
ನವದೆಹಲಿ: ವ್ಯಕ್ತಿಯ ಗುರುತಿನ ಮಾಹಿತಿ ಒದಗಿಸಲು ನೆರವು ನೀಡುವ ಡಿಎನ್‌ಎ ಬ್ಯಾಂಕ್ ಅನ್ನು ದೇಶಾದ್ಯಂತ ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ತನ್ನ ಅನುಮೋದನೆ ನೀಡಿದೆ. ಡಿಎನ್‌ಎ ಪ್ರೊಫೈಲ್, ಡಿಎನ್‌ಎ ಮಾದರಿ ಮತ್ತು ದಾಖಲೆಗಳನ್ನು ವ್ಯಕ್ತಿಯೊಬ್ಬನ ಗುರುತಿಸುವಿಕೆ ಹೊರತಾಗಿ ಬೇರಾವುದೇ ಉದ್ದೇಶಕ್ಕೆ ಬಳಸುವಂತಿಲ್ಲ ಎಂಬ ಅಂಶವನ್ನು ಈ ಪ್ರಸ್ತಾವಿತ ಮಸೂದೆ ಒಳಗೊಂಡಿದೆ.
ಒಂದು ವೇಳೆ ಈ ಕಾಯ್ದೆಯಡಿ ಡಿಎನ್‌ಎ ಮಾಹಿತಿಗಳನ್ನು ಸೋರಿಕೆ ಮಾಡಿದವರಿಗೆ 3 ವರ್ಷದವರೆಗೂ ಜೈಲು ಮತ್ತು 1 ಲಕ್ಷ ರು. ದಂಡ ವಿಧಿಸಲಾಗುತ್ತದೆ. ಅಲ್ಲದೆ, ಯಾವುದೇ ವ್ಯಕ್ತಿಯ ಡಿಎನ್‌ಎ ಮಾಹಿತಿಗಳನ್ನು ಅಕ್ರಮವಾಗಿ ಪಡೆಯಲು ಯತ್ನಿಸುವವರ ವಿರುದ್ಧವೂ ಇದೇ ರೀತಿಯ ಕ್ರಮ ಕೈಗೊಳ್ಳಲು ನೂತನ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಮಸೂದೆಯನ್ನು ಜು.18ರಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನದ ವೇಳೆ ಮಂಡಿಸಲು ನಿರ್ಧರಿಸಲಾಗಿದೆ.
ದೇಶದಲ್ಲಿನ ಯಾವುದೇ ಪ್ರಕರಣದ ಆರೋಪಿಗಳು, ಶಂಕಿತರು, ಸಂತ್ರಸ್ತರು, ನಾಪತ್ತೆಯಾದವರ ಗುರುತಿಸುವಿಕೆ ಅಥವಾ ಪತ್ತೆಗಾಗಿ ದೇಶದಲ್ಲಿ ಡಿಎನ್‌ಎ ಡೇಟಾ ಬ್ಯಾಂಕ್ ಇಲ್ಲ ಎಂಬುದಾಗಿ ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಈ ಬಗ್ಗೆ ವಿಚಾರಣೆ ವೇಳೆ ಮುಂಬರುವ ಮುಂಗಾರು ಅಧಿವೇಶನದ ವೇಳೆ ಈ ವಿಚಾರಕ್ಕೆ ಸಂಬಂಧಿಸಿದ ವಿದೇಯಕ ಮಂಡಿಸುವುದಾಗಿ ಸುಪ್ರೀಂಗೆ ಕೇಂದ್ರ ಸರ್ಕಾರ ಹೇಳಿತ್ತು.
ಈ ಕುರಿತು ಆದಷ್ಟುತ್ವರಿತವಾಗಿ ಕಾನೂನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಸೂಚಿಸಿತ್ತು. ಅದರಂತೆ ದೇಶದಲ್ಲಿನ ಯಾವುದೇ ಪ್ರಕರಣದ ಆರೋಪಿಗಳು, ಶಂಕಿತರು, ಸಂತ್ರಸ್ತರು, ನಾಪತ್ತೆಯಾದವರು ಸೇರಿದಂತೆ ಇತರರ ಗುರುತಿಸುವಿಕೆಗಾಗಿ ರಾಷ್ಟ್ರೀಯ ಮತ್ತು ಪ್ರಾದೇಶಿಕವಾಗಿ ಡಿಎನ್‌ಎ ದಾಖಲಾತಿಯ ಬ್ಯಾಂಕ್‌ಗಳನ್ನು ಸ್ಥಾಪಿಸಬೇಕು ಎಂಬುದಾಗಿ ಇತ್ತೀಚೆಗಷ್ಟೇ ಕಾನೂನು ಆಯೋಗ ವಿದೇಯಕವನ್ನು ರಚಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.