
ನವದೆಹಲಿ(ಏ. 19): ವಿವಿಪ್ಯಾಟ್'ಗಳಿರುವ ನೂತನ ವೋಟಿಂಗ್ ಮಷೀನ್'ಗಳ ಖರೀದಿಗೆ ಕೇಂದ್ರ ಸರಕಾರ 3 ಸಾವಿರ ಕೋಟಿ ರೂ ಬಿಡುಗಡೆ ಮಾಡಲು ನಿರ್ಧರಿಸಿದೆ. ಇವಿಎಂ ಮೆಷೀನ್'ಗಳ ದುರುಪಯೋಗ ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ VVPAT ಮೆಷೀನ್'ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ವಿತ್ತ ಸಚಿವ ಅರುಣ್ ಜೇಟ್ಲಿ ಇಂದು ಸಂಜೆ ಅಧಿಕೃತವಾಗಿ ಪ್ರಕಟಿಸಲಿದ್ದಾರೆ.
ವಿವಿಪ್ಯಾಟ್ ಮೆಷೀನ್'ಗಳನ್ನು ಹಂತಹಂತವಾಗಿ ಅಳವಡಿಸಬೇಕೆಂದು ಸುಪ್ರೀಂಕೋರ್ಟ್ 2013ರಲ್ಲೇ ಆದೇಶ ಹೊರಡಿಸಿತ್ತು. 2019ರ ಲೋಕಸಭೆ ಚುನಾವಣೆಯನ್ನು ಸಂಪೂರ್ಣವಾಗಿ ಈ ನೂತನ ಮತಯಂತ್ರಗಳಿಂದಲೇ ನಡೆಸಬೇಕು ಎಂದು ಕೋರ್ಟ್ ಆದೇಶವಿದೆ. ಆದರೆ, ಬಹಳಷ್ಟು ಕಡೆ ಇನ್ನೂ ಹಳೆಯ ಇವಿಎಂ ಮೆಷೀನ್'ಗಳೇ ಇವೆ. ಕಳೆದ ವಾರವಷ್ಟೇ ಈ ವಿಷಯವನ್ನು ಪ್ರಸ್ತಾಪಿಸಿದ ಸುಪ್ರೀಂಕೋರ್ಟ್, ನೂತನ ವೋಟಿಂಗ್ ಮೆಷೀನ್'ಗಳ ಅಳವಡಿಕೆ ಕಾರ್ಯ ಯಾಕೆ ವಿಳಂಬವಾಗಿದೆ ಎಂದು ಕಾರಣಕೊಡುವಂತೆ ಚುನಾವಣಾ ಆಯೋಗ ಮತ್ತು ಕೇಂದ್ರ ಸರಕಾರಕ್ಕೆ ವಿವರಣೆ ಕೇಳಿದೆ.
ಏನಿದು ವಿವಿಪ್ಯಾಟ್ ಮೆಷೀನ್?
ವಿವಿಪ್ಯಾಟ್(VVPAT) - ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರೇಲ್. ಮತದಾರ ವೋಟ್ ಹಾಕಿದಾಗ ರೆಸಿಪ್ಟ್ ತೋರಿಸುತ್ತದೆ ಈ ಮತಯಂತ್ರ. ವೋಟ್ ಹಾಕಲು ಬಟನ್ ಒತ್ತಿದಾಗ, ಆ ಅಭ್ಯರ್ಥಿಯ ಪಕ್ಷದ ಚಿಹ್ನೆ ತೋರಿಸುವ ಒಂದು ಕಾಗದ ಕಾಣಿಸುತ್ತದೆ. ಒಂದೆರಡು ನಿಮಿಷ ಮತದಾರನಿಗೆ ಕಾಣಿಸುವ ಇದು ಬಳಿಕ ಸೀಲ್ಡ್ ಬಾಕ್ಸ್'ಗೆ ಹೋಗಿ ಬೀಳುತ್ತದೆ. ಇದರಿಂದ ಮತಯಂತ್ರದ ದುರುಪಯೋಗ ಕಡಿಮೆಸಾಧ್ಯವೆನ್ನಲಾಗಿದೆ.
ಈಗಿರುವ ಇವಿಎಂ ಮೆಷೀನ್'ಗಳನ್ನು ತಾಂತ್ರಿಕವಾಗಿ ದುರುಪಯೋಗ ಮಾಡಿಕೊಳ್ಳಬಹುದು ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಕಾಂಗ್ರೆಸ್, ಆಮ್ ಆದ್ಮಿ, ಬಿಎಸ್'ಪಿ ಮೊದಲಾದ ಪಕ್ಷಗಳು ಇವಿಎಂ ಬಗ್ಗೆ ತೀವ್ರ ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.