ಕೆ.ಬಿ ಕೋಳಿವಾಡಗೆ ಎದುರಾಯ್ತು ಸಂಕಷ್ಟ

Published : Jun 27, 2018, 11:17 AM IST
ಕೆ.ಬಿ ಕೋಳಿವಾಡಗೆ ಎದುರಾಯ್ತು ಸಂಕಷ್ಟ

ಸಾರಾಂಶ

ಕರ್ನಾಟಕ ವಿಧಾನಸಭಾ ಸಚಿವಾಲಯದ ವಿವಿಧ ಹುದ್ದೆಗಳ ನೇರ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದ್ದು, ನಿಯಮಗಳನ್ನು ಪಾಲಿಸದೆ ನೇಮಕ ಪ್ರಕ್ರಿಯೆ ನಡೆಸಿರುವ ಆರೋಪದ ಮೇಲೆ ವಿಧಾನಸಭೆಯ ಮಾಜಿ ಸ್ಪೀಕರ್‌ ಕೆ.ಬಿ. ಕೋಳಿವಾಡ ಮತ್ತು ವಿಧಾನಸಭಾ ಕಾರ್ಯದರ್ಶಿ ಎಸ್‌. ಮೂರ್ತಿ ವಿರುದ್ಧ ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು : ಕರ್ನಾಟಕ ವಿಧಾನಸಭಾ ಸಚಿವಾಲಯದ ವಿವಿಧ ಹುದ್ದೆಗಳ ನೇರ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದ್ದು, ನಿಯಮಗಳನ್ನು ಪಾಲಿಸದೆ ನೇಮಕ ಪ್ರಕ್ರಿಯೆ ನಡೆಸಿರುವ ಆರೋಪದ ಮೇಲೆ ವಿಧಾನಸಭೆಯ ಮಾಜಿ ಸ್ಪೀಕರ್‌ ಕೆ.ಬಿ. ಕೋಳಿವಾಡ ಮತ್ತು ವಿಧಾನಸಭಾ ಕಾರ್ಯದರ್ಶಿ ಎಸ್‌. ಮೂರ್ತಿ ವಿರುದ್ಧ ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಾಗಿದೆ. ಆರ್‌ಟಿಐ ಕಾರ್ಯಕರ್ತ ಪ್ರಸನ್ನಕುಮಾರ್‌ ಎಂಬುವವರು ಮಂಗಳವಾರ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಸಂಜಯ್‌ ಸಹಾಯ್‌ ಅವರಿಗೆ ದೂರು ನೀಡಿದ್ದಾರೆ.

2018ರಲ್ಲಿ ವಿಧಾನಸಭಾ ಸಚಿವಾಲಯದಲ್ಲಿ 107 ಹುದ್ದೆಗಳನ್ನು ನಿಯಮಗಳನ್ನು ಪಾಲಿಸದೆ ನೇಮಕಾತಿ ಮಾಡಲಾಗಿದೆ. ಇದರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಲಾಗಿದೆ. ಇದಲ್ಲದೇ, 2017ರ ಫೆ.23 ರಿಂದ 25ರವರೆಗೆ ತರಾತುರಿಯಲ್ಲಿ ಸಂದರ್ಶನ ನಡೆಸಿ 191 ಮಂದಿಯನ್ನು ವಿವಿಧ ಹುದ್ದೆಗಳಿಗೆ ನೇಮಕ ಮಾಡಲಾಗಿದೆ. ಈ ನೇಮಕಾತಿಯಲ್ಲಿಯೂ ಅಕ್ರಮ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಯಾವುದೇ ಹುದ್ದೆಗಳನ್ನು ಸೃಷ್ಟಿಸುವಂತಿಲ್ಲ. ಆದರೆ, 2018ರ ವಿಧಾನಸಭೆ ಚುನಾವಣೆಗೆ ಒಂದು ವಾರದ ಮೊದಲು ಹೊಸದಾಗಿ 107 ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪ್ರಭಾವಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಸೇರಿಕೊಂಡು ವ್ಯಾಪಕ ಭ್ರಷ್ಟಾಚಾರ ನಡೆಸಿ ನೇಮಕಾತಿ ಹಗರಣ ಮಾಡಿದ್ದಾರೆ. ಸಿಬ್ಬಂದಿಯ ಅಗತ್ಯತೆ ನೋಡಿಕೊಂಡು ನಿಯಮಾವಳಿಗಳಿಗೆ ಅನುಗುಣವಾಗಿಯೇ ನೇಮಕಾತಿ ನಡೆಯಬೇಕು. ಆದರೆ, ಇಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಈಗ ನಡೆಸಿರುವ ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ತಕ್ಷಣವೇ ಇದನ್ನು ತನಿಖೆಗೊಳಪಡಿಸಬೇಕು ಎಂದು ಆಗ್ರಹಿಸಲಾಗಿದೆ.

ಸ್ಪೀಕರ್‌ ಅಕ್ರಮ:

ಸ್ಪೀಕರ್‌ ಆಗಿದ್ದ ಕೋಳಿವಾಡ ಅವರು ತಮ್ಮ ಪರಮಾಧಿಕಾರವನ್ನು ದುರುಪಯೋಗಪಡಿಸಿಕೊಂಡು ಅರ್ಹ ಅಭ್ಯರ್ಥಿಗಳನ್ನು ಬಿಟ್ಟು, ಹಣ ಕೊಟ್ಟಅರ್ಹರಲ್ಲದ ಅಭ್ಯರ್ಥಿಗಳಿಗೆ ಮಣೆಹಾಕಿ ಅವರನ್ನು ನೇರ ನೇಮಕಾತಿ ಮಾಡಿದ್ದಾರೆ. ನೇಮಕಾತಿಯಲ್ಲಿ ಅಕ್ರಮ ನಡೆದಿರುವುದರಿಂದ ನೇಮಕಾತಿ ಪ್ರಕ್ರಿಯೆಗೆ ತಡೆಹಿಡಿಯಬೇಕು. ವಿಧಾನಸಭಾ ಸಚಿವಾಲಯದ ಬಿ, ಸಿ ಮತ್ತು ಡಿ ದರ್ಜೆಯ 90 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಲಾಗಿದೆ. ಇದರಲ್ಲಿ ರೋಸ್ಟರ್‌ ಪದ್ಧತಿಯನ್ನು ಸರಿಯಾಗಿ ಪಾಲಿಸಿಲ್ಲದಿರುವುದು ಕಂಡು ಬಂದಿದೆ. ನಿಯಮ ಮೀರಿ ಅಗತ್ಯಕ್ಕಿಂತ ಹೆಚ್ಚುವರಿ ಹುದ್ದೆಗಳನ್ನು ಇಲ್ಲಿ ನೇಮಕ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

ಕೋಳಿವಾಡ, ಎಸ್‌.ಮೂರ್ತಿ, ಸ್ಪೀಕರ್‌ ವಿಶೇಷ ಅಧಿಕಾರಿಯಾಗಿದ್ದ ತಿಪ್ಪೇಸ್ವಾಮಿ ಇವರುಗಳ ವಿರುದ್ಧ ಅಧಿಕಾರ ದುರುಪಯೋಗ ನಡೆಸಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕರಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಣವೀರ್ ನಟನೆಯ ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ?
ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?