ಕಾಫಿ ಕಿಂಗ್ ದುರಂತ ಅಂತ್ಯ: ‘3 ದಿನಗಳಿಂದ ಫೋನ್‌ ಬಂದಾಗೆಲ್ಲ ಒತ್ತಡಕ್ಕೆ ಒಳಗಾಗುತ್ತಿದ್ದರು’

By Web Desk  |  First Published Jul 31, 2019, 9:25 AM IST

ಖಿನ್ನತೆಗೆ ಒಳಗಾಗಿದ್ದರಾ?| ‘3 ದಿನಗಳಿಂದ ಫೋನ್‌ ಬಂದಾಗೆಲ್ಲ ಒತ್ತಡಕ್ಕೆ ಒಳಗಾಗುತ್ತಿದ್ದರು’| ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ಗೆ ಸಿದ್ಧಾರ್ಥ ಕುಟುಂಬ ನೀಡಿದ ಮಾಹಿತಿ ಪ್ರಕಾರ ಹೌದು ಎನ್ನಲಾಗಿದೆ


ಮಂಗಳೂರು[ಜು.31]: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಕಾಫಿ ಡೇ ಮಾಲೀಕ ಸಿದ್ಧಾರ್ಥ ಕಳೆದ ಮೂರು ದಿನಗಳಿಂದ ಖಿನ್ನತೆ(ಡಿಪ್ರೆಷನ್‌)ಗೆ ಒಳಗಾಗಿದ್ದರೇ? ಮಂಗಳೂರು ನಗರ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ಗೆ ಸಿದ್ಧಾರ್ಥ ಕುಟುಂಬ ನೀಡಿದ ಮಾಹಿತಿ ಪ್ರಕಾರ ಹೌದು ಎನ್ನಲಾಗಿದೆ.

ಕಾರ್ಯ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದ ಸಂದೀಪ್‌ ಪಾಟೀಲ್‌, ಪ್ರಕರಣದ ಬಗ್ಗೆ ಮಾಹಿತಿ ಲಭಿಸುತ್ತಿದ್ದಂತೆ ಬೆಂಗಳೂರಿನ ಸದಾಶಿವನಗರದಲ್ಲಿರುವ ಸಿದ್ಧಾರ್ಥ ಮನೆಗೆ ತಡರಾತ್ರಿಯೇ ತೆರಳಿ ಮಾಹಿತಿಯನ್ನು ಕಲೆ ಹಾಕಿದ್ದಾರೆ.

Latest Videos

ಮೂರು ದಿನಗಳಿಂದ ಕೆಲ ಫೋನ್‌ ಕಾಲ್‌ಗಳು ಬಂದಾಗ ಸಿದ್ಧಾರ್ಥ ವಿಪರೀತ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದರು. ಫೋನ್‌ ಕರೆಯ ಬಳಿಕ ಮತ್ತಷ್ಟುಉದ್ವೇಗಗೊಳ್ಳುತ್ತಿದ್ದ ಅವರು ಯಾರ ಬಳಿಯೂ ಹೆಚ್ಚಿಗೆ ಮಾತನಾಡುತ್ತಿರಲಿಲ್ಲ. ಪ್ರತಿ ಬಾರಿ ಎಲ್ಲಿಗೆ ಹೋಗುವುದಿದ್ದರೂ ಖಚಿತವಾಗಿಯೇ ಹೇಳುತ್ತಿದ್ದ ಸಿದ್ಧಾರ್ಥ ಸೋಮವಾರ ಮಾತ್ರ ಬೇರೆ ಕಡೆಗೆ ಹೋಗುವುದಾಗಿ ಮನೆಯಲ್ಲಿ ಹೇಳಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.

ಆತ್ಮಹತ್ಯೆಗೆ ಮೊದಲೇ ನಿರ್ಧರಿಸಿದ್ದರೇ?

undefined

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಕಾಫಿ ಡೇ ಉದ್ಯಮ ನಡೆಸುತ್ತಿದ್ದ ಸಿದ್ಧಾರ್ಥ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಪೂರ್ವ ನಿರ್ಧಾರ ಮಾಡಿದ್ದರೇ? ಇದೇ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿದ್ದರೇ...? ಇಂಥದ್ದೊಂದು ಸಾಧ್ಯತೆಯತ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಾಪತ್ತೆಯಾದ ಕಾಫಿ ಡೇ ಒಡೆಯ ಮೃತದೇಹ ಪತ್ತೆ: ಸೋಮವಾರದಿಂದ ಏನೇನಾಯ್ತು?

ಸಿದ್ಧಾರ್ಥ ಅವರ ಕಾರು ಚಾಲಕ ನೀಡಿದ ಹೇಳಿಕೆ, ಸಿದ್ಧಾರ್ಥ ಅವರ ಪತ್ನಿ ಹಾಗೂ ಮನೆ ಮಂದಿ ನೀಡಿದ ಮಾಹಿತಿಯನ್ನು ಆಧರಿಸಿ ಪೊಲೀಸರು ತನಿಖೆಯ ಜಾಡು ಹಿಡಿದಿದ್ದಾರೆ. ಸಿದ್ಧಾರ್ಥ ಅವರಿಗೆ ಉಳ್ಳಾಲದ ಸೋಮೇಶ್ವರ ಬಳಿ ಸೀ ಗ್ರೌಂಡ್‌ ಹೆಸರಿನಲ್ಲಿ ಜಾಗವಿದೆ. ಅಲ್ಲದೆ ಜೆಪ್ಪು ಕುಡುಪಿನಲ್ಲಿ ಐಟಿ ಸಂಸ್ಥೆ ಇದೆ. ಪಂಪ್‌ವೆಲ್‌ನಿಂದ ತೊಕ್ಕೊಟ್ಟು ದಾರಿಯಲ್ಲಿ ಬಂದ ಸಿದ್ಧಾರ್ಥ, ಕಾರು ಚಾಲಕನಲ್ಲಿ ಸೋಮೇಶ್ವರದ ಜಾಗಕ್ಕೆ ತೆರಳಲಿರುವುದಾಗಿ ಹೇಳಿದ್ದರು. ನೇತ್ರಾವತಿ ಸೇತುವೆ ಬಳಿಗೆ ಬಂದ ಸಿದ್ಧಾರ್ಥ ಕಾರು ನಿಲ್ಲಿಸುವಂತೆ ಚಾಲಕನಿಗೆ ಹೇಳಿ ಆತ್ಮಹತ್ಯೆಗೆ ನಿರ್ಧರಿಸಿ ತೆರಳಿದ್ದರೇ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ಕೇಂದ್ರೀಕರಿಸಿದ್ದಾರೆ.

ಬೆಂಗಳೂರಿಗೆ ಸಿಸಿಬಿ ಪೊಲೀಸ್‌ ತಂಡ

ಇದಲ್ಲದೆ ಮಂಗಳೂರಿನ ಸಿಸಿಬಿ ಪೊಲೀಸ್‌ ತಂಡ ಮಂಗಳವಾರ ಬೆಂಗಳೂರಿಗೆ ತೆರಳಿದೆ. ಸಿದ್ಧಾರ್ಥ ಅವರ ಕುಟುಂಬ, ಸಂಬಂಧಿಕರು, ಕಂಪನಿಯ ಸಿಬ್ಬಂದಿಯನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕುತ್ತಿದೆ. ಇದಲ್ಲದೆ ಮಂಗಳೂರಿನಲ್ಲೂ ತನಿಖೆ ಚುರುಕುಗೊಳಿಸಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.

ಸಿಸಿ ಕ್ಯಾಮರಾ ಪರಿಶೀಲನೆ:

ನಗರದ ಪಂಪ್‌ವೆಲ್‌ನಿಂದ ತೊಕ್ಕೊಟ್ಟು ಕಡೆಗೆ ಸಿದ್ಧಾರ್ಥ ಪ್ರಯಾಣಿಸುತ್ತಿದ್ದ ಕಾರಿನ ಜಾಡವನ್ನು ತಿಳಿಯಲು ಸಂಚಾರ ಪೊಲೀಸರು ರಸ್ತೆಯಲ್ಲಿ ಅಳವಡಿಸಿದ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಇದರಿಂದ ಇನ್ನೂ ಹೆಚ್ಚಿನ ಮಾಹಿತಿ ಲಭಿಸುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಸೋಮವಾರ ತಡರಾತ್ರಿ ಶ್ವಾನದಳವನ್ನು ಕರೆಸಲಾಗಿದೆ. ಸಿದ್ಧಾರ್ಥ ಅವರು ಕಾರಿನಿಂದ ಇಳಿದು ಹೊಸ ಸೇತುವೆಯಲ್ಲಿ ತೊಕ್ಕೊಟ್ಟು ಕಡೆಗೆ ಸಾಗಿ, ಅಲ್ಲಿಂದ ಹಳೆ ಸೇತುವೆಯಲ್ಲಿ ಮಂಗಳೂರು ಕಡೆಗೆ ವಾಪಸ್‌ ಮಧ್ಯ ಭಾಗಕ್ಕೆ ಬಂದಿರುವುದು ದೃಢಪಟ್ಟಿದೆ. ಬಳಿಕ ಅವರು ಎಲ್ಲಿಗೆ ಹೋಗಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಈ ಹಿನ್ನೆಲೆಯಲ್ಲಿ ಸೇತುವೆ ಮಧ್ಯಭಾಗಕ್ಕೆ ಬಂದು ಅಲ್ಲಿಂದ ನೇರವಾಗಿ ನದಿಗೆ ಧುಮುಕಿರಬೇಕು ಎಂದು ಪೊಲೀಸರು ತರ್ಕಿಸುತ್ತಿದ್ದಾರೆ. ಸಿದ್ಧಾರ್ಥ ಅವರು ತಮ್ಮ ಪರ್ಸ್‌ ಹಾಗೂ ಇನ್ನಿತರ ವಸ್ತುಗಳನ್ನು ಕಾರಿನಲ್ಲೇ ಬಿಟ್ಟು ಮೊಬೈಲ್‌ನಲ್ಲಿ ಮಾತನಾಡುತ್ತಾ ಸೇತುವೆ ಮೇಲೆ ನಡೆದುಕೊಂಡು ಹೋಗಿದ್ದರು.

ಸಿದ್ಧಾರ್ಥ ನಾಪತ್ತೆ ಕುರಿತಂತೆ ಅನುಮಾನಗೊಂಡ ಸ್ಥಳದಿಂದ ಶೋಧ ಆರಂಭಿಸಿದ್ದೇವೆ. ವಿಶೇಷ ತಂಡದಿಂದಲೂ ಶೋಧ ಕಾರ್ಯ ನಡೆಯುತ್ತಿದೆ. ಸೋಮವಾರ ರಾತ್ರಿ ಕಾರು ಚಾಲಕ ಕಂಕನಾಡಿ ಠಾಣೆಗೆ ದೂರು ನೀಡಿದ್ದಾರೆ. ಇಲ್ಲಿ ಡೆತ್‌ ನೋಟ್‌ ಯಾವುದೂ ಸಿಕ್ಕಿಲ್ಲ. ನಗರದ ಹೊಟೇಲ್‌ ಹಾಗೂ ವಸತಿಗೃಹಗಳಲ್ಲಿ ಪರಿಶೀಲನೆ ನಡೆಸಿದ್ದೇವೆ. ಅಲ್ಲದೆ ನೇತ್ರಾವತಿ ಸೇತುವೆಯ ಎರಡು ಕಡೆಗಳಲ್ಲಿ ಪರಿಶೀಲನೆ ಮಾಡಲಾಗಿದೆ.

-ಹನುಮಂತರಾಯ, ಡಿಸಿಪಿ, ಮಂಗಳೂರು

ಶೋಧ ತಂಡ ಬಿರುಸಿನಿಂದ ಕಾರ್ಯಾಚರಣೆ ನಡೆಸುತ್ತಿದೆ. ಜಿಲ್ಲಾಡಳಿತದ ಎಂಟು ತಂಡ ಶೋಧ ನಡೆಸುತ್ತಿದ್ದು, ಕೋಸ್ಟ್‌ ಗಾರ್ಡ್‌ನ ಎರಡು ತಂಡ ಕೂಡ ಶೋಧ ಕಾರ್ಯ ನಡೆಸುತ್ತಿದೆ. ಘಟನೆ ಹೇಗಾಯಿತು? ಏನಾಯಿತು ಎಂಬ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಅವರ ಪತ್ತೆಗೆ ಶೇಕಡ 100ರಷ್ಟುಪ್ರಯತ್ನ ನಡೆಸುತ್ತಿದ್ದೇವೆ.

-ಸಸಿಕಾಂತ್‌ ಸೆಂಥಿಲ್‌, ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ

click me!