ಕೈನ ಪ್ರಮುಖ ನಾಯಕರಿಬ್ಬರ ನಡುವೆ ತೀವ್ರ ಜಟಾಪಟಿ

By Web DeskFirst Published Jun 5, 2019, 7:50 AM IST
Highlights

ಲೋಕಸಭಾ ಚುನಾವಣೆ ಮುಕ್ತಾಯವಾಗುತ್ತಿದ್ದಂತೆ ಕೈ ನಲ್ಲಿ ಅತೃಪ್ತ ನಾಯಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಇಬ್ಬರು ಕೈ ನಾಯಕರ ನಡುವೆಯೇ ತೀವ್ರ ಜಟಾಪಟಿ ನಡೆಯುತ್ತಿದೆ. 

ವಿಜಯಪುರ :  ಮೈತ್ರಿ ಮುಖಂಡರ ಹೇಳಿಕೆ ಪ್ರತಿ ಹೇಳಿಕೆಗಳು ಮುಂದುವರಿದಿರುವ ಮಧ್ಯೆಯೇ, ಇದೀಗ ಕಾಂಗ್ರೆಸ್‌ ಪಕ್ಷದ ಇಬ್ಬರು ಪ್ರಮುಖ ಸಚಿವರು ಪರಸ್ಪರ ಕೆಸರೆರಚಾಟಕ್ಕೆ ಮುಂದಾಗಿದ್ದಾರೆ. ಗೃಹ ಸಚಿವ ಎಂ.ಬಿ.ಪಾಟೀಲ್‌ ಹಾಗೂ ಆರೋಗ್ಯ ಸಚಿವ ಶಿವಾನಂದ ಪಾಟೀಲ್‌ ಮುನಿಸು ಬೀದಿಗೆ ಬಂದಿದ್ದು, ವೈಯಕ್ತಿಕವಾಗಿ ಟೀಕೆ ಮಾಡುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. 

ಕಳೆದ ವರ್ಷ ಆಲಮಟ್ಟಿಅಣೆಕಟ್ಟೆಯಲ್ಲಿನ ನೀರು ಖಾಲಿಯಾಗಲು ಅಂದಿನ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ಅವರೇ ಕಾರಣ ಎಂದು ಶಿವಾನಂದ ಪಾಟೀಲ್‌ ಇತ್ತೀಚೆಗೆ ನೀಡಿದ್ದ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಎಂ.ಬಿ.ಪಾಟೀಲ್‌, ಶಿವಾನಂದ ಪಾಟೀಲ ಅವರಿಗೆ ನನ್ನ ಬಗ್ಗೆ ಹೊಟ್ಟೆಉರಿ ಇರುವುದರಿಂದ ನನ್ನ ಬಗ್ಗೆ ವಿನಾಕಾರಣ ಟೀಕಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಶಿವಾನಂದ ಪಾಟೀಲ್‌, ನಾನು ಆ ರೀತಿ ಮಾತಾಡಿದ್ದಲ್ಲಿ ಸಾಬೀತುಪಡಿಸಲಿ ಎಂದು ಸವಾಲೆಸೆದಿದ್ದಾರೆ.

ಮೇ 28ರಂದು ವಿಜಯಪುರ ಜಿಲ್ಲೆಯ ಬೇನಾಳ ಆರ್‌.ಎಸ್‌.ಗ್ರಾಮಕ್ಕೆ ಭೇಟಿ ನೀಡಿದ್ದ ಶಿವಾನಂದ ಪಾಟೀಲ್‌ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಇಡೀ ಉತ್ತರ ಕರ್ನಾಟಕಕ್ಕೆ ನೀರು ಉಳಿಸಿಕೊಟ್ಟಿದ್ದೇನೆ. ಎಂ.ಬಿ.ಪಾಟೀಲರ ಹಾಗೆ ನೀರು ಹರಿಸಿ ಜಲಾಶಯ ಖಾಲಿ ಮಾಡಿಲ್ಲ ಎಂದು ಹೇಳಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.

ಈ ಬಗ್ಗೆ ವಿಜಯಪುರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್‌ ಅವರು, ಶಿವಾನಂದ ಪಾಟೀಲರ ಸ್ವಭಾವ ಒರಟು, ಅಸೂಯೆ ಪಡುವಂತಹದ್ದು ಹಾಗೂ ಕೊಳಕು ಸ್ವಭಾವದಿಂದ ಕೂಡಿದ್ದು ಎಂದು ಟೀಕಿಸಿದರು. ಕಳೆದ ವರ್ಷ ಆಲಮಟ್ಟಿಅಣೆಕಟ್ಟೆಯ ನೀರು ಖಾಲಿಯಾಗಲು ನಾನೇ ಕಾರಣ ಎಂಬಂತೆ ಶಿವಾನಂದ ಪಾಟೀಲ್‌ ಮಾತನಾಡಿರುವುದು ಸರಿಯಲ್ಲ. ಐಸಿಸಿ ಅಧ್ಯಕ್ಷರು ಹಾಗೂ ಸಮಿತಿ ಸದಸ್ಯರ ನಿರ್ಧಾರದಿಂದ ನೀರು ಬಿಡಲಾಗಿದೆಯೇ ಹೊರತು ಇದರಲ್ಲಿ ನನ್ನ ಪಾತ್ರ ಕಿಂಚಿತ್ತೂ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಹೇಳಿದ್ದರೆ ಸಾಬೀತು ಪಡಿಸಲಿ: ಎಂ.ಬಿ.ಪಾಟೀಲರ ಬಗ್ಗೆ ನಾನು ಆ ರೀತಿ ಮಾತನಾಡಿಯೇ ಇಲ್ಲ ಎಂದಿರುವ ಶಿವಾನಂದ ಪಾಟೀಲ್‌, ಒಂದೊಮ್ಮೆ ಆ ರೀತಿ ಮಾತನಾಡಿದ್ದರೆ ಅದನ್ನು ಅವರು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಎಂ.ಬಿ.ಪಾಟೀಲರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಆಲಮಟ್ಟಿಅಣೆಕಟ್ಟು ಖಾಲಿಯಾಗಿತ್ತು. ಈ ಬಾರಿ ಆಗುವುದು ಬೇಡ ಎಂದಷ್ಟೇ ಉಲ್ಲೇಖಿಸಿದ್ದೇನೆ ಹೊರತು, ಅವರೇ ಅಣೆಕಟ್ಟು ಖಾಲಿ ಮಾಡಿದ್ದಾರೆ ಎಂದು ಎಲ್ಲಿಯೂ ಹೇಳಿಲ್ಲ’ ಎಂದರು.

click me!