ರಾಜ್ಯದಲ್ಲಿ ನಾಳೆಯಿಂದ ಬರ ಅಧ್ಯಯನ

Published : Nov 02, 2016, 07:51 AM ISTUpdated : Apr 11, 2018, 12:44 PM IST
ರಾಜ್ಯದಲ್ಲಿ ನಾಳೆಯಿಂದ ಬರ ಅಧ್ಯಯನ

ಸಾರಾಂಶ

ರಾಜ್ಯ ಅಧಿಕಾರಿಗಳು ಈಗಾಗಲೇ ರಾಜ್ಯದ ಬರ ಪೀಡಿತ ಪ್ರದೇಶಗಳ ವಿವರ ನೀಡಿದ್ದು, ಇದನ್ನಾಧರಿಸಿ ಅವರು ತಮ್ಮಿಚ್ಛೆಯಂತೆ ಸ್ಥಳ ಆಯ್ಕೆ ಮಾಡಿಕೊಳ್ಳಲಿದ್ದಾರೆ. ಮೂರು ತಂಡಗಳನ್ನು ರಚಿಸಿಕೊಂಡು ಉತ್ತರ, ದಕ್ಷಿಣ ಮತ್ತು ಕೇಂದ್ರ ಭಾಗಗಳಿಗೆ ಪ್ರತ್ಯೇಕವಾಗಿ ತೆರಳಲು ಸಿದ್ಧತೆ ಮಾಡಿಕೊಳ್ಳ​ಲಿದ್ದಾರೆ.

ಬೆಂಗಳೂರು (ನ.02): ಕೇಂದ್ರ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ನೀರಜಾ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ಬೆಳಗ್ಗಿನಿಂದ ಬರ ಅಧ್ಯಯನ ನಡೆಸಲು ಆರಂಭಿಸಲಿದೆ.

ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ಅಧ್ಯಯನ ನಡೆಸಲು ನೇಮಕಗೊಂಡಿರುವ 10 ಅಧಿಕಾರಿಗಳ ಕೇಂದ್ರ ತಂಡ ಬುಧವಾರ ಬೆಂಗಳೂರಿಗೆ ಆಗಮಿಸಿ ರಾಜ್ಯ ಕಂದಾಯ ಇಲಾಖೆ ಮತ್ತು ಇತರ ಇಲಾಖೆಗಳ ಅಧಿಕಾರಿಗಳ ಜತೆ ಸಭೆ ನಡೆಸಲಿದೆ. ನಂತರ ರಾಜ್ಯದ ಯಾವ ಭಾಗಗಳಲ್ಲಿ ಬರ ಅಧ್ಯಯನ ನಡೆಸಬೇಕೆನ್ನುವ ಬಗ್ಗೆ ಪ್ರವಾಸ ಕಾರ್ಯಕ್ರಮ ರೂಪಿಸಿಕೊಳ್ಳಲಿದ್ದಾರೆ.

ರಾಜ್ಯ ಅಧಿಕಾರಿಗಳು ಈಗಾಗಲೇ ರಾಜ್ಯದ ಬರ ಪೀಡಿತ ಪ್ರದೇಶಗಳ ವಿವರ ನೀಡಿದ್ದು, ಇದನ್ನಾಧರಿಸಿ ಅವರು ತಮ್ಮಿಚ್ಛೆಯಂತೆ ಸ್ಥಳ ಆಯ್ಕೆ ಮಾಡಿಕೊಳ್ಳಲಿದ್ದಾರೆ. ಮೂರು ತಂಡಗಳನ್ನು ರಚಿಸಿಕೊಂಡು ಉತ್ತರ, ದಕ್ಷಿಣ ಮತ್ತು ಕೇಂದ್ರ ಭಾಗಗಳಿಗೆ ಪ್ರತ್ಯೇಕವಾಗಿ ತೆರಳಲು ಸಿದ್ಧತೆ ಮಾಡಿಕೊಳ್ಳ​ಲಿದ್ದಾರೆ.

ಒಟ್ಟಾರೆ ಗುರುವಾರದಿಂದ ಮೂರುದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳ ಪ್ರವಾಸ ನಡೆಸಲಿರುವ ನೀರಜಾ ನೇತೃದಲ್ಲಿನ ತಂಡ ನ.6ರಂದು ದಿಲ್ಲಿಗೆ ವಾಪಸಾಗಲಿದೆ. ನಂತರ ಕೇಂದ್ರ ಸರ್ಕಾರಕ್ಕೆ ಅಧ್ಯಯನ ವರದಿ ಸಲ್ಲಿಸಲಿದೆ.

ಸದ್ಯದ ಕಾರ್ಯಸೂಚಿಯಂತೆ ಕೇಂದ್ರ ತಂಡದ ಮೊದಲ ತಂಡ ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ಗದಗ, ಧಾರವಾಡ, ಹಾವೇರಿ ಮತ್ತು ದಾವಣಗೆರೆ ಜಿಲ್ಲೆಗಳಿಗೆ ಭೇಟಿ ಪರಿಶೀಲನೆ ನಡೆಸಲಿದೆ. ಎರಡನೇ ತಂಡ ರಾಮನಗರ, ಚಾಮರಾಜ​ನಗರ, ಮೈಸೂರು, ಹಾಸನ, ಮಂಡ್ಯ ಜಿಲ್ಲೆಗಳಲ್ಲಿ ಸಂಚರಿಸಲಿದೆ ಹಾಗೂ ಮೂರನೇ ತಂಡ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಅಧ್ಯಯನ ನಡೆಸಲಿದೆ. ನಂತರದಲ್ಲಿ ಕಾರ್ಯಕ್ರಮದಲ್ಲಿ ಬದಲಾವಣೆ ಸಾಧ್ಯತೆಯೂ ಇದೆ.

ಅಧ್ಯಯನ ತಂಡಗಳಿಗೆ ಮಾಹಿತಿ ನೀಡಲು ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ತಂಡ ರಚಿಸಲಾಗಿದೆ. ಕೇಂದ್ರದ ಮೂರು ತಂಡಗಳು ಬೆಳೆಹಾನಿ ಉಂಟಾಗಿರುವ ಪ್ರದೇಶಗಳಲ್ಲಿ ಪ್ರವಾಸ ಮಾಡಲಿದ್ದು, ತಂಡಗಳಿಗೆ ಮಾಹಿತಿ ನೀಡಲು ಕೃಷಿ, ತೋಟ​ಗಾ​ರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿ​ಗಳ​ನ್ನೊ​ಳ​ಗೊಂಡ 3 ತಂಡಗಳು ಸಿದ್ಧತೆ ನಡೆಸಿವೆ. ಕೇಂದ್ರ ತಂಡಗಳು ಮೊದಲಿಗೆ ಮುಖ್ಯ ಕಾರ್ಯದರ್ಶಿ ಸುಭಾಷ್‌ ಚಂದ್ರ ಕುಂಟಿಯಾ ಅವರ ಜತೆ ಸಮಾಲೋಚನೆ ನಡೆಸಿ ಅನಂತರ ಬರ ಹಾಗೂ ಅತಿವೃಷ್ಟಿಪೀಡಿತ ಪ್ರದೇಶಗಳಿಗೆ ತೆರಳಲಿವೆ.

ಬರ ಎದುರಿಸಲು ಸರ್ಕಾರ ಸಿದ್ಧ

ಬರ ಪರಿಸ್ಥಿತಿ ಎದುರಿಸಲು ಸರ್ಕಾರ ಸಿದ್ಧವಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ 139 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸ​ಲಾ​ಗಿ​ದೆ. ಮುಂದಿನ ದಿನಗಳಲ್ಲಿ ಬರ ಪರಿಸ್ಥಿತಿ ಹೆಚ್ಚುವ ಸೂಚನೆ ಇದ್ದು, ಇದನ್ನು ಸಮರ್ಪಕವಾಗಿ ಎದುರಿಸಲು ಸರ್ಕಾರ ಪೂರ್ವ ಸಿದ್ಧತೆ ನಡೆಸಿದೆ ಎಂದರು.

ಹೊಸ ತಾಲೂಕು ರಚನೆ ಸದ್ಯಕ್ಕೆ ಇಲ್ಲ. ಹೊಸದಾಗಿ 30 ತಾಲೂಕುಗಳ ರಚನೆಗೆ ಪ್ರಸ್ತಾವ ಇದ್ದು, ಮುಂಬರುವ ಬಜೆಟ್‌ನಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುವುದು.
ಕಾಗೋಡು ತಿಮ್ಮಪ್ಪ ಕಂದಾಯ ಸಚಿವ

ಅ.27ರಂದು ಕೇಂದ್ರ ಕೃಷಿ ಸಚಿವರನ್ನು ಭೇಟಿಯಾಗಿ ರಾಜ್ಯದಲ್ಲಿ ಸುಮಾರು ರೂ.15 ಸಾವಿರ ಕೋಟಿ ಮೌಲ್ಯದ ಬೆಳೆ ನಷ್ಟವಾಗಿರುವುದನ್ನು ವಿವರಿಸಿ, ಹೆಚ್ಚಿನ ಪರಿಹಾರಕ್ಕೆ ಮನವಿ ಸಲ್ಲಿಸಲಾಗಿದೆ. ರೂ.4 ಸಾವಿರ ಕೋಟಿ ಕೇಂದ್ರದಿಂದ ಬರುವ ನಿರೀಕ್ಷೆ ಇದೆ. ಕೇಂದ್ರದಿಂದ ಅಧಿಕಾರಿಗಳ ತಂಡ ನ.2ರಂದು ರಾಜ್ಯಕ್ಕೆ ಬರಲಿದ್ದು, 3 ಪ್ರತ್ಯೇಕ ತಂಡಗಳಲ್ಲಿ ಬರ ವಿ​ರುವ ತಾಲೂಕುಗಳಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿಗಳು ಸೇರಿ ಸಂಬಂಧಪಟ್ಟಅಧಿಕಾರಿಗಳು ಇರಲಿದ್ದು, ಕೇಂದ್ರ ತಂಡಕ್ಕೆ ಅಗತ್ಯ ಮಾಹಿತಿ ಒದಗಿಸಲಿದ್ದಾರೆ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು
ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ