
ಬೆಂಗಳೂರು : ಬಜೆಟ್ ಮಂಡಿಸಬೇಕೆ ಬೇಡವೇ, ಸಾಲಮನ್ನಾ ಮಾಡಬೇಕೆ ಅಥವಾ ಬೇಡವೇ ಎಂಬ ಆಡಳಿತಾತ್ಮಕ ನಿರ್ಧಾರಗಳ ಮೂಲಕ ಆರಂಭಗೊಂಡ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ನಡುವಿನ ಹಗ್ಗ-ಜಗ್ಗಾಟವು ಇದೀಗ ಈ ಇಬ್ಬರು ನಾಯಕರು ಪ್ರತಿನಿಧಿಸುವ ಸಮುದಾಯಗಳ ಸಂಘಟನೆಗಳು ಹಾಗೂ ಮಠಾಧಿಪತಿಗಳ ಮಧ್ಯಪ್ರವೇಶದ ಮೂಲಕ ಕುರುಬ ವರ್ಸಸ್ ಒಕ್ಕಲಿಗ ತಿಕ್ಕಾಟವಾಗಿ ಪರಿಣಮಿಸಿದೆ.
ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ನಡುವಿನ ತಿಕ್ಕಾಟವು ಆಡಳಿತಾತ್ಮಕ ಹಾಗೂ ನೀತಿ ನಿರೂಪಣೆ ವಿಚಾರವೇ ಮುಖ್ಯ ಕಾರಣವಾಗಿ ಮೇಲು ನೋಟಕ್ಕೆ ಕಂಡು ಬರುತ್ತಿದ್ದರೂ, ಈ ನಾಯಕರು ತಮ್ಮ ಸಮುದಾಯಗಳಿಗೆ ಸೇರಿದ ಅಧಿಕಾರಿವರ್ಗದ ಹಿತ ಕಾಯಲು ಮುಂದಾಗಿರುವುದರಿಂದ ಈ ಮೇಲಾಟಕ್ಕೆ ಜಾತಿ ಸಂಘರ್ಷದ ಆಯಾಮ ದೊರಕಿದೆ. ಪದೇ ಪದೇ ಮೈತ್ರಿ ಕೂಟ ಸರ್ಕಾರದ ಬಾಳುವಿಕೆ ಬಗ್ಗೆ ಪ್ರಶ್ನೆಯೆತ್ತುವ ಸಿದ್ದರಾಮಯ್ಯ ಅವರ ಧೋರಣೆ ಬಗ್ಗೆ ಕೆಲ ಒಕ್ಕಲಿಗ ಮಠಾಧಿಪತಿಗಳು ಕೆಂಡಾಮಂಡಲಗೊಂಡಿದ್ದರೆ, ಸಿದ್ದರಾಮಯ್ಯ ಅವರನ್ನು ಮೈತ್ರಿಕೂಟ ಸರ್ಕಾರದಲ್ಲಿ ನಿರ್ಲಕ್ಷಿಸಿದರೆ ಸಹಿಸುವುದಿಲ್ಲ ಎಂದು ಕುರುಬ ಸಮುದಾಯದ ಮಠಾಧಿಪತಿಗಳು ಎಚ್ಚರಿಕೆ ನೀಡುವ ಹಂತಕ್ಕೆ ಮುಟ್ಟಿದ್ದಾರೆ.
ಬುಧವಾರ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ನಂಜಾವಧೂತ ಸ್ವಾಮೀಜಿ ಅವರು, ಕುಮಾರಸ್ವಾಮಿ ಅವರ ಸರ್ಕಾರದ ವಿರುದ್ಧ ಪ್ರಹಾರಕ್ಕೆ ಮುಂದಾದರೆ ಅದನ್ನು ನಮ್ಮ ಸಮುದಾಯ ಕ್ಷಮಿಸುವುದಿಲ್ಲ. ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆಯನ್ನು ಕೇವಲ ಸಿದ್ದರಾಮಯ್ಯ ಅವರಿಗೆ ಮಾತ್ರವಲ್ಲದೆ, ರಾಷ್ಟ್ರಮಟ್ಟದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೂ ನೀಡಿದ್ದರು. ಜತೆಗೆ, ಕಾಂಗ್ರೆಸ್‌ನ ಪ್ರಮುಖ ಒಕ್ಕಲಿಗ ಮುಖಂಡ ಡಿ.ಕೆ. ಶಿವಕುಮಾರ್ ಅವರನ್ನು ಪಕ್ಷ ಮೀರಿ ನಿಂತು ಕುಮಾರಸ್ವಾಮಿ ಪರ ನಿಲ್ಲಬೇಕು ಎಂಬಂತಹ ಕರೆ ಕೂಡ ನೀಡಿದ್ದರು.
ಹೀಗೆ, ಕುಮಾರಸ್ವಾಮಿ ಪರವಾಗಿ ಒಕ್ಕಲಿಗ ಮಠಾಧೀಶರು ಬಹಿರಂಗ ಹೇಳಿಕೆ ನೀಡಿದ ಬೆನ್ನಲ್ಲೇ ಕುರುಬ ಸಮುದಾಯಕ್ಕೆ ಸೇರಿದ ಕಾಗಿನೆಲೆ ಮಹಾ ಸಂಸ್ಥಾನದ ಪೀಠಾಧ್ಯಕ್ಷ ನಿರಂಜನಾನಂದ ಪುರಿ ಸ್ವಾಮೀಜಿ ಅವರು ಗುರುವಾರ ಮಾತನಾಡಿ, ಸಿದ್ದರಾಮಯ್ಯ ಅವರನ್ನು ನಿರ್ಲಕ್ಷಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಮೂರು ಕಾಸಿನ ಕಿಮ್ಮತ್ತು ಇರುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಆ ಪಕ್ಷಕ್ಕೆ 15 ಸ್ಥಾನವೂ ಸಿಗುವುದಿಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ಎಚ್ಚರಿಸಿದ್ದಾರೆ.
ಅಲ್ಲದೆ, ಕುರುಬ ಸಮಾಜವನ್ನು, ಕುರುಬ ಶಾಸಕರನ್ನು, ಕುರುಬ ಸಮಾಜದ ಅಧಿಕಾರಿ, ನೌಕರರನ್ನು ಕಡೆಗಣಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಮೈತ್ರಿ ಸರ್ಕಾರದಲ್ಲಿ ಕುರುಬ ಸಮುದಾಯದ ಅಧಿಕಾರಿಗಳನ್ನೇ ಗುರಿಯಾಗಿಟ್ಟುಕೊಂಡು, ಬೇಕಾಬಿಟ್ಟಿಯಾಗಿ ವರ್ಗಾವಣೆ ಮಾಡುತ್ತಿದೆ. ಇದನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಕೇವಲ ಸ್ವಾಮೀಜಿಗಳು ಮಾತ್ರವಲ್ಲದೆ, ಕುರುಬ ಸಂಘಟನೆಗಳು ಕೂಡ ಸಿದ್ದರಾಮಯ್ಯ ಅವರನ್ನು ನಿರ್ಲಕ್ಷ ಮಾಡುವುದರ ವಿರುದ್ಧ ಧ್ವನಿಯೆತ್ತಿದ್ದರೆ, ಹಲವು ಒಕ್ಕಲಿಗ ಸಂಘಟನೆಗಳು ಕೂಡ ಕುಮಾರಸ್ವಾಮಿ ಸರ್ಕಾರದ ಧಕ್ಕೆ ತಂದರೆ ಸಹಿಸಲಾಗುವುದಿಲ್ಲ ಎಂದು ಬಹಿರಂಗ ಹೇಳಿಕೆಗಳನ್ನು ನೀಡುತ್ತಿವೆ. ತನ್ಮೂಲಕ ಮೈತ್ರಿಕೂಟದ ಸರ್ಕಾರದಲ್ಲಿ ಕುರುಬ ಹಾಗೂ ಒಕ್ಕಲಿಗ ಸಂಘರ್ಷ ಭರ್ಜರಿಯಾಗುವ ಸೂಚನೆ ನೀಡಿವೆ.
ಜಾತಿ ನೋಡಿ ವರ್ಗ ಮಾಡಲ್ಲ
ಸಮುದಾಯ ನೋಡಿ ನಾವು ಯಾವುದೇ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದಿಲ್ಲ. ಹೀಗಿರುವ ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವ ಪ್ರಶ್ನೆಯೇ ಇಲ್ಲ. ವರ್ಗ ಮಾಡೇ ಇಲ್ಲವೆಂದ ಮೇಲೆ ನಾನೇನು ಉತ್ತರ ಕೊಡಲಿ?
- ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.