ಚೈತ್ರಾ ಮತ್ತು ಆಕೆಯ ಬೆಂಬಲಿಗರನ್ನು ಸುಬ್ರಹ್ಮಣ್ಯ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ಸುಳ್ಯ ನ್ಯಾಯಾಲಯ ಚೈತ್ರಾ ಸೇರಿ 7 ಮಂದಿಗೆ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಸುಬ್ರಹ್ಮಣ್ಯ : ಹಿಂದೂಪರ ವಾಗ್ಮಿ ಚೈತ್ರಾ ಕುಂದಾಪುರ ಮತ್ತವರ ಬೆಂಬಲಿಗರು ಬುಧವಾರ ರಾತ್ರಿ ಸುಳ್ಯದ ಹಿಂದೂಪರ ಸಂಘಟನೆ ಕಾರ್ಯಕರ್ತರೊಬ್ಬರ ಮೇಲೆ ನಡೆಸಿದ ಹಲ್ಲೆ ಖಂಡಿಸಿ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡಿದ್ದಾರೆಂದು ಆರೋಪಿಸಿ ಕುಕ್ಕೆ ಸುಬ್ರಹ್ಮಣ್ಯ ಪೇಟೆ ವರ್ತಕರು ಗುರುವಾರ ಸಂಪೂರ್ಣ ಬಂದ್ ನಡೆಸಿದರು. ಹಲ್ಲೆ ಘಟನೆಗೆ ಸಂಬಂಧಿಸಿ ಸ್ಥಳೀಯ ನ್ಯಾಯಾಲಯವು ಚೈತ್ರಾ ಕುಂದಾಪುರ ಸೇರಿದಂತೆ 7 ಮಂದಿಗೆ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಬೆಳಗ್ಗಿನಿಂದ ಸಂಜೆಯ ತನಕ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಂಗಡಿ ಮುಂಗಟ್ಟುಗಳೆಲ್ಲಾ ಬಾಗಿಲು ಮುಚ್ಚಿದ್ದು, ಬಂದ್ ಸಂಪೂರ್ಣ ಶಾಂತಿಯುತವಾಗಿತ್ತು. ಕ್ಷೇತ್ರಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆ ಆಗಲಿಲ್ಲ. ದೇವಸ್ಥಾನ ವತಿಯಿಂದ ಭಕ್ತರಿಗೆ ಎಂದಿನಂತೆ ಉಪಾಹಾರ, ಭೋಜನ ವ್ಯವಸ್ಥೆ ಮಾಡಲಾಗಿತ್ತು.
undefined
ಚೈತ್ರಾ ಸೇರಿ 7 ಮಂದಿ ಬಂಧನ: ಕುಕ್ಕೆ ದೇವಸ್ಥಾನದಲ್ಲಿ ನಡೆಯುವ ಸರ್ಪ ಸಂಸ್ಕಾರ ವಿಚಾರವಾಗಿ ಚೈತ್ರಾ ಇತ್ತೀಚೆಗೆ ನೀಡಿದ್ದ ಹೇಳಿಕೆ ವಿಚಾರವಾಗಿ ಸ್ಥಳೀಯ ಹಿಂದೂ ಸಂಘಟನೆ ವಿರೋಧ ವ್ಯಕ್ತಪಡಿಸಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಭಾರಿ ಚರ್ಚೆ ನಡೆಯುತ್ತಿತ್ತು. ಇದು ತಾರಕಕ್ಕೇರಿ ಆಕ್ರೋಶಗೊಂಡ ಚೈತ್ರಾ ಕುಂದಾಪುರ ಬುಧವಾರ ಸಂಜೆ ತನ್ನ ಬೆಂಬಲಿಗರ ಜೊತೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಹಿಂದೂ ಜಾಗರಣ ವೇದಿಕೆಯ ತಾಲೂಕು ಕಾರ್ಯದರ್ಶಿ ಗುರುಪ್ರಸಾದ್ ಪಂಜ ಹಾಗೂ ಕೆಲವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಮತ್ತು ಆಕೆಯ ಬೆಂಬಲಿಗರನ್ನು ಸುಬ್ರಹ್ಮಣ್ಯ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ಸುಳ್ಯ ನ್ಯಾಯಾಲಯ ಚೈತ್ರಾ ಸೇರಿ 7 ಮಂದಿಗೆ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಘಟನೆಗೆ ಸಂಬಂಧಿಸಿ ಗುರುಪ್ರಸಾದ್ ಪಂಜ ವಿರುದ್ಧ ಕಳ್ಳತನ ಹಾಗೂ ಮಾನಭಂಗ ಯತ್ನ ಸಂಬಂಧ ಪ್ರತಿದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.