
ನವದೆಹಲಿ: ಅಧ್ಯಕ್ಷೀಯ ಚುನಾವಣೆಗೆ ಸೋಮವಾರ ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ, ಅಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತವಾದ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ. ಆದರೆ ರಾಹುಲ್ ಮುಂದಿರುವ ಸವಾಲುಗಳೇನು?
1 ಕಾಂಗ್ರೆಸ್ಸಿನ ಹಿರಿಯ ತಲೆಗಳಿಗೆ ರಾಹುಲ್ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ಇರುವುದು ಸುಳ್ಳಲ್ಲ. ಹೀಗಾಗಿ ರಾಹುಲ್ ಅವರು ಯುವಕರು ಹಾಗೂ ಹಿರಿಯರ ನಡುವೆ ಸಮತೋಲನ ಸಾಧಿಸಬೇಕಾಗಿದೆ.
2 2014ರ ಲೋಕಸಭೆ ಚುನಾವಣೆಯಿಂದ ಈವರೆಗೆ ಕಾಂಗ್ರೆಸ್ ಸತತವಾಗಿ ಸೋಲುಗಳನ್ನು ಕಂಡಿದೆ. ಕಾರ್ಯಕರ್ತರು ನೈರ್ತಿಕ ಸ್ಥೈರ್ಯ ಕಳೆದುಕೊಂಡಿದ್ದಾರೆ. ಅವರನ್ನು ಹುರಿದುಂಬಿಸಿ ಪಕ್ಷವನ್ನು ಮೇಲಕ್ಕೆತ್ತಬೇಕಾಗಿದೆ.
3 ಮುಂದಿನ ವರ್ಷ ರಾಹುಲ್‌ಗೆ ನಿಜಕ್ಕೂ ಅಗ್ನಿಪರೀಕ್ಷೆ. ಕಾಂಗ್ರೆಸ್ ಆಳ್ವಿಕೆಯಲ್ಲಿರುವ ಕರ್ನಾಟಕವನ್ನು ಉಳಿಸಿಕೊಳ್ಳಬೇಕು. ಜತೆಗೆ ಬಿಜೆಪಿ ಆಳ್ವಿಕೆಯ ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನದಲ್ಲಿ ಗದ್ದುಗೆ ಹಿಡಿಯಬೇಕು.
4 ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ಅಧಿಕಾರಕ್ಕೇರಬೇಕಾದರೆ ರಾಜ್ಯ ಘಟಕಗಳನ್ನು ಬಲಪಡಿಸಬೇಕು. ಆದರೆ ನಾಯಕರ ಒಳಜಗಳ ಅದಕ್ಕೆ ಅಡ್ಡಿಯಾಗಿದೆ. ಇದನ್ನು ರಾಹುಲ್ ನಿರ್ವಹಿಸಬೇಕಾಗಿದೆ.
5 ಉತ್ತರಪ್ರದೇಶ, ಬಿಹಾರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಪಕ್ಷದ ಸ್ಥಿತಿ ಗಂಭೀರವಾಗಿದೆ.
6 ಮಧ್ಯಮವರ್ಗ, ಯುವಕರು ಹಾಗೂ ಶ್ರೀಸಾಮಾನ್ಯರು ಕಾಂಗ್ರೆಸ್ಸಿಂದ ದೂರವಾಗಿದ್ದಾರೆ. ಅವರನ್ನು ಮತ್ತೆ ಪಕ್ಷದತ್ತ ಆಕರ್ಷಿಸಬೇಕಾಗಿದೆ.
7 2019ರ ಲೋಕಸಭೆ ಚುನಾವಣೆಗೆ ಕೇವಲ 16 ತಿಂಗಳುಗಳು ಇವೆ. ಅಷ್ಟರಲ್ಲಿ ಬಿಜೆಪಿಗೆ ತಾನು ಪ್ರಬಲ ಪರ್ಯಾಯ ಪಕ್ಷ ಎಂಬುದನ್ನು ಕಾಂಗ್ರೆಸ್ ನಿರೂಪಿಸಬೇಕು.
8 ಬಿಜೆಪಿಯನ್ನು ಏಕಾಂಗಿಯಾಗಿ ಮಣಿಸುವುದು ಸದ್ಯದ ಮಟ್ಟಿಗೆ ಕಠಿಣ ಗುರಿಯಾಗಿರುವುದರಿಂದ ಹಾಗೂ ಪ್ರತಿಪಕ್ಷಗಳ ನಡುವೆ ಮತವಿಭಜನೆ ತಪ್ಪಿಸುವ ಸಲುವಾಗಿ ಮಿತ್ರ ಪಕ್ಷಗಳನ್ನು ಹುಡುಕಬೇಕು.
9 2004ರಲ್ಲಿ ಸೋನಿಯಾ ಗಾಂಧಿ ಅವರು ಸಮಾನ ಮನಸ್ಕ ಪಕ್ಷಗಳನ್ನು ಒಗ್ಗೂಡಿಸಿದ್ದರು. ಈಗ ರಾಹುಲ್ ಕೂಡ ತಾಳ್ಮೆಯಿಂದ ಅದೇ ಕೆಲಸ ನಿರ್ವಹಿಸಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.