯಾನೆಲ್’ಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಪ್ರಕರಣ ಸಂಬಂಧ ದೂರು ನೀಡಿರುವ ಎಬಿವಿಪಿ ಕಾರ್ಯಕರ್ತ ಜಯಪ್ರಕಾಶ್ ಪ್ರತ್ಯಕ್ಷದರ್ಶಿ ಅಲ್ಲ. ದೂರಿನ ಅಂಶಗಳನ್ನು ಸಾಬೀತುಪಡಿಸುವ ಸಾಕ್ಷ್ಯಾಧಾರ ಲಭಿಸಿಲ್ಲ. ಹೀಗಾಗಿ ಬಿ-ರಿಪೋರ್ಟ್ ಸಲ್ಲಿಸಲಾಗಿದೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.