
ನವದೆಹಲಿ(ಜುಲೈ 22): ಸೇನೆಗೆ ಅಗತ್ಯವಾಗಿರುವಷ್ಟು ಪ್ರಮಾಣದಲ್ಲಿ ಯುದ್ಧ ಸಾಮಗ್ರಿಗಳನ್ನು ಪೂರೈಸಲು ವಿಫಲವಾಗಿದೆ ಎಂದು ಮಹಾಲೇಖಪಾಲ ವರದಿಯಲ್ಲಿ ಛೀಮಾರಿ ಹಾಕಿಸಿಕೊಂಡಿರುವ ಭಾರತೀಯ ಆಯುಧ ತಯಾರಿಕಾ ಮಂಡಳಿ ಈಗ ಇನ್ನೊಂದು ಗುರುತರ ಆರೋಪ ಎದುರಿಸುತ್ತಿದೆ. ಜಬಲ್'ಪುರದ ಆಯುಧ ತಯಾರಿಕಾ ಕಾರ್ಖಾನೆಯು ನಕಲಿ ಬಿಡಿಭಾಗಗಳನ್ನು ಖರೀದಿಸಿದೆ ಎಂದು ಸಿಬಿಐ ಆರೋಪಿಸಿದೆ. ಮಧ್ಯಪ್ರದೇಶದ ಆ ಗನ್ ಕ್ಯಾರಿಯೇಜ್ ಫ್ಯಾಕ್ಟರಿಯ ಕೆಲ ಅಧಿಕಾರಿಗಳು ಮತ್ತು ದಿಲ್ಲಿಯ ಸಿಧ್ ಸೇಲ್ಸ್ ಎಂಬ ಸಂಸ್ಥೆಯೊಂದರ ವಿರುದ್ಧ ಸಿಬಿಐ ಎಫ್'ಐಆರ್ ದಾಖಲಿಸಿದೆ.
ಮಧ್ಯಪ್ರದೇಶದ ಜಬಲ್'ಪುರ್'ನ ಈ ಸೇನಾ ಫ್ಯಾಕ್ಟರಿಯಲ್ಲಿ ಧನುಷ್ ಹೆಸರಿನ ಬೋಫೋರ್ಸ್ ಹೋವಿಟ್ಜರ್ ಗನ್'ಗಳ ತಯಾರಿಕೆಯಾಗುತ್ತದೆ. ಈ ಗನ್'ಗಳಿಗೆ ಬಿಡಿಭಾಗಗಳನ್ನು ಸಿದ್ಧ್ ಸೇಲ್ಸ್ ಸಂಸ್ಥೆ ಪೂರೈಕೆ ಮಾಡುತ್ತದೆ. ಆದರೆ, ಸಿದ್ಧ್ ಸಂಸ್ಥೆಯು ಮೇಡ್ ಇನ್ ಜರ್ಮನಿಯ ಉತ್ಪನ್ನ ಎಂದು ಹೇಳಿ ಚೀನಾದ ನಕಲಿ ಬೇರಿಂಗ್'ಗಳನ್ನು ಫ್ಯಾಕ್ಟರಿಗೆ ಸರಬರಾಜು ಮಾಡಿರುವುದು ಪತ್ತೆಯಾಗಿದೆ.
ಸೇನಾ ಫ್ಯಾಕ್ಟರಿಯ ಅಧಿಕಾರಿಗಳು ನಕಲಿ ಚೀನೀ ಬಿಡಿಭಾಗಗಳನ್ನು ಖರೀದಿಸಿದ್ದಷ್ಟೇ ಅಲ್ಲದೇ, ಬಿಲ್'ನಲ್ಲಿ ಹೆಚ್ಚು ಬೆಲೆ ಹಾಕಿ ಸರಕಾರಕ್ಕೂ ಟೊಪ್ಪಿ ಹಾಕಿದ್ದಾರೆ. 35 ಲಕ್ಷ ರೂಪಾಯಿ ಬೆಲೆ ಬಾಳುವ ಬೇರಿಂಗ್'ಗಳ ಮೌಲ್ಯವನ್ನು 53 ಲಕ್ಷಕ್ಕಿಂತ ಹೆಚ್ಚು ಬೆಲೆಯೇರಿಸಿ ಹಣವನ್ನು ತಮ್ಮ ಜೇಬಿಗೆ ಇಳಿಸಿಕೊಂಡಿದ್ದಾರೆ. ದಿಲ್ಲಿಯ ಕಂಪನಿ ತಿಳಿಸಿದ ಜರ್ಮನಿ ಸಂಸ್ಥೆಯು ಬೇರಿಂಗ್'ಗಳ ಉತ್ಪಾದನೆ ಮಾಡುವುದಿಲ್ಲ ಎಂಬ ಅಂಶ ಗೊತ್ತಾಗಿದೆ. ಈ ಬೇರಿಂಗ್'ಗಳು ಚೀನಾದ ಹೆನಾನ್ ಪ್ರಾಂತ್ಯದಲ್ಲಿ ತಯಾರಿಸಲ್ಪಟ್ಟು ಮೇಡ್ ಇನ್ ಜರ್ಮನಿ ಮುದ್ರೆಯೊಂದಿಗೆ ಭಾರತಕ್ಕೆ ರವಾನೆಯಾಗಿವೆ. ಸಿಬಿಐ ಇದೀಗ ಈ ಬಗ್ಗೆ ಕೂಲಂಕಷ ತನಿಖೆ ನಡೆಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.