ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಚಿಂಚೋಳಿ ವಿಧಾನಸಭೆ ಉಪಚುನಾವಣೆಯ ಕಾವು ರಂಗೇರಿದೆ. ಸೋಮವಾರ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಲಿದ್ದು, ಈ ವೇಳೆ ಶಕ್ತಿ ಪ್ರದರ್ಶನಕ್ಕೆ ಚುನಾವಣಾ ಆಯೋಗ ಬ್ರೇಕ್ ಹಾಕಿದೆ.
ಕಲಬುರಗಿ, [ಏ.28]: ಚಿಂಚೋಳಿ ವಿಧಾನಸಭಾ ಉಪಚುನಾವಣೆಯ ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 29 ಸೋಮವಾರ ಕೊನೆಯ ದಿನವಾಗಿದ್ದು, ನಾಳೆ [ಸೋಮವಾರ] ಬಿಜೆಪಿ ಹಾಗು ಕಾಂಗ್ರೆಸ್ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿಸಲು ಸಜ್ಜಾಗಿದ್ದಾರೆ.
ಆದ್ರೆ ನಾಮಪತ್ರ ಸಲ್ಲಿಸುವಾಗ ಮೆರವಣಿಗೆ, ರೋಡ್ ಶೋ, ಬೈಕ್ ರ್ಯಾಲಿಗಳಿಗೆ ನಿಷೇಧಿಸಲಾಗಿದೆ. ನಾಮಪತ್ರ ಸಲ್ಲಿಸಲು ಸೋಮವಾರ ಕೊನೆ ದಿನವಾಗಿದ್ದರಿಂದ ಎಲ್ಲರು ಅಂದೇ ನಾಮಪತ್ರ ಸಲ್ಲಿಸಲಿದ್ದಾರೆ.
ಚಿಂಚೋಳಿ ಟಿಕೆಟ್ ಫೈಟ್: ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಬಂಡಾಯ
ಇದ್ರಿಂದ ಚಿಂಚೋಳಿಯಲ್ಲಿ ಗದ್ದಲದಲ್ಲಿ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಾಮಪತ್ರ ಸಲ್ಲಿಸುವ ವೇಳೆ ಮೆರವಣಿಗೆ, ರ್ಯಾಲಿ ನಿಷೇಧಿಸಲಾಗಿದೆ.
ಚಿಂಚೋಳಿ ವಿಧಾನಸಭಾ ಕ್ಷೇತ್ರಕ್ಕೂ ಕರ್ನಾಟಕ ವಿಧಾನಸೌಧಕ್ಕೂ ನಿಗೂಢ ನಂಟು!
ಎಲ್ಲ ಪ್ರಮುಖ ಪಕ್ಷದವರು ಹಾಗೂ ಪಕ್ಷೆತರ ಅಭ್ಯರ್ಥಿಗಳು ಒಂದೇ ದಿನದಂದು ನಾಮಪತ್ರ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಚಿಂಚೋಳಿ ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಏಪ್ರಿಲ್ 29 ಸೋಮವಾರದಂದು ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಯಾವುದೇ ತರಹದ ಮೆರವಣಿಗೆ, ಪಾದಯಾತ್ರೆ, ಬೈಕ್ ರ್ಯಾಲಿ, ರೋಡ್ ಶೋಗಳನ್ನು ನಡೆಸಲು ಅನುಮತಿ ನಿರಾಕರಿಸಲಾಗಿದೆ ಎಂದು ಚಿಂಚೋಳಿ ವಿಧಾನಸಭಾ ಉಪ ಚುನಾವಣೆಯ ಚುನಾವಣಾಧಿಕಾರಿ ಸೋಮಶೇಖರ್ ಎಸ್. ಜಿ. ತಿಳಿಸಿದ್ದಾರೆ.
ಈ ಮೂಲಕ ನಾಮಪತ್ರ ಸಲ್ಲಿಸುವ ವೇಳೆ ಶಕ್ತಿ ಪ್ರದರ್ಶನ ಮಾಡಲು ಪ್ಲಾನ್ ಮಾಡಿದ್ದ ಕಾಂಗ್ರೆಸ್, ಬಿಜೆಪಿ ನಾಯಕರಿಗೆ ನಿರಾಸೆಯಾಗಿದೆ. ಕಾಂಗ್ರೆಸ್ ನಿಂದ ಸುಭಾಷ್ ರಾಥೋಡ್ ಹಾಗೂ ಬಿಜೆಪಿಯಿಂದ ಉಮೇಶ್ ಜಾಧವ್ ಪುತ್ರ ಅವಿನಾಶ್ ಜಾಧವ್ ಕಣಕ್ಕಿಳಿದಿದ್ದಾರೆ. ಇದೇ ಮೇ 19ರಂದು ಉಪಚುನಾವಣೆ ನಡೆಯಲಿದ್ದು, ಮೇ 23ಕ್ಕೆ ಫಲಿತಾಂಶ ಹೊರಬೀಳಲಿದೆ.