ಮೋದಿ ಮಾತಿಗೂ ಮಣಿಯದ ನಾಯ್ಡು

By Suvarna Web DeskFirst Published Mar 9, 2018, 10:53 AM IST
Highlights

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ಹಿಂದೇಟು ಹಾಕಿದ್ದನ್ನು ಖಂಡಿಸಿ ನರೇಂದ್ರ ಮೋದಿ ಮಂತ್ರಿಮಂಡಲಕ್ಕೆ ತೆಲುಗುದೇಶಂ (ಟಿಡಿಪಿ) ಪಕ್ಷದ ಇಬ್ಬರು ಸಚಿವರು ಗುರುವಾರ ರಾಜೀನಾಮೆ ನೀಡಿದ್ದಾರೆ.

ನವದೆಹಲಿ: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ಹಿಂದೇಟು ಹಾಕಿದ್ದನ್ನು ಖಂಡಿಸಿ ನರೇಂದ್ರ ಮೋದಿ ಮಂತ್ರಿಮಂಡಲಕ್ಕೆ ತೆಲುಗುದೇಶಂ (ಟಿಡಿಪಿ) ಪಕ್ಷದ ಇಬ್ಬರು ಸಚಿವರು ಗುರುವಾರ ರಾಜೀನಾಮೆ ನೀಡಿದ್ದಾರೆ. ಇವರ ರಾಜೀನಾಮೆಯನ್ನು ಪ್ರಧಾನಿ ಮೋದಿ ತಕ್ಷಣವೇ ಅಂಗೀಕರಿಸಿದ್ದಾರೆ. ರಾಜೀನಾಮೆ ಹೊರತಾಗಿಯೂ ಎನ್‌ಡಿಎನಿಂದ ಟಿಡಿಪಿ ಹೊರಬಂದಿಲ್ಲ. ಎನ್‌ಡಿಎ ಅಂಗಪಕ್ಷವಾಗಿಯೇ ಟಿಡಿಪಿ ಮುಂದುವರಿಯಲಿದೆ.

ಮೋದಿ ಅವರ ಮಂತ್ರಿಮಂಡಲದಿಂದ ಹೊರಬರುವುದಾಗಿ ಬುಧವಾರ ರಾತ್ರಿಯೇ ತೆಲುಗುದೇಶಂ ಅಧ್ಯಕ್ಷ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಘೋಷಿಸಿದ್ದರು. ಆದರೆ ಸರ್ಕಾರದಲ್ಲಿ ಟಿಡಿಪಿಯನ್ನು ಉಳಿಸಿಕೊಳ್ಳುವ ಕೊನೆಯ ಭಾಗವಾಗಿ ಗುರುವಾರ ಸಂಜೆ ಪ್ರಧಾನಮಂತ್ರಿಗಳು ನಾಯ್ಡು ಅವರ ಸುಮಾರು 20 ನಿಮಿಷ ಕಾಲ ದೂರವಾಣಿಯಲ್ಲಿ ಚರ್ಚಿಸಿ ಮನವೊಲಿಸಲು ಯತ್ನಿಸಿದರು. ಆದರೆ ‘ನಿರ್ಧಾರ ಕೈಗೊಂಡಾಗಿದ್ದು ಇನ್ನು ಹಿಂದೆ ಸರಿವ ಪ್ರಶ್ನೆಯೇ ಇಲ್ಲ’ ಎಂದು ನಾಯ್ಡು ಖಡಾಖಂಡಿತವಾಗಿ ಹೇಳಿದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಿಮಾನಯಾನ ಮಂತ್ರಿ ಅಶೋಕ್‌ ಗಜಪತಿರಾಜು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ವೈ.ಎಸ್‌. ಚೌಧರಿ ಅವರು ಗುರುವಾರ ಸಂಜೆ 6 ಗಂಟೆಗೆ ಪ್ರಧಾನಿ ನಿವಾಸಕ್ಕೆ ತೆರಳಿ ತ್ಯಾಗಪತ್ರ ಸಮರ್ಪಿಸಿದರು.

ರಾಜೀನಾಮೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈ.ಎಸ್‌. ಚೌಧರಿ, ‘ಮಂತ್ರಿಮಂಡಲಕ್ಕೆ ರಾಜೀನಾಮೆ ನೀಡಿದರೂ ಎನ್‌ಡಿಎ ಭಾಗವಾಗಿ ತೆಲುಗುದೇಶಂ ಪಕ್ಷ ಮುಂದುವರಿಯಲಿದೆ. ಅನಿವಾರ್ಯ ಕಾರಣದಿಂದ ರಾಜೀನಾಮೆ ನೀಡುತ್ತಿದ್ದೇವೆ’ ಎಂದು ಹೇಳಿದರು.

‘ವಿಶೇಷ ಸ್ಥಾನಮಾನ ಎಂಬುದು ಆಂಧ್ರಪ್ರದೇಶದಲ್ಲಿ ಭಾವನಾತ್ಮಕ ವಿಷಯ. ವಿಶೇಷ ಸ್ಥಾನಮಾನ ಹಾಗೂ ಸಾಕಷ್ಟುಅನುದಾನವನ್ನು ಕೇಂದ್ರ ದಯಪಾಲಿಸದೇ ಇದ್ದುದಕ್ಕೆ ನಮಗೆ ಅಸಮಾಧಾನವಿದೆ. ಆದರೆ ಹಾಗಂತ ಕೇಂದ್ರ ಸರ್ಕಾರವು ಆಂಧ್ರಕ್ಕೆ ಏನೂ ಕೊಟ್ಟೇ ಇಲ್ಲ ಎಂದು ಹೇಳಿದರೆ ತಪ್ಪಾಗುತ್ತದೆ’ ಎಂದು ಅವರು ಸ್ಪಷ್ಟಪಡಿಸಿದರು.

click me!