
ಬೆಂಗಳೂರು: ಭಾರತ ಮತ್ತು ಅಮೆರಿಕದ ರಕ್ಷಣಾ ಸಂಬಂಧವು ಉಚ್ಛ್ರಾಯ ಸ್ಥಿತಿಯಲ್ಲಿದೆ. ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ರಕ್ಷಣಾ ವ್ಯವಹಾರವು 15 ಬಿಲಿಯನ್ ಡಾಲರ್ ಗಡಿ ದಾಟಿದೆ ಎಂದು ಅಮೆರಿಕದ ಹಂಗಾಮಿ ರಾಯಭಾರಿ ಮೇರಿಕೇ ಕಾರ್ಲ್ಸನ್ ಹೇಳಿದರು. ಕಳೆದ ವಾರ ನಗರದ ಯಲಹಂಕದಲ್ಲಿ ನಡೆದ ಏರೋ ಇಂಡಿಯಾ 2017 ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನದ ವೇಳೆ ಭಾರತ-ಅಮೆರಿಕದ ಸಹಭಾಗಿತ್ವದ ಪೆವಿಲಿಯನ್'ನ ಉದ್ಘಾಟನಾ ಸಮಾರಂಭದ ವೇಳೆ ಅವರು ಮಾತನಾಡುತ್ತಿದ್ದರು.
2017 ನ್ಯಾಷನಲ್ ಡಿಫೆನ್ಸ್ ಆಥರೈಸೇಶನ್ ಕಾಯ್ದೆಯಲ್ಲಿ ಭಾರತವು ಪ್ರಮುಖ ಡಿಫೆನ್ಸ್ ಪಾರ್ಟ್ನರ್ ಆಗಿದೆ. ಜೊತೆಗೆ, ರಕ್ಷಣಾ ತಂತ್ರಜ್ವಾನ ಮತ್ತು ವ್ಯಾಪಾರ ನೀತಿಯಲ್ಲಿ ಪ್ರಗತಿ ಆಗಿದೆ. ಇದರಿಂದಾಗಿ ದ್ವಿಪಕ್ಷೀಯ ಸಂಬಂಧ ಇನ್ನಷ್ಟು ಗಟ್ಟಿಗೊಂಡಿದೆ ಎಂದು ಮೇರಿಕೇ ಕಾರ್ಲ್ಸನ್ ಅಭಿಪ್ರಾಯಪಟ್ಟರು.
ಇದೇ ವೇಳೆ, ವೈಮಾನಿಕ ಪ್ರದರ್ಶನದಲ್ಲಿ ಅಮೆರಿಕದ 20 ಕಂಪನಿಗಳು ಪಾಲ್ಗೊಳ್ಳುತ್ತಿರುವುದಕ್ಕೆ ಅಮೆರಿಕದ ಹಂಗಾಮಿ ರಾಯಭಾರಿಯಾದ ಮೇರಿಕೇ ಸಂತಸ ವ್ಯಕ್ತಪಡಿಸಿದರು. "ಈ ಬಹುತೇಕ ಕಂಪನಿಗಳು ಭಾರತದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿವೆ. ಕೆಲವು ಕಂಪನಿಗಳು ಮಾರುಕಟ್ಟೆಗೆ ಇನ್ನೂ ಹೊಸದು. ಈ ಕಂಪನಿಗಳಿಂದ ಭಾರತದ ರಕ್ಷಣಾ ವಲಯಕ್ಕೆ ಪುಷ್ಟಿ ಸಿಗಬಹುದು" ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಅಷ್ಟೇ ಅಲ್ಲ, ಅತ್ಯಾಧುನಿಕ ರಕ್ಷಣಾ ಮತ್ತು ವೈಮಾನಿಕ ತಂತ್ರಜ್ಞಾನವನ್ನು ಜಂಟಿಯಾಗಿ ಅಭಿವೃದ್ಧಿಪಡಿಸಿ ಉತ್ಪಾದನೆ ನಡೆಸಲು ಭಾರತ ಮತ್ತು ಅಮೆರಿಕದ ಕಂಪನಿಗಳು ದಿನನಿತ್ಯ ಹೊಸ ಒಪ್ಪಂದಗಳಿಗೆ ಸಹಿಹಾಕುತ್ತಿರುವ ವಿಚಾರ ತಿಳಿದು ಹೆಮ್ಮೆ ಎನಿಸುತ್ತಿದೆ. ಇದರಿಂದ ಎರಡೂ ದೇಶಗಳಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿದೆ ಎಂದು ಮೇರಿಕೇ ಕಾರ್ಲ್ಸನ್ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.