ನ್ಯಾಯಾಂಗ ಬಂಧನದಲ್ಲಿರುವ ಚೈತ್ರಾ ಕುಂದಾಪುರ ಅವರನ್ನು ಶುಕ್ರವಾರ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರು : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿ ತನ್ನ ಮೇಲೆ ಬಂದಿರುವ ಆರೋಪಗಳ ಬಗ್ಗೆ ನ್ಯಾಯಾಂಗ ಬಂಧನದಲ್ಲಿರುವ ಹಿಂದೂಪರ ವಾಗ್ಮಿ ಚೈತ್ರಾ ಕುಂದಾಪುರ ಸ್ಪಷ್ಟನೆ ನೀಡಿದ್ದು ‘ಗಲಾಟೆ ವೇಳೆ ಆತ್ಮರಕ್ಷಣೆಗಾಗಿ ತಳ್ಳಿದ್ದೇನೆಯೇ ವಿನಃ ಮಾರಕಾಯುಧಗಳಿಂದ ದಾಳಿ ನಡೆಸಿಲ್ಲ’ ಎಂದು ಹೇಳಿದ್ದಾರೆ.
ಅವರು ನೀಡಿರುವ ಹೇಳಿಕೆಯ ವಿಡಿಯೋ ಇದೀಗ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮಧ್ಯೆ ನ್ಯಾಯಾಂಗ ಬಂಧನದಲ್ಲಿರುವ ಚೈತ್ರಾ ಕುಂದಾಪುರ ಅವರನ್ನು ಶುಕ್ರವಾರ ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾನು ಸುಬ್ರಹ್ಮಣ್ಯ ಮಠಕ್ಕೆ ಹೋಗಿ ಬರುತ್ತಿದ್ದಾಗ ನಮ್ಮ ಕಾರನ್ನು ಅಡ್ಡಹಾಕಿ ಹಲ್ಲೆ ನಡೆಸುವ ಪ್ರಯತ್ನವನ್ನು ನಡೆಸಲಾಗಿದೆ. ಕಾರಿನ ಗಾಜನ್ನು ಪುಡಿಗೈಯಲು ಬಂದಾಗ ನಾವು ಕಾರಿನಿಂದ ಇಳಿದಿದ್ದೇವೆ. ಮಠಕ್ಕೆ ನಾನು ಒಬ್ಬಳೇ ಹೋಗಿದ್ದು, ಹಲವು ಮಂದಿ ಸೇರಿ ನನ್ನನ್ನು ಕೊಲೆ ಮಾಡಲು ನಡೆಸಿದ ಪೂರ್ವಯೋಜಿತ ಸಂಚು ಇದಾಗಿದೆ ಎಂದು ಚೈತ್ರಾ ಕುಂದಾಪುರ 2.42 ನಿಮಿಷದ ವಿಡಿಯೋದಲ್ಲಿ ಆರೋಪಿಸಿದ್ದಾರೆ. ನಾನು ಮಠದ ಪರವಾಗಿ ಮಾತನಾಡಲು ಬಂದ ಸಂದರ್ಭವನ್ನು ಹಲ್ಲೆಗೆ ಬಳಸಿಕೊಂಡಿದ್ದಾರೆ. ಮಾತ್ರವಲ್ಲ ಮುಸ್ಲಿಮರ ಜೊತೆ ಸಂಬಂಧ ಕಲ್ಪಿಸಿ ಅವಾಚ್ಯವಾಗಿ ಮಾತನಾಡಿದ್ದಾರೆ. ಅವರ ಮನೆಯ ಹೆಣ್ಮಕ್ಕಳ ಬಗ್ಗೆ ಈ ರೀತಿಯಾಗಿ ಮಾತನಾಡಿದರೆ ಸುಮ್ಮನಿರುತ್ತಾರಾ ಎಂದು ಪ್ರಶ್ನಿಸಿದ್ದಾರೆ.
ಆಸ್ಪತ್ರೆಗೆ ದಾಖಲು: ಮಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚೈತ್ರಾ ಕುಂದಾಪುರ ಅವರು ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ. ಅವರಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಪೊಲೀಸ್ ಕಾವಲಿನ ಮಧ್ಯೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.