
ನವದೆಹಲಿ(ಡಿ. 26): ದೇಶೀ ನಿರ್ಮಿತ ಅಗ್ನಿ-5 ಖಂಡಾಂತರ ಕ್ಷಿಪಣಿಯ ನಾಲ್ಕನೇ ಪ್ರಾಯೋಗಿಕ ಉಡಾವಣೆ ಪರೀಕ್ಷೆ ಯಶಸ್ವಿಯಾಗಿದೆ. ಒಡಿಶಾದ ಬಲಾಸೋರ್ ಜಿಲ್ಲೆಯಲ್ಲಿರುವ ಅಬ್ದುಲ್ ಕಲಾಂ ದ್ವೀಪದಿಂದ ಇಂದು ಸೋಮವಾರ ಬೆಳಗ್ಗೆ 11:05ರ ಸಮಯದಲ್ಲಿ ಕ್ಷಿಪಣಿಯ ಉಡಾವಣೆ ಪ್ರಯೋಗ ನಡೆಸಲಾಯಿತು. ಇಂದು ಈ ಕ್ಷಿಪಣಿಯ ಅಂತಿಮ ಪರೀಕ್ಷೆಯಾಗಿದೆ. ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಈ ಕ್ಷಿಪಣಿ ಇದೀಗ ಸೇನೆಯ ನಿಯೋಜನೆಗೆ ಸಂಪೂರ್ಣ ಸಿದ್ಧವಾಗಿದೆ ಎನ್ನಲಾಗಿದೆ.
ಕ್ಷಿಪಣಿಯ ವಿಶೇಷತೆಗಳು ಏನು?
* ನೆಲದಿಂದ ನೆಲಕ್ಕೆ ಚಿಮ್ಮುವ ಖಂಡಾಂತರ ಕ್ಷಿಪಣಿಯಾದ ಅಗ್ನಿ-5 ವಿಶ್ವದ ಅತ್ಯಂತ ಪ್ರಬಲ ಕ್ಷಿಪಣಿಗಳಲ್ಲೊಂದೆನಿಸಿದೆ. ಅಮೆರಿಕ, ರಷ್ಯಾ, ಚೀನಾ, ಫ್ರಾನ್ಸ್ ಮತ್ತು ಬ್ರಿಟನ್ ದೇಶಗಳಲ್ಲಿ ಮಾತ್ರ ಇಂಥ ಅತ್ಯಾಧುನಿಕ ಕ್ಷಿಪಣಿಗಳಿವೆ.
* ಈ ಕ್ಷಿಪಣಿಯು 5 ಸಾವಿರಕ್ಕೂ ಹೆಚ್ಚು ದೂರದ ಸ್ಥಳಗಳಲ್ಲಿರುವ ಗುರಿಯನ್ನು ತಲುಪಬಲ್ಲುದು. ಚೀನಾ ಮಾತ್ರವಲ್ಲ ಏಷ್ಯಾ ಖಂಡದ ಯಾವುದೇ ದೇಶಗಳನ್ನು ಇದು ಟಾರ್ಗೆಟ್ ಮಾಡಬಲ್ಲುದು. ಅಷ್ಟೇ ಅಲ್ಲ, ಆಫ್ರಿಕಾ ಮತ್ತು ಯೂರೋಪ್ ಖಂಡದ ಕೆಲ ದೇಶಗಳಿಗೂ ಇದು ನುಗ್ಗಬಲ್ಲುದು.
* 17 ಮೀಟರ್ ಉದ್ದ, 2 ಮೀಟರ್ ಅಗಲ, 50 ಟನ್ ತೂಕ ಇರುವ ಈ ಕ್ಷಿಪಣಿಯು 1 ಟನ್'ನಷ್ಟು ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲುದು.
* ರೆಡ್ಯೂಂಡೆಂಟ್ ನ್ಯಾವಿಗೇಷನ್ ಸಿಸ್ಟಮ್, ರಿಂಗ್ ಲೇಸರ್ ಆಧಾರಿತ ಇನರ್ಷಿಯಲ್ ನ್ಯಾವಿಗೇಶನ್ ಸಿಸ್ಟಮ್(ಆರ್'ಐಎನ್'ಎಸ್), ಮೈಕ್ರೋ ನ್ಯಾವಿಗೇಶನ್ ಸಿಸ್ಟಮ್(ಎಂಐಎನ್'ಎಸ್), ಹೈಸ್ಪೀಡ್ ಆನ್'ಬೋರ್ಡ್ ಕಂಪ್ಯೂಟರ್, ಫಾಲ್ಟ್ ಟಾಲರೆಂಟ್ ಸಾಫ್ಟ್'ವೇರ್ ಮೊದಲಾದ ಅತ್ಯಾಧುನಿಕ ತಂತ್ರಜ್ಞಾನಗಳು ಈ ಕ್ಷಿಪಣಿಯಲ್ಲಿ ಅಡಕವಾಗಿವೆ.
* ಸರಕಾರಿ ಸ್ವಾಮ್ಯದ ಡಿಆರ್'ಡಿಓ ಸಂಸ್ಥೆಯು ಅಗ್ನಿ ಸರಣಿಯ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿದೆ. ಅಗ್ನಿ-5 ಕ್ಷಿಪಣಿಯ ಮೊದಲ ಪ್ರಯೋಗ 2012ರ ಏಪ್ರಿಲ್ 19ರಂದು ನಡೆದಿತ್ತು. ಇವತ್ತು ನಡೆದದ್ದು ನಾಲ್ಕನೇ ಪರೀಕ್ಷೆಯಾಗಿದೆ.
ಅಗ್ನಿ-6 ಯೋಜನೆ:
ಇನ್ನು, ಅಗ್ನಿ-6 ಕ್ಷಿಪಣಿಯ ನೀಲನಕಾಶೆ ತಲುಪಿದ್ದು, ಸರಕಾರ ಈಗ ಓಕೆ ಎಂದರೆ ಮುಂದಿನ ವರ್ಷ ಪರೀಕ್ಷೆಗೆ ಸಿದ್ಧವಾಗಲಿದೆ. ಇದು 8-12 ಸಾವಿರ ಕಿಮೀ ದೂರದ ಟಾರ್ಗೆಟ್'ಗಳನ್ನು ಮುಟ್ಟಬಲ್ಲ ಸಾಮರ್ಥ್ಯ ಹೊಂದಿರಲಿದೆ. ಅಗ್ನಿ ಸರಣಿಯ ಕ್ಷಿಪಣಿಗಳಲ್ಲೇ ಅಗ್ನಿ-6 ಅತ್ಯಂತ ಶಕ್ತಿಯುತವೆನ್ನಲಾಗಿದೆ. ಡಿಆರ್'ಡಿಓ ಸಂಸ್ಥೆಯೇ ಇದರ ತಯಾರಿಕೆ ಮಾಡಲಿದೆ. ಇದು ಬಂದರೆ, ನಾವು ಅಮೆರಿಕವನ್ನೂ ಟಾರ್ಗೆಟ್ ಮಾಡಬಹುದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.