
ವಿಜಯಪುರ (ಆಲಮಟ್ಟಿ): ಗುಜರಾತ್ ಅನ್ನು ಮಾದರಿಯಾಗಿಟ್ಟುಕೊಂಡು ನೀರಾವರಿ ಸೌಲಭ್ಯ ಮತ್ತು ನೈಸರ್ಗಿಕ ಶಕ್ತಿಗಳ ಸದ್ಬಳಕೆ ನಿಟ್ಟಿನಲ್ಲಿ ವಿಜಯಪುರದಲ್ಲಿ ಕೈಗೊಂಡ ಸೌರಶಕ್ತಿ ಯೋಜನೆ ಈಗ ದೇಶಕ್ಕೇ ಮಾದರಿಯಾಗಿ ಪರಿವರ್ತನೆಯಾಗಿದೆ. ದಕ್ಷಿಣ ಭಾರತದಲ್ಲೇ ಮೊದಲನೆಯದಾದ ಈ ಕೆನಾಲ್ ಸೋಲಾರ್ ಯೋಜನೆ ಯಶಸ್ಸು ಇಂತಹ ಇನ್ನಷ್ಟು ಯೋಜನೆಗಳಿಗೆ ಪ್ರೇರಣೆಯಾಗುತ್ತಿದೆ.
ಯೋಜನೆಯಡಿ ಆಲಮಟ್ಟಿ ಬಲದಂಡೆ ಕಾಲುವೆ ಮೇಲೆ 8ನೇ ಕಿ.ಮೀ ನಿಂದ 11ನೇ ಕಿ.ಮೀವರೆಗೆ ಸೌರಫಲಕ ಅಳವಡಿಸಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಬಿಸಿಲಿನ ತೀವ್ರತೆ ಹೆಚ್ಚು. ಇದರಿಂದ ನೀರಿನ ಆವಿಯಾಗುವಿಕೆ ಪ್ರಮಾಣವೂ ಜಾಸ್ತಿ. ಇದರ ತಡೆಗೆ ಕಾಲುವೆ ಮೇಲೆ ಸೌರಫಲಕ ಅಳವಡಿಕೆಗೆ ಮುಂದಾಗಿದ್ದು, ಈ ಮೂಲಕ ನೀರನ್ನು ಉಳಿಸುವ ಜತೆಗೆ ವಿದ್ಯುತ್ ಉತ್ಪಾದಿಸುವ ಹೊಸ ಮಾದರಿಗೆ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಮುಂದಾಗಿದೆ ಎಂದು ಕೃಷ್ಣಾ ಕಾಡಾದ ಕಾರ್ಯಪಾಲಕ ಅಭಿಯಂತರ ತಿರುಮೂರ್ತಿ ಮಾಹಿತಿ ನೀಡಿದರು.
ಈ ಕಾಲುವೆಗಳು 9 ಮೀ ಅಗಲವಿದ್ದು, ಅದರ ಮೇಲೆ ಸುಮಾರು 12 ಮೀ ಅಗಲ ಹಾಗೂ 700 ಮೀಟರ್ ಉದ್ದದವರೆಗೆ 3280 ಸೌರಫಲಕಗಳನ್ನು ಅಳವಡಿಸಲಾಗಿದೆ. ಈ ಸೌರಫಲಕಗಳಿಂದ ಪ್ರತಿನಿತ್ಯ 4000-6000 ಯುನಿಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಪ್ರತಿದಿನ 25ರಿಂದ 27ಡಿಗ್ರಿ ಸಾಮಾನ್ಯ ಉಷ್ಣಾಂಶದಿಂದ ಇದು ಸಾಧ್ಯವಾಗುತ್ತಿದ್ದು, ಅತಿ ಹೆಚ್ಚಿನ ಪ್ರಖರತೆ ಇದ್ದಾಗಲೂ ಗರಿಷ್ಠ 1 ಮೆಗಾವ್ಯಾಟ್ (10ಸಾವಿರ ಯುನಿಟ್)ನಷ್ಟುವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಈ ಯೋಜನೆಗಿದೆ.
ಉತ್ಪಾದನೆಗೊಂಡ ಈ ವಿದ್ಯುತ್ ಅನ್ನು ಸುತ್ತಲಿನ 12 ಹಳ್ಳಿಗಳಿಗೆ ನೀಡಲು ಆರಂಭದಲ್ಲಿ ಯೋಜನೆ ರೂಪಿಸಲಾಗಿತ್ತು. ನಂತರದಲ್ಲಿ ಕ್ಯಾಪ್ಟಿವ್ ಬೇಸಿಸ್ (ನೀಡಿದಷ್ಟು ಬಿಲ್ ಕಡಿತದ) ಆಧಾರದ ಮೇಲೆ ಇಲ್ಲಿ ಉತ್ಪಾದನೆಗೊಳ್ಳುವ ವಿದ್ಯುತ್ ಅನ್ನು ಸಮೀಪದಲ್ಲಿರುವ ಹೆಸ್ಕಾಂನ ರಾಂಪುರ ಸಬ್'ಸ್ಟೇಷನ್‌ಗೆ ನೀಡಲಾಗುತ್ತಿದೆ. ಅಂದರೆ ಆಲಮಟ್ಟಿಎಡ ಮತ್ತು ಬಲದಂಡೆ ಕಾಲುವೆಗಳಿಗೆ ನೀರು ಪಂಪ್ ಮಾಡಲು ವಿದ್ಯುತ್ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲಿ ಬಳಸುವ ವಿದ್ಯುಚ್ಛಕ್ತಿಯ ಒಟ್ಟು ಬಿಲ್‌ನಲ್ಲಿ ಈ ಸೋಲಾರ್ ಪವರ್ ಪ್ರಾಜೆಕ್ಟ್'ನಿಂದ ಉತ್ಪಾದನೆಗೊಂಡು ಹೆಸ್ಕಾಂಗೆ ನೀಡಲಾಗುವ ಯುನಿಟ್'ನಷ್ಟು ಕಡಿತ ಮಾಡಿ ಉಳಿದಿರುವುದಕ್ಕೆ ಹೆಸ್ಕಾಂ ಬಿಲ್ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಉತ್ಪಾದನೆ ಹೆಚ್ಚಿದಲ್ಲಿ ಪ್ರತಿ ಯುನಿಟ್'ಗೆ ರೂ.3.60ರಂತೆ ಮೊತ್ತ ಪಾವತಿಸುವ ಕುರಿತು ಹೆಸ್ಕಾಂ ಜತೆಗೆ ಒಡಂಬಡಿಕೆಯನ್ನೂ ಮಾಡಿಕೊಳ್ಳಲಾಗಿದೆ. 2015ರ ಜೂ.9ರಂದು ಈ ಯೋಜನೆಗೆ ಚಾಲನೆ ನೀಡಲಾಗಿದ್ದು, ಈವರೆಗೂ 14 ಲಕ್ಷ ಯುನಿಟ್ ವಿದ್ಯುತ್ ಉತ್ಪಾದಿಸಲಾಗಿದೆ.
ಗುಜರಾತಿನ ಅಹಮದಾಬಾದ್‌ನಲ್ಲಿ 1 ಮೆ.ವ್ಯಾ.ಸಾಮರ್ಥ್ಯದ ಕೆನಾಲ್ ಟಾಪ್ ಸೋಲಾರ್ ಪ್ರಾಜೆಕ್ಟ್ ಕೈಗೊಳ್ಳಲಾಗಿದ್ದು, ಅದೇ ಮಾದರಿಯನ್ನು ಇಲ್ಲಿ ಅನುಸರಿಸಲಾಗಿದೆ. ಆದರೆ ಅಹಮದಾಬಾದ್ ಯೋಜನೆಗೆ ರೂ.17 ಕೋಟಿ ವೆಚ್ಚವಾಗಿದ್ದರೆ, ವಿಜಯಪುರದ ಈ ಯೋಜನೆಗೆ ರೂ.11.43 ಕೋಟಿ ವೆಚ್ಚವಾಗಿದೆ.
ಕೊಪ್ಪಳದಲ್ಲೂ ಆರಂಭಿಸಲು ಚಿಂತನೆ:
ವಿಜಯಪುರದಲ್ಲಿ ಸಿಕ್ಕ ಯಶಸ್ಸನ್ನು ಕಂಡು ಇದೇ ಮಾದರಿಯನ್ನು ಕೊಪ್ಪಳ ಏತ ನೀರಾವರಿ ಯೋಜನೆಯ 10ನೇ ಕಿ.ಮೀನಲ್ಲಿ ಅಳವಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ ಅದು ಬೃಹತ್ ಯೋಜನೆಯಾಗಿದ್ದು, ಅದರ ಸಾಮರ್ಥ್ಯ 10 ಮೆಗಾವ್ಯಾಟ್‌ಗೆ (1 ಲಕ್ಷ ಯುನಿಟ್) ಹೆಚ್ಚಿಸಲು ಚಿಂತನೆ ನಡೆಸಿದೆ.
ಬರದ ನಾಡು ಎಂಬ ಹೆಸರಿನಿಂದ ವಿಜಯಪುರ ಜಿಲ್ಲೆ ಸೇರಿ ಸುತ್ತಲಿನ ಕೆಲ ಜಿಲ್ಲೆಗಳಲ್ಲಿ ನೀರಾವರಿ ಕ್ರಾಂತಿಗೆ ಸಚಿವ ಎಂ.ಬಿ.ಪಾಟೀಲ ನಾಂದಿ ಹಾಡಿದ್ದಾರೆ. ಕಾಮಗಾರಿಗಳಿಗೆ ತೀವ್ರತೆ ನೀಡಿದ್ದಾರೆ. ಸೋಲಾರ್ ಪ್ರಾಜೆಕ್ಟ್ಗೆ ಹೆಚ್ಚಿನ ಆದ್ಯತೆ ಕೊಟ್ಟಲ್ಲಿ ರಾಜ್ಯದ ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
- ತಿರುಮೂರ್ತಿ, ಕೃಷ್ಣಾ ಕಾಡಾದ ಕಾರ್ಯಪಾಲಕ ಅಭಿಯಂತರ
(ಕನ್ನಡಪ್ರಭ ವಾರ್ತೆ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.