ದೈತ್ಯ ಬ್ಯಾಂಕ್ ಆಗಿ ಹೊರಹೊಮ್ಮಿದ ಕೆನರಾ ಬ್ಯಾಂಕ್

By Suvarna Web DeskFirst Published Nov 21, 2017, 10:31 AM IST
Highlights

ಕರಾವಳಿ ಜಿಲ್ಲೆಯಲ್ಲಿ 1906ರಲ್ಲಿ ಕೇವಲ 50 ರು.ಗಳೊಂದಿಗೆ ವಹಿವಾಟು ಆರಂಭಿಸಿದ ಕೆನರಾ ಬ್ಯಾಂಕ್ ಇಂದು 8 ಲಕ್ಷದ 54 ಸಾವಿರ ಕೋಟಿ ವಹಿವಾಟು ನಡೆಸುವ ದೈತ್ಯಬ್ಯಾಂಕ್ ಆಗಿ ಹೊರ ಹೊಮ್ಮಿದೆ.

ದಾವಣಗೆರೆ(ನ.21): ಕೆನರಾ ಬ್ಯಾಂಕ್‌'ನ 112ನೇ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ನಗರದ ಪಿ.ಜೆ. ಬಡಾವಣೆಯ ಶಾಖೆಯಲ್ಲಿ ಸೋಮವಾರ ಸಂಸ್ಥಾಪನಾ ದಿನವಾಗಿ ಆಚರಿಸಲಾಯಿತು. ಇಲ್ಲಿನ ಪಿ.ಜೆ. ಬಡಾವಣೆಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಸಮಾರಂಭ ಉದ್ಘಾಟಿಸಿದ ಮುಖ್ಯ ಪ್ರಬಂಧಕರಾದ ಎನ್.ಎಸ್. ಕಿರಣ್ ಮಾತನಾಡಿ, ಕರಾವಳಿ ಜಿಲ್ಲೆಯಲ್ಲಿ 1906ರಲ್ಲಿ ಕೇವಲ 50 ರು.ಗಳೊಂದಿಗೆ ವಹಿವಾಟು ಆರಂಭಿಸಿದ ಕೆನರಾ ಬ್ಯಾಂಕ್ ಇಂದು 8 ಲಕ್ಷದ 54 ಸಾವಿರ ಕೋಟಿ ವಹಿವಾಟು ನಡೆಸುವ ದೈತ್ಯಬ್ಯಾಂಕ್ ಆಗಿ ಹೊರ ಹೊಮ್ಮಿದೆ ಎಂದರು.

ಸಂಸ್ಥಾಪಕರಾದ ಅಮ್ಮೆಂಬಾಳ್ ಸುಬ್ಬರಾವ್ ಪೈ ಕಂಡಿದ್ದ ಕನಸು ಇಂದು ಸಾಕಾರಗೊಳ್ಳುತ್ತಿದೆ. ಕೇವಲ 50 ರು. ವಹಿವಾಟಿನೊಂದಿಗೆ ಆರಂಭವಾದ ಕೆನರಾ ಬ್ಯಾಂಕ್ ತನ್ನ ಸುಧೀರ್ಘ ಪಯಣದಲ್ಲಿ ದೇಶದ 4ನೇ ಅತಿ ದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿಕೊಂಡು ಬಂದ ಈ ಬ್ಯಾಂಕ್ ಗ್ರಾಹಕರ ಪ್ರೀತಿಗೂ ಪಾತ್ರವಾಗಿದೆ ಎಂದು ಅವರು ಹೇಳಿದರು.

ಪ್ರಸಕ್ತ ವರ್ಷದ 2ನೇ ತ್ರೈಮಾಸಿಕದಲ್ಲಿ 260 ಕೋಟಿ ರು. ಲಾಭ ಗಳಿಸಿರುವ ಬ್ಯಾಂಕ್ ಶಿಕ್ಷಣ,ಕೈಗಾರಿಕೆ, ವಾಣಿಜ್ಯ ಹೀಗೆ ನಾನಾ ಕ್ಷೇತ್ರಕ್ಕೂ ತನ್ನ ಸೇವೆ ಒದಗಿಸುವ ಮೂಲಕ ರಾಷ್ಟ್ರ, ರಾಜ್ಯದ ಅಭಿವೃದ್ಧಿಗೂ ತನ್ನದೇ ಕೊಡುಗೆ ನೀಡುತ್ತಿದೆ. ಕಳೆದ 10 ವರ್ಷದಿಂದ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸುವ ಪರಿಶಿಷ್ಟ ವಿದ್ಯಾರ್ಥಿನಿಯರಿಗೆ 5, 6, 7ನೇ ತರಗತಿ ಮಕ್ಕಳಿಗೆ 2500 ವಿದ್ಯಾರ್ಥಿ ವೇತನ ನೀಡುವ ಮೂಲಕ ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿದೆ ಎಂದು ಅವರು ತಿಳಿಸಿದರು.

ಹೈಸ್ಕೂಲ್‌'ನಲ್ಲಿ ಅತಿ ಹೆಚ್ಚು ಅಂಕ ಗಳಿಸುವ ಪರಿಶಿಷ್ಟ ಜಾತಿ-ಪಂಗಡದ ವಿದ್ಯಾರ್ಥಿನಿಯರಿಗೆ 5 ಸಾವಿರದಂತೆ ವಿದ್ಯಾರ್ಥಿ ವೇತನ ನೀಡುತ್ತಿದೆ. ಸರ್ಕಾರಿ, ಅನುದಾನಿತ ಶಾಲೆಗಳ ಪೈಕಿ ಹಿರಿಯ ಪ್ರಾಥಮಿಕ ಶಾಲೆಯ ಮೂವರು, ಪ್ರೌಢಶಾಲೆಯ ಮೂವರು ಪ್ರತಿಭಾವಂತ, ಪರಿಶಿಷ್ಟ ವಿದ್ಯಾರ್ಥಿನಿಯರಿಗೆ ಕೆನರಾ ಬ್ಯಾಂಕ್ ಪ್ರತಿ ಶಾಖೆಯಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ಎನ್.ಎಸ್.ಕಿರಣ್ ಮಾಹಿತಿ ನೀಡಿದರು.

ಗ್ರಾಹಕರಾದ ಮಂಜುನಾಥ ಗುಂಡಾಳ್, ಗೌಡರ ಮಲ್ಲಿಕಾರ್ಜುನ, ಬೆಸ್ಕಾಂನ ನಿವೃತ್ತ ಮುಖ್ಯ ಅಭಿಯಂತರ ಶ್ರೀನಿವಾಸ ರೆಡ್ಡಿ, ಕೆಪಿಟಿ ಸಿಎಲ್‌'ನ ಮುಖ್ಯ ಲೆಕ್ಕಾಧಿಕಾರಿ ಹಾಲೇಶ , ವಕೀಲ ಶಾಂತವೀರಪ್ಪ, ಬ್ಯಾಂಕ್‌'ನ ಅಧಿಕಾರಿ, ಸಿಬ್ಬಂದಿ, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಇದ್ದರು. ಇಲ್ಲಿನ ಹೊಂಡದ ಸರ್ಕಲ್‌'ನ ಶ್ರೀ ದುರ್ಗಾಂಬಿಕಾ ಶಾಲೆ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.

click me!