ಜಾಗತಿಕ ಉಗ್ರರ ಪಟ್ಟಿಗೆ ಮಸೂದ್ ಅಝರ್: ಭಾರತದ ಪ್ರಯತ್ನಕ್ಕೆ ಇನ್ನೊಮ್ಮೆ ಚೀನಾ ತಡೆ

By Suvarna Web DeskFirst Published Aug 3, 2017, 10:46 AM IST
Highlights

ಪಾಕಿಸ್ತಾನದ ಜೈಶೆ ಮೊಹಮ್ಮದ್ ಸಂಘಟನೆ ಮುಖ್ಯಸ್ಥ  ಹಾಗೂ ಪಠಾಣ್’ಕೋಟ್ ವಾಯುನೆಲೆ ದಾಳಿಯ ಪ್ರಮುಖ ರೂವಾರಿ ಮಸೂದ್ ಅಝರ್’ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಪ್ರಕ್ರಿಯೆಗೆ ಚೀನಾ ಮತ್ತೊಮ್ಮೆ ತಡೆವೊಡ್ಡಿದೆ.

ವಿಶ್ವಸಂಸ್ಥೆ: ಪಾಕಿಸ್ತಾನದ ಜೈಶೆ ಮೊಹಮ್ಮದ್ ಸಂಘಟನೆ ಮುಖ್ಯಸ್ಥ  ಹಾಗೂ ಪಠಾಣ್’ಕೋಟ್ ವಾಯುನೆಲೆ ದಾಳಿಯ ಪ್ರಮುಖ ರೂವಾರಿ ಮಸೂದ್ ಅಝರ್’ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಪ್ರಕ್ರಿಯೆಗೆ ಚೀನಾ ಮತ್ತೊಮ್ಮೆ ತಡೆವೊಡ್ಡಿದೆ.

ವಿಶ್ವಸಂಸ್ಥೆಯಲ್ಲಿ ಅಮೆರಿಕಾ, ಬ್ರಿಟನ್ ಹಾಗೂ ಫ್ರಾನ್ಸ್’ಗಳು ಮಸೂದ್ ಅಝರ್’ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಭಾರತದ ಪ್ರಯತ್ನಕ್ಕೆ ಬೆಂಬಲಿಸಿದೆಯಾದರೂ, ಚೀನಾವು ಇನ್ನೊಮ್ಮೆ ವೀಟೋ ಪ್ರಯೋಗಿಸಿ, ಮೂರು ತಿಂಗಳಗಳ ಅವಧಿಗೆ ಪ್ರಸ್ತಾಪವನ್ನು ತಡೆಹಿಡಿದಿದೆ.

ಚೀನಾವು ತಡೆಯನ್ನು ವಿಸ್ತರಿಸದಿರುತ್ತಿದ್ದರೆ, ಮಸೂದ ಅಝರ್ ಹೆಸರು ತನ್ನಿಂತಾನೇ ಜಾಗತಿಕ ಉಗ್ರರ ಪಟ್ಟಿಯಲ್ಲಿ ಸೇರ್ಪಡೆಯಾಗುತ್ತಿತ್ತು. ಕಳೆದ ಫೆಬ್ರವರಿಯಲ್ಲೂ ಚೀನಾವು ಈ ಪ್ರಸ್ತಾಪಕ್ಕೆ ತಡೆಯನ್ನೊಡ್ಡಿತ್ತು. ಆ ತಡೆಯ ಅವಧಿ ನಿನ್ನೆ (ಆ.2 ಕ್ಕೆ) ಮುಗಿದಿರುವ ಬೆನ್ನಲ್ಲೆ ಚೀನಾ ಅದನ್ನು ಇನ್ನೂ 3 ತಿಂಗಳಗಳ ಅವಧಿಗೆ ಮುಂದುವರೆಸಿದೆ. ನ. 2 ರಂದು ಈ ಅವಧಿ ಮುಗಿಯಲಿದೆ.

ಭದ್ರತಾ ಮಂಡಳಿಯ ಅಲ್-ಕಾಯ್ದ ನಿರ್ಬಂಧ ಸಮಿತಿಯ ಈ ಕ್ರಮವನ್ನು ಖುದ್ದು ಭದ್ರತಾ ಮಂಡಳಿಯ ಸದಸ್ಯನಾಗಿರುವ ಚೀನಾವು ಕಳೆದ ವರ್ಷದಿಂದಲೂ ವೀಟೋ ಪ್ರಯೋಗಿಸಿ ತಡೆಯುತ್ತಿದೆ.

ಕಳೆದ ವರ್ಷ ಮಾರ್ಚ್’ನಲ್ಲಿ ಜಾಗತಿಕ ಉಗ್ರರ ಪಟ್ಟಿಯಲ್ಲಿ ಮಸೂದ್ ಅಝರ್’ನನ್ನು ಸೇರಿಸುವ ಭಾರತದ ಪ್ರಯತ್ನವನ್ನು ಸಮಿತಿಯ  15 ಸದಸ್ಯ-ದೇಶಗಳ ಪೈಕಿ 14 ದೇಶಗಳು ಬೆಂಬಲಿಸಿದ್ದರೂ, ಚೀನಾವು ಅದನ್ನು 6 ತಿಂಗಳುಗಳ ಅವಧಿಗೆ ತಡೆದಿತ್ತು.

ಒಮ್ಮೆ ಮಸೂದ್ ಅಝರ್ ಹೆಸರು ಜಾಗತಿಕ ಉಗ್ರರ ಪಟ್ಟಿಯಲ್ಲಿ ಸೇರ್ಪಡೆಗೊಂಡರೆ ಆತನ ಆಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು ಹಾಕಬಹುದಲ್ಲದೇ, ಆತನ ಪ್ರವಾಸಗಳ ನಿರ್ಬಂಧ ಹೇರಬಹುದಾಗಿದೆ.

click me!