ಬೆಲೆ ಏರಿಕೆಗೆ ಬ್ರೇಕ್‌; ಈರುಳ್ಳಿ ರಫ್ತಿಗೆ ಕೇಂದ್ರದ ನಿಷೇಧ

By Web DeskFirst Published Sep 30, 2019, 8:09 AM IST
Highlights

80 ರು. ತಲುಪಿದ ಕೆಜಿ ಈರುಳ್ಳಿ ಬೆಲೆ | ನೆರೆಯಿಂದಾಗಿ ಮಹಾರಾಷ್ಟ್ರ, ಕರ್ನಾಟಕದಲ್ಲಿ ಇಳುವರಿ ಕುಸಿತ | ವ್ಯಾಪಾರಿಗಳಿಗೆ ದಾಸ್ತಾನು ಸಂಗ್ರಹದ ಮೇಲೂ ನಿರ್ಬಂಧ ಹೇರಿಕೆ |  ಬೆಲೆ ಗಗನಕ್ಕೇರಿ ನಿಂತ ಹಿನ್ನೆಲೆಯಲ್ಲಿ ಕೇಂದ್ರದಿಂದ ಪರಿಹಾರ ಕ್ರಮ

ನವದೆಹಲಿ (ಸೆ. 30): ರಾಜಧಾನಿ ದೆಹಲಿ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಈರುಳ್ಳಿ ಬೆಲೆ ಕೆಜಿಗೆ 80-90 ರು.ಗೆ ತಲುಪಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಗ್ರಾಹಕರ ಹಿತ ಕಾಪಾಡುವ ನಿಟ್ಟಿನಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ವಿದೇಶಗಳಿಗೆ ಈರುಳ್ಳಿ ರಫ್ತು ಮಾಡುವುದಕ್ಕೆ ನಿಷೇಧ ಹೇರಿದೆ. ಅಲ್ಲದೆ ವ್ಯಾಪಾರಿಗಳು ಈರುಳ್ಳಿ ದಾಸ್ತಾನು ಮಾಡುವ ಪ್ರಮಾಣಕ್ಕೂ ಮಿತಿ ಹೇರಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ, ದೇಶದಲ್ಲಿ ಈರುಳ್ಳಿ ಪೂರೈಕೆ ಸುಗಮವಾಗುವವರೆಗೂ ವಿದೇಶಗಳಿಗೆ ಈರುಳ್ಳಿ ರಫ್ತಿಗೆ ನಿಷೇಧ ಹೇರಲಾಗುತ್ತಿದೆ. ಜೊತೆಗೆ ಚಿಲ್ಲರೆ ವ್ಯಾಪಾರಿಗಳಿಗೆ ಗರಿಷ್ಠ 100 ಕ್ವಿಂಟಾಲ್‌ ಮತ್ತು ಸಗಟು ವ್ಯಾಪಾರಿಗಳಿಗೆ ಗರಿಷ್ಠ 500 ಕ್ವಿಂಟಾಲ್‌ ಮಾತ್ರವೇ ಈರುಳ್ಳಿ ದಾಸ್ತಾನು ಮಾಡಲು ಅವಕಾಶ ನೀಡಲಾಗುತ್ತಿದೆ. ಈ ನಿಯಮ ಮೀರಿದಲ್ಲಿ ಅಂಥ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.

ಇದೇ ವೇಳೆ ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಿಗೆ ಪ್ರತಿ ಟನ್‌ಗೆ 850 ಡಾಲರ್‌ಗಿಂತ ಕಡಿಮೆ ಬೆಲೆಗೆ ರಫ್ತು ಮಾಡುವಂತಿಲ್ಲ ಎಂದು ಸೆ.13ರಂದೇ ಆದೇಶ ಹೊರಡಿಸದ್ದರೂ, ಕೆಲವು ರಫ್ತುಗಾರರು ಈಗಲೂ ಅಲ್ಲಿಗೆ ಕಡಿಮೆ ಬೆಲೆಗೆ ರಫ್ತು ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.

ಹೆಚ್ಚು ಈರುಳ್ಳಿ ಬೆಳೆವ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಭಾರೀ ಪ್ರವಾಹದ ಕಾರಣ, ನಿರೀಕ್ಷಿತ ಪ್ರಮಾಣದ ಈರುಳ್ಳಿ ಬೆಳೆಯಲಾಗಿಲ್ಲ. ಹೀಗಾಗಿ ಮಾರುಕಟ್ಟೆಗೆ ಪೂರೈಕೆ ಕುಂಠಿತವಾಗಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.

click me!