ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಇದೀಗ ಎಲ್ಲಿಂದಲೂ ಸಹಾಯ ಸಿಗದ ಸ್ಥಿತಿ ಎದುರಾಗಿದೆ.
ನವದೆಹಲಿ [ಜು.24]: ಆಂಧ್ರಪ್ರದೇಶದ ಅಮರಾವತಿಯಲ್ಲಿ ಅತ್ಯಾಧುನಿಕ ಹಾಗೂ ಭವ್ಯವಾದ ರಾಜಧಾನಿ ನಿರ್ಮಿಸುವ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕನಸಿಗೆ ಮತ್ತೊಂದು ಹೊಡೆತ ಬಿದ್ದಿದೆ. ಅಮರಾವತಿ ರಾಜಧಾನಿ ನಿರ್ಮಾಣ ಯೋಜನೆಗೆ 1300 ಕೋಟಿ ರು. ಸಾಲ ನೀಡಲು ಒಪ್ಪಿದ್ದ ಚೀನಾ ಬೆಂಬಲಿತ ಏಷ್ಯಾ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ ಇದೀಗ ಆ ಪ್ರಸ್ತಾವದಿಂದ ಹಿಂದೆ ಸರಿದಿದೆ.
ಆ ಯೋಜನೆಯ ಪ್ರಸ್ತಾವ ತಮ್ಮ ಪರಿಗಣನೆಯಲ್ಲಿ ಇಲ್ಲ ಎಂದು ಆ ಬ್ಯಾಂಕಿನ ವಕ್ತಾರರು ತಿಳಿಸಿದ್ದಾರೆ. 2000 ಕೋಟಿ ರು. ಸಾಲ ನೀಡುವ ಪ್ರಸ್ತಾವವನ್ನು ಕಳೆದ ವಾರವಷ್ಟೇ ವಿಶ್ವ ಬ್ಯಾಂಕ್ ಕೈಬಿಟ್ಟಿತ್ತು.
ಅದರ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ. ಅಮರಾವತಿ ಯೋಜನೆಗೆ ಸಂಬಂಧಿಸಿದಂತೆ ಸಾಕಷ್ಟುದೂರುಗಳು ಬಂದ ಹಿನ್ನೆಲೆಯಲ್ಲಿ ಸ್ವತಂತ್ರ ತನಿಖೆ ಕೈಗೊಳ್ಳಲು ಅಧಿಕಾರಿಗಳನ್ನು ಭಾರತಕ್ಕೆ ಕಳುಹಿಸಲು ವಿಶ್ವ ಬ್ಯಾಂಕ್ ಮುಂದಾಗಿತ್ತು. ಅದಕ್ಕೆ ಭಾರತ ಒಪ್ಪಿಗೆ ಸೂಚಿಸಿರಲಿಲ್ಲ. ಬದಲಿಗೆ ಸಾಲದ ಕೋರಿಕೆಯನ್ನೇ ಹಿಂಪಡೆದಿತ್ತು. ಹೀಗಾಗಿ ವಿಶ್ವ ಬ್ಯಾಂಕ್ ತನ್ನ ಪ್ರಸ್ತಾವ ಕೈಬಿಟ್ಟಿತ್ತು. ಈಗ ಚೀನಾ ಬ್ಯಾಂಕಿನ ಪ್ರಕಟಣೆಗೂ ಅದೇ ಕಾರಣ ಇರಬಹುದು ಎನ್ನಲಾಗಿದೆ.