ಚಂದ್ರಶೇಖರ ಸ್ವಾಮೀಜಿ ದಂಪತಿ ವಿರುದ್ಧ ಕೇಸು

Published : Sep 14, 2017, 06:01 PM ISTUpdated : Apr 11, 2018, 01:12 PM IST
ಚಂದ್ರಶೇಖರ ಸ್ವಾಮೀಜಿ ದಂಪತಿ ವಿರುದ್ಧ ಕೇಸು

ಸಾರಾಂಶ

ಮೈಸೂರು ಒಡೆಯರ್ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅರಮನೆ ಮೈದಾನ ದುರುಪಯೋಗ | ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ

ಬೆಂಗಳೂರು: ಮೈಸೂರು ಸಂಸ್ಥಾನದ ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅರಮನೆ ಮೈದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪದ ಮೇರೆಗೆ ಖ್ಯಾತ ಜ್ಯೋತಿಷಿ ಚಂದ್ರಶೇಖರ್ ಸ್ವಾಮೀಜಿ ದಂಪತಿ ಸೇರಿದಂತೆ ಆರು ಮಂದಿ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರ್.ಟಿ.ನಗರದ ಆಶ್ರಫ್ ಅಲಿ, ಮಂಗಳೂರಿನ ಮುಲ್ಕಿಯ ಮಧು ಆಚಾರ್ಯ, ಪಿ.ಅಬ್ದುಲ್ ರೆಹಮಾನ್, ಆರ್.ಟಿ.ನಗರದ ಚಂದ್ರಶೇಖರ್ ಸ್ವಾಮೀಜಿ, ಅವರ ಪತ್ನಿ ರಜನಿ ಹಾಗೂ ಗಿರೀಶ್ ಕಾಮತ್ ಆರೋಪಿಗಳಾಗಿದ್ದು, ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಆರೋಪಿಗಳಿಗೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಅರಮನೆ ಮೈದಾನದಲ್ಲಿ ಜಾಹೀರಾತು ಫಲಕಗಳ ಪ್ರದರ್ಶನ ವಿವಾದ ಸಂಬಂಧ ಆಶ್ರಫ್ ಅಲಿ ಮತ್ತು ಇತರರ ವಿರುದ್ಧ ತನಿಖೆ ನಡೆಸಿ, ವರದಿ ನೀಡುವಂತೆ ಪೊಲೀಸರಿಗೆ ಹೈಕೋರ್ಟ್ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಸೆ.8 ರಂದು ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಏನಿದು ಪ್ರಕರಣ?: 2004ರಲ್ಲಿ ಅರಮನೆ ಮೈದಾನದಲ್ಲಿ ಜಾಹೀರಾತು ಫಲಕಗಳ ಪ್ರದರ್ಶನ ಹಾಗೂ ಕಾರ್ಯ ಆಯೋಜನೆ ಸಂಬಂಧ ಮೈಸೂರಿನ ಕಂಠದತ್ತ ನರಸಿಂಹರಾಜ ಒಡೆಯರ್ ಜತೆ ₹7 ಕೋಟಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಉದ್ಯಮಿ ಆಶ್ರಫ್ ಅಲಿ ಹೇಳಿದ್ದರು. ಆದರೆ ಒಡೆಯರ್ ಅವರ ನಿಧನಾನಂತರ ಅವರ ಪತ್ನಿ ಪ್ರಮೋದಾದೇವಿ ಅವರು, ಅರಮನೆ ಮೈದಾನದ ಜಾಹೀರಾತು ಫಲಕ ಪ್ರದರ್ಶನ ಬಾಡಿಗೆ ಒಪ್ಪಂದದ ದಾಖಲೆಗಳನ್ನು ಪರಿಶೀಲಿಸಿದಾಗ ಅವುಗಳು ನಕಲಿ ಎಂಬುದು ಗೊತ್ತಾಯಿತು. ಈ ವಂಚನೆ ಕೃತ್ಯಕ್ಕೆ ಚಂದ್ರಶೇಖರ್ ಸ್ವಾಮೀಜಿ ದಂಪತಿ ಸಹಕರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಅರಮನೆ ಮೈದಾನದ ಉಸ್ತುವಾರಿ ವ್ಯವಸ್ಥಾಪಕರು ನ್ಯಾಯಾಲಯದಲ್ಲಿ ಆರೋಪಿಗಳ ವಿರುದ್ಧ ದೂರು ಸಲ್ಲಿಸಿದ್ದರು. ಇದಕ್ಕೆ ಆರೋಪಿಗಳು ತಕಾರರು ಅರ್ಜಿ ಸಲ್ಲಿಸಿದ್ದರು. ಕೊನೆಗೆ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್, ಈ ಪ್ರಕರಣದ ಕುರಿತು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಆದೇಶಿಸಿತು. ಅದರಂತೆ ಪ್ರಕರಣ ದಾಖಲಾಗಿದೆ.

ಈಗ ತನಿಖೆಯನ್ನು ಶೇಷಾದ್ರಿಪುರ ಉಪ ವಿಭಾಗದ ಎಸಿಪಿ ಅವರಿಗೆ ಆಯುಕ್ತರು ವಹಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗಂಡ ಇಸ್ರೇಲ್‌ನಲ್ಲಿ ಶವವಾಗಿ ಪತ್ತೆಯಾದ ಬಳಿಕ ಭಾರತದಲ್ಲಿ ದುರಂತ ಅಂತ್ಯಕಂಡ ಪತ್ನಿ, ಮಗು ಅನಾಥ
ರಾತ್ರಿ ಫುಲ್ ಪಾರ್ಟಿ, ಬೆಳಗ್ಗೆ ಫುಲ್ ವಾಂತಿ? ಬಾಡಿ ರೀಸ್ಟಾರ್ಟ್‌ಗೆ ಇಷ್ಟು ಮಾಡಿ!