
ನವದೆಹಲಿ: ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಡುವೆ ಆಂತರಿಕ ಸಂಘರ್ಷ ತೀವ್ರಗೊಂಡಿದೆ ಎಂಬ ವರದಿಗಳ ಬೆನ್ನಲ್ಲೇ ಆರ್‌ಬಿಐ ಕಾರ್ಯವೈಖರಿ ಬಗ್ಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದಾರೆ. 2008 ಹಾಗೂ 2014ರ ನಡುವಣ ಅವಧಿಯಲ್ಲಿ ಮನಸೋ ಇಚ್ಛೆ ಸಾಲ ವಿತರಣೆಯಾಗುತ್ತಿದ್ದರೂ ಅದನ್ನು ಆರ್‌ಬಿಐ ತಡೆಯದೇ ಇದ್ದುದೇ ಇಂದು ಬ್ಯಾಂಕಿಂಗ್ ವಲಯ ಎದುರಿಸುತ್ತಿರುವ ಕೆಟ್ಟಸಾಲ ಅಥವಾ ಅನುತ್ಪಾದಕ ಆಸ್ತಿ ಬಿಕ್ಕಟ್ಟಿಗೆ ಕಾರಣ ಎಂದು ಚಾಟಿ ಬೀಸಿದ್ದಾರೆ.
ಇದರೊಂದಿಗೆ ಕಳೆದ ಕೆಲ ತಿಂಗಳಿನಿಂದ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನಡುವೆ ನಡೆಯುತ್ತಿದ್ದ ಶೀತಲ ಸಮರ ಇದೀಗ, ಬೀದಿಗೆ ಬಿದ್ದಂತಾಗಿದೆ. ಇದು, ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ವಿಪಕ್ಷಗಳ ಪಾಲಿಗೆ ಹೊಸ ಸರಕು ಒದಗಿಸುವ ಎಲ್ಲಾ ಸಾಧ್ಯತೆಯೂ ಇದೆ.
ಜೇಟ್ಲಿ ವಾಗ್ದಾಳಿ: ಅಮೆರಿಕ- ಭಾರತ ಪಾಲುದಾರಿಕಾ ವೇದಿಕೆ ಆಯೋಜಿಸಿದ್ದ ಭಾರತೀಯ ನಾಯಕತ್ವ ಶೃಂಗದಲ್ಲಿ ಮಂಗಳವಾರ ಮಾತನಾಡಿದ ಜೇಟ್ಲಿ, 2008ರ ಆರ್ಥಿಕ ಹಿಂಜರಿತದ ಬಳಿಕ ಆರ್ಥಿಕತೆಯನ್ನು ಕೃತಕವಾಗಿ ನಡೆಸಿಕೊಂಡು ಹೋಗುವ ಸಲುವಾಗಿ ಬಾಗಿಲು ತೆರೆದು, ಮನಸ್ಸಿಗೆ ಬಂದಂತೆ ಸಾಲ ನೀಡಲು ಬ್ಯಾಂಕುಗಳಿಗೆ ಸೂಚಿಸಲಾಗಿತ್ತು. ಮನಸೋಇಚ್ಛೆ ಸಾಲ ವಿತರಣೆಯಾಗುತ್ತಿದ್ದರೂ ಆರ್‌ಬಿಐ ಕಣ್ಣು ಮುಚ್ಚಿ ಕುಳಿತಿತ್ತು. ಅಂದಿನ ಸರ್ಕಾರ ಸಾಲ ನೀಡುವಂತೆ ಬ್ಯಾಂಕುಗಳಿಗೆ ಒತ್ತಾಯಪಡಿಸಿತ್ತು. ಹೀಗಾಗಿ ಒಂದೇ ವರ್ಷದಲ್ಲಿ ಸಾಲ ವಿತರಣೆ ಪ್ರಮಾಣ ಶೇ.31ಕ್ಕೆ ಏರಿಕೆಯಾಗಿತ್ತು. ಇದು ಸಾಮಾನ್ಯವಾಗಿ ಸರಾಸರಿ ಶೇ.14ರಷ್ಟಿರುತ್ತಿತ್ತು ಎಂದು ವಿವರಿಸಿದರು.
2008ರಲ್ಲಿ ಒಟ್ಟಾರೆ ಬ್ಯಾಂಕ್‌ಗಳ ಸಾಲ ಪ್ರಮಾಣ 18 ಲಕ್ಷ ಕೋಟಿ ರು. ಇತ್ತು. 2014ರ ವೇಳೆಗೆ ಅದು 55 ಲಕ್ಷ ಕೋಟಿ ರು. ತಲುಪಿತು. ಈ ಪ್ರಮಾಣದ ಸಾಲವನ್ನು ತಡೆಯುವ ಸಾಮರ್ಥ್ಯ ಬ್ಯಾಂಕ್‌ಗಳಿಗಾಗಲೀ, ಸಾಲಗಾರರಿಗಾಗಲೀ ಇರಲಿಲ್ಲ. ಹೀಗಾಗಿ ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿ ಮುಗಿಲು ಮುಟ್ಟಿತು. 2008ರಲ್ಲಿ 2.5 ಲಕ್ಷ ಕೋಟಿ ರು. ಇದ್ದ ಅನುತ್ಪಾದಕ ಆಸ್ತಿ 2014ರಲ್ಲಿ ನಾವು ಅಧಿಕಾರಕ್ಕೆ ಬರುವಾಗ 8.5 ಲಕ್ಷ ಕೋಟಿ ರು. ತಲುಪಿತು ಎಂದು ಕಿಡಿಕಾರಿದರು.
ಆರಂಭ ಎಲ್ಲಿ:
ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವ 11 ಬ್ಯಾಂಕುಗಳು, ಸಾಲ ವಿತರಣೆ ಮಾಡದಂತೆ ಆರ್‌ಬಿಐ ಹೇರಿರುವ ನಿರ್ಬಂಧ ಸಡಿಲಿಸಬೇಕು ಎಂಬುದು ಸರ್ಕಾರ ಸೂಚಿಸಿತ್ತು. ಆದರೆ ಇದಕ್ಕೆ ಆರ್‌ಬಿಐ ನಿರಾಕರಿಸಿತ್ತು. ಇದರ ಜೊತೆಗೆ ಬಡ್ಡಿದರ ಏರಿಸುತ್ತಿರುವ ಬಗ್ಗೆ ಸರ್ಕಾರ ಅತೃಪ್ತಿ ವ್ಯಕ್ತಪಡಿಸಿದ ಹೊರತಾಗಿಯೂ ಬಡ್ಡಿ ದರ ಇಳಿಸಲು ಆರ್‌ಬಿಐ ನೋ ಎಂದಿತ್ತು. ಜೊತೆಗೆ ನೀರವ್ ಮೋದಿ ಪಲಾಯನ ಪ್ರಕರಣ ಕೂಡಾ ಕೇಂದ್ರೀಯ ಬ್ಯಾಂಕ್ ವಿರುದ್ಧ ಕೇಂದ್ರ ಸರ್ಕಾರ ಮುನಿಸಿಕೊಳ್ಳಲು ಕಾರಣವಾಗಿತ್ತು. ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ಈ ನಡೆಯಿಂದ ಬೇಸತ್ತಿದ್ದ ಕೇಂದ್ರ ಸರ್ಕಾರ, ಅವರನ್ನು ಇನ್ನೊಂದು ಅವಧಿಗೆ ಮುಂದುವರೆಸದೇ ಇರುವ ನಿರ್ಧಾರ ಕೂಡಾ ಕೈಗೊಂಡಿದೆ ಎಂದು ಕೂಡಾ ಹೇಳಲಾಗಿತ್ತು.
ಇದೆಲ್ಲದರ ನಡುವೆಯೇ ಕಳೆದ ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಆರ್‌ಬಿಐ ಉಪಗವರ್ನರ್ ವಿರಳ್ ಆಚಾರ್ಯ, ‘ಆರ್‌ಬಿಐ ಸ್ವಾಯತ್ತೆಗೆ ಧಕ್ಕೆ ತರುವಂತೆ ಕೇಂದ್ರ ಸರ್ಕಾರ ವರ್ತಿಸುತ್ತಿದೆ. ಇದು ಭಾರೀ ದುರಂತಕ್ಕೆ ಕಾರಣವಾದೀತು’ ಎಂದಿದ್ದರು. ಹೀಗೆ ಮಾತನಾಡಲು ಅವಕಾಶ ಮಾಡಿದ ಆರ್‌ಬಿಐ ಗವರ್ನರ್‌ಗೆ ಧನ್ಯವಾದವನ್ನೂ ಹೇಳಿದ್ದರು. ಇದು ಈಗಾಗಲೇ ವಿಷಮಗೊಂಡಿದ್ದ ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ನಡುವಿನ ಸಂಘರ್ಷವನ್ನು ಮತ್ತಷ್ಟುಉಲ್ಬಣಿಸುವಂತೆ ಮಾಡಿತ್ತು. ಇದಕ್ಕೆ ಉದಾಹರಣೆ ಎಂಬಂತೆ, ‘ಆರ್‌ಬಿಐನ ಅಗ್ರ ಅಧಿಕಾರಿಯೊಬ್ಬರಿಂದ ಇಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ’ ಎಂದು ಪ್ರಧಾನಿ ಕಾರ್ಯಾಲಯದ ಅಧಿಕಾರಿಯೊಬ್ಬರು ಹೇಳಿದ್ದಾಗಿ ವರದಿಯಾಗಿತ್ತು. ಅದರ ಬೆನ್ನಲ್ಲೇ ಇದೀಗ, ವಿತ್ತ ಸಚಿವರೇ ಬಹಿರಂಗ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಆರ್‌ಬಿಐ ಗವರ್ನರ್ ಮತ್ತು ಕೇಂದ್ರ ಸರ್ಕಾರದ ನಡುವಿನ ಸಂಘರ್ಷ ಹೊಸದಲ್ಲವಾದರೂ, ಕೇಂದ್ರ ಸರ್ಕಾರದ ವಿರುದ್ಧ ಆರ್‌ಬಿಐ ಡೆಪ್ಯುಟಿ ಗವರ್ನರ್ ನೇರವಾಗಿ ಹೇಳಿಕೆ ನೀಡುವುದು, ಅದಕ್ಕೆ ಪ್ರತಿಯಾಗಿ ಕೇಂದ್ರದ ಹಣಕಾಸು ಸಚಿವರೇ ಆರ್‌ಬಿಐ ವಿರುದ್ಧ ನೇರಾನೇ ಆರೋಪ ಮಾಡುತ್ತಿರುವುದು ತೀರಾ ಅಪರೂಪದ ಬೆಳವಣಿಗೆ ಎನ್ನಲಾಗಿದೆ.
ಸಂಘರ್ಷಕ್ಕೆ ಕಾರಣವೇನು?
1. ಬಂಡವಾಳ, ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವ ಹಾಗೂ ಮರುಪಾವತಿಯಾಗದ ಸಾಲ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವ 11 ಬ್ಯಾಂಕುಗಳು ಸಾಲ ವಿತರಣೆ ಮಾಡದಂತೆ ಆರ್‌ಬಿಐ ಹೇರಿರುವ ನಿರ್ಬಂಧ ಸಡಿಲಿಸಬೇಕು ಎಂಬುದು ಸರ್ಕಾರದ ಬೇಡಿಕೆ. ಆದರೆ, ಇದಕ್ಕೆ ಆರ್‌ಬಿಐಗೆ ಒಲ್ಲದ ಮನಸು
2. ಬಡ್ಡಿದರ ಏರಿಕೆ ಕುರಿತೂ ಆರ್‌ಬಿಐ-ಸರ್ಕಾರ ನಡುವೆ ಭಿನ್ನಾಭಿಪ್ರಾಯ. ಹಣದುಬ್ಬರವನ್ನು ತಹಬದಿಯಲ್ಲಿ ಇಡುವ ನಿಟ್ಟಿನಲ್ಲಿ ಬ್ಯಾಂಕ್ ಬಡ್ಡಿ ದರ ಕುರಿತ ನಿರ್ಧಾರ ತಾನು ಸ್ವತಂತ್ರವಾಗಿ ಕೈಗೊಳ್ಳಬೇಕು ಆರ್‌ಬಿಐ ನಿಲುವು. ಆರ್‌ಬಿಐ ಬಡ್ಡಿದರ ಏರಿಸುತ್ತಿರುವ ಬಗ್ಗೆ ಸರ್ಕಾರ ಅತೃಪ್ತಿ. ಬಡ್ಡಿ ದರ ಇಳಿಸಲು ಒತ್ತಡ
3. ಪಾವತಿ ವ್ಯವಸ್ಥೆಗಳ ಮೇಲೆ ನಿಗಾ ವಹಿಸುವ ಸಲುವಾಗಿ ಪಾವತಿ ನಿಯಂತ್ರಣ ಮಂಡಳಿ ಸ್ಥಾಪಿಸಲು ಕಾಯ್ದೆಯೊಂದನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರದ ಸಚಿವರ ಸಮಿತಿಯೊಂದರ ಶಿಫಾರಸು. ಆದರೆ, ಈ ಶಿಫಾರಸಿನಲ್ಲಿ ಮಾಡಿರುವ ಕೆಲವು ನಿಯಮಾವಳಿಗಳ ಬಗ್ಗೆ ಆರ್‌ಬಿಐನಿಂದ ತೀವ್ರ ಆಕ್ಷೇಪ
4. ಇದಲ್ಲದೆ, ಕಳೆದ ಶುಕ್ರವಾರ ಆರ್‌ಬಿಐ ಉಪಗವರ್ನರ್ ವಿರಳ್ ಆಚಾರ್ಯ, ‘ಆರ್‌ಬಿಐ ಸ್ವಾಯತ್ತೆಗೆ ಧಕ್ಕೆ ತರುವಂತೆ ಕೇಂದ್ರ ಸರ್ಕಾರ ವರ್ತಿಸುತ್ತಿದೆ. ಇದು ಭಾರೀ ದುರಂತಕ್ಕೆ ಕಾರಣವಾದೀತು’ ಎಂದಿದ್ದರು. ಹೀಗೆ ಮಾತನಾಡಲು ಅವಕಾಶ ಮಾಡಿದ ಆರ್‌ಬಿಐ ಗವರ್ನರ್‌ಗೆ ಧನ್ಯವಾದವನ್ನೂ ಹೇಳಿದ್ದರು
5. ಇದೆಲ್ಲ ಬೆಳವಣಿಗೆಗಳ ಬಗ್ಗೆ ಪ್ರಧಾನಿ ಕಾರ್ಯಾಲಯ ಅಸಮಾಧಾನಗೊಂಡಿತ್ತು. ‘ಆರ್‌ಬಿಐನ ಅಗ್ರ ಅಧಿಕಾರಿಯೊಬ್ಬರಿಂದ ಇಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ’ ಎಂದು ಪ್ರಧಾನಿ ಕಾರ್ಯಾಲಯದ ಅಧಿಕಾರಿಯೊಬ್ಬರು ಹೇಳಿದ್ದಾಗಿ ವರದಿಯಾಗಿತ್ತು. ಇದೀಗ, ವಿತ್ತ ಸಚಿವರೇ ಬಹಿರಂಗ ಅತೃಪ್ತಿ ವ್ಯಕ್ತಪಡಿಸಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.