
ನವದೆಹಲಿ: ಸಿಕ್ಕಿಂ-ಭೂತಾನ್-ಚೀನಾ ಗಡಿಭಾಗದಲ್ಲಿರುವ ವಿವಾದಿತ ಡೋಕ್ಲಾಮ್ ಪ್ರದೇಶದಲ್ಲಿ ಭಾರತದ ಆಕ್ಷೇಪದ ಹೊರತಾಗ್ಯೂ ಚೀನಾ ನಿಧಾನವಾಗಿ ತನ್ನ ಸೇನಾ ಬಲ ಹೆಚ್ಚಿಸಿಕೊಳ್ಳುತ್ತಿದೆಎಂದು ತಿಳಿದುಬಂದಿದೆ.
ಇತ್ತೀಚೆಗೆ ಭಾರತೀಯ ಸೇನೆಯು ಡೋಕ್ಲಾಮ್ ಪ್ರದೇಶದಲ್ಲಿ ಬೀಡು ಬಿಟ್ಟು ಚೀನಾ ಕಣ್ಣನ್ನು ಕೆಂಪಗಾಗಿಸಿತ್ತು. ಚೀನಾ ಈ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡುತ್ತಿರುವುದನ್ನು ಪ್ರಶ್ನಿಸಿ ಭಾರತ ಸೇನೆ ಇಲ್ಲಿಗೆ ನುಗ್ಗಿ 73 ದಿನ ಬೀಡು ಬಿಟ್ಟಿತ್ತು.
ಆದರೆ ಈಗ ವಿವಾದಿತ ಸ್ಥಳದಿಂದ ೧೨ ಕಿ.ಮೀ. ದೂರದಲ್ಲಿ ಪುನಃ ರಸ್ತೆ ಕಾಮಗಾರಿ ಆರಂಭಿಸಿರುವ ಚೀನಾ, ನಿಧಾನವಾಗಿ ತನ್ನ ಸೇನಾ ಬಲವನ್ನೂ ಇಲ್ಲಿ ಹೆಚ್ಚಿಸಿಕೊಳ್ಳುತ್ತಿದೆ. ವಿವಾದಿತ ಸ್ಥಳದಲ್ಲಿ ಚೀನಾದ 1000 ಸೈನಿಕರು ಬೀಡುಬಿಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಹೀಗಾಗಿ ಇದು ಉಭಯ ದೇಶಗಳ ನಡುವೆ ಹೊಸ ಉದ್ವಿಗ್ನತೆಗೆ ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗಿದೆ. ಭಾರತದ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಚಲ್ ಬಿ.ಎಸ್. ಧನೋವಾ ಗುರುವಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ಡೋಕ್ಲಾಮ್ ಪ್ರಸ್ಥಭೂಮಿಯ ಚುಂಬಿ ಕಣಿವೆಯಲ್ಲಿ ಚೀನಾ ಪಡೆಗಳು ಇನ್ನೂ ಬೀಡುಬಿಟ್ಟಿವೆ’ ಎಂದು ಖಚಿತಪಡಿಸಿದ್ದಾರೆ.
ಆದರೆ, ‘ಈ ಪ್ರದೇಶದಲ್ಲಿನ ಅಭ್ಯಾಸ ಮುಗಿದ ನಂತರ ಈ ಪಡೆಗಳು ವಾಪಸಾಗುವ ನಿರೀಕ್ಷೆ ಇದೆ. ಉಭಯ ಪಡೆಗಳು ಈಗ ಮುಖಾಮುಖಿಯಾಗುವ ಇರಾದೆ ಹೊಂದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಭಾರತಕ್ಕೆ ಹೋಗುವಾಗ ಹುಷಾರ್: ಪ್ರವಾಸಿಗರಿಗೆ ಚೀನಾ ಎಚ್ಚರಿಕೆ
ಭಾರತಕ್ಕೆ ತೆರಳುವ ತನ್ನ ನಾಗರಿಕರಿಗೆ ಚೀನಾ ಹೊಸದಾಗಿ ಎಚ್ಚರಿಕೆ ನೀಡಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸೇರಿದಂತೆ ಕೆಲ ಪ್ರದೇಶಗಳಿಗೆ ವಿದೇಶಿಯರಿಗೆ ಪ್ರವೇಶ ಇಲ್ಲ. ಹೀಗಾಗಿ ಇಂಥ ಪ್ರದೇಶಗಳಿಗೆ ತೆರಳುವ ಮುನ್ನ ತನ್ನ ನಾಗರಿಕರು ಎಚ್ಚರದಿಂದ ಇರಬೇಕೆಂದು ಚೀನಾ ಸಲಹೆ ನೀಡಿದೆ. ಡೋಕ್ಲಾಮ್ ವಿವಾದ ಇತ್ಯರ್ಥ ಬಳಿಕ ಚೀನಾ ಹೊರಡಿಸಿದ ಮೊದಲ ಎಚ್ಚರಿಕೆ ಇದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.