
ಬೆಂಗಳೂರು : ಮೈಸೂರು ಜೆಡಿಎಸ್ ನಾಯಕರ ಭಿನ್ನಮತ ರಾಜಕಾರಣ ಶಾಸಕಾಂಗ ಸಭೆಯಲ್ಲಿಯೂ ಕಂಡುಬಂದಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎದುರಲ್ಲೇ ಪಕ್ಷದ ನಾಯಕರ ಮತ್ತು ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್ ನಡುವೆ ಮಾತಿನ ಸಮರ ನಡೆಯಿತು.
ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವ ಮುನ್ನ ವಿಧಾನಸೌಧದಲ್ಲಿ ಗುರುವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಶಾಸಕಾಂಗ ಸಭೆ ನಡೆಯಿತು. ಸಭೆಗೆ ಪಕ್ಷದ ಶಾಸಕರು, ಸಚಿವರು ಬಂದಿದ್ದರು. ವಿಧಾನಪರಿಷತ್ ಸದಸ್ಯ ಸಂದೇಶ ನಾಗರಾಜ್ ಸಹ ಸಭೆಗೆ ಹಾಜರಾದರು. ಸಂದೇಶ ನಾಗರಾಜ್ ಅವರನ್ನು ಗಮನಿಸುತ್ತಿದ್ದಂತೆ ಸಚಿವರಾದ ಸಾ.ರಾ.ಮಹೇಶ್ ಮತ್ತು ಪುಟ್ಟರಾಜು ಆಕ್ರೋಶಗೊಂಡು ಸಭೆಯಿಂದ ಹೊರಹೋಗುವಂತೆ ಏರುಧ್ವನಿಯಲ್ಲಿ ಮಾತನಾಡಿದರು.
ಸಚಿವರ ಬೆಂಬಲಕ್ಕೆ ನಿಂತ ಕೆಲವು ಶಾಸಕರು, ಚುನಾವಣೆ ವೇಳೆ ಸಂದೇಶ ನಾಗರಾಜ್ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಅಲ್ಲದೇ, ತಮ್ಮ ಸಹೋದರ ಸಂದೇಶ ಸ್ವಾಮಿಗೆ ಟಿಕೆಟ್ ನೀಡುವಲ್ಲಿ ಲಾಬಿ ನಡೆಸಿದ್ದರು. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸುವುದರ ಜತೆಗೆ ಚುನಾವಣೆ ವೇಳೆ ಪಕ್ಷದ ನಾಯಕರ ವಿರುದ್ಧ ಆರೋಪಗಳನ್ನು ಮಾಡಿದ್ದರು. ಹೀಗಾಗಿ ಅವರಿಗೆ ಸಭೆಯೊಳಗೆ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು ಎನ್ನಲಾಗಿದೆ.
ಪಕ್ಷದ ಶಾಸಕರ ವರ್ತನೆಯಿಂದ ಕೋಪಗೊಂಡ ಸಂದೇಶ್ ನಾಗರಾಜ್ ಸಹ ತಿರುಗೇಟು ನೀಡಲಾರಂಭಿಸಿದರು. ಈ ವೇಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎದುರೇ ಪಕ್ಷದ ನಾಯಕರ ನಡುವೆ ಮಾತಿನ ಸಮರ ನಡೆಯಿತು. ನಾಯಕರ ಆಕ್ಷೇಪಗಳು ಜೋರಾಗುತ್ತಿದ್ದಂತೆ ಜೆಡಿಎಸ್‌ನ ಹಿರಿಯ ಮುಖಂಡ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಎಲ್ಲರನ್ನೂ ಸಮಾಧಾನಪಡಿಸಿದರು ಎಂದು ಮೂಲಗಳು ಹೇಳಿವೆ.
ಇನ್ನು ಸದನದಲ್ಲಿ ಪ್ರಸ್ತಾಪಿಸಬೇಕಾದ ವಿಷಯಗಳ ಕುರಿತು ಚರ್ಚಿಸಲಾಯಿತು. ಬಜೆಟ್ ಮೇಲಿನ ಚರ್ಚೆ ವೇಳೆ ನಡೆದ ಮಾತುಕತೆಗಳ ಕುರಿತು ಸಮಾಲೋಚನೆ ನಡೆಸಲಾಯಿತು. ಸಾಲಮನ್ನಾ ವಿಚಾರ, ಅನ್ನಭಾಗ್ಯ ಯೋಜನೆ ಕುರಿತು ಚರ್ಚಿಸಲಾಯಿತು. ನಾಯಕರ ಸಲಹೆಗಳನ್ನು ಪಡೆದ ಬಳಿಕ ಕುಮಾರಸ್ವಾಮಿ ಚಾಲ್ತಿ ಸಾಲಮನ್ನಾ ಮತ್ತು ಅನ್ನಭಾಗ್ಯದ ಅಕ್ಕಿಯನ್ನು 5 ಕೆ.ಜಿ.ಯಿಂದ 7 ಕೆ.ಜಿ.ಗೆ ವಿತರಣೆ ಮಾಡುವುದನ್ನು ಮುಂದುವರಿಸುವ ಬಗ್ಗೆ ತೀರ್ಮಾನ ಕೈಗೊಂಡರು ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.