ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಗಲ್ಲು ಶಿಕ್ಷೆಗೆ ಸಂಪುಟ ಅಸ್ತು

By Web DeskFirst Published Jul 11, 2019, 8:26 AM IST
Highlights

ಮಕ್ಕಳ ಮೇಲೆ ಹೇಯ ಲೈಂಗಿಕ ದೌರ್ಜನ್ಯ ನಡೆಸುವ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವುದು ಸೇರಿದಂತೆ ಪೋಸ್ಕೋ ಕಾಯ್ದೆಯಲ್ಲಿ ಕೆಲವೊಂದು ತಿದ್ದುಪಡಿಗಳನ್ನು ತರಲು  ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. 

ನವದೆಹಲಿ (ಜು.11): ಮಕ್ಕಳ ಮೇಲೆ ಹೇಯ ರೀತಿಯಲ್ಲಿ ಲೈಂಗಿಕ ದೌರ್ಜನ್ಯ ನಡೆಸುವ ದುರುಳರಿಗೆ ಗಲ್ಲು ಶಿಕ್ಷೆ ವಿಧಿಸುವುದೂ ಸೇರಿದಂತೆ ‘ಪೋಸ್ಕೋ’ ಕಾಯ್ದೆಯನ್ನು ಮತ್ತಷ್ಟುಬಲಗೊಳಿಸಲು ತಿದ್ದುಪಡಿ ಮಾಡಲು ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಒಪ್ಪಿಗೆ ನೀಡಿದೆ.

ಇದೇ ವೇಳೆ, ಚಿಟ್‌ಫಂಡ್‌ ಮೂಲಕ ನಡೆಯುವ ವಂಚನೆಯಿಂದ ಹೂಡಿಕೆದಾರರನ್ನು ರಕ್ಷಿಸುವ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಮಸೂದೆಗೂ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ಕೊಟ್ಟಿದೆ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ‘ಲೈಂಗಿಕ ಅಪರಾಧಗಳಿಂದ ಮಕ್ಕಳಿಗೆ ರಕ್ಷಣೆ’ (ಪೋಸ್ಕೋ) ಕಾಯ್ದೆ ಇದೆ. ಅದಕ್ಕೆ ಮತ್ತಷ್ಟುಶಕ್ತಿ ತುಂಬುವ ಸಲುವಾಗಿ ಕೆಲವೊಂದು ತಿದ್ದುಪಡಿಗಳನ್ನು ಮಾಡಲು ಸಂಪುಟದಲ್ಲಿ ನಿರ್ಧರಿಸಲಾಗಿದೆ. ಹೇಯ ಕೃತ್ಯಗಳಲ್ಲಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವುದು, ಮಕ್ಕಳ ಅಶ್ಲೀಲ ಚಿತ್ರಗಳನ್ನು ಹತ್ತಿಕ್ಕುವ ಸಲುವಾಗಿ ದಂಡ ಹಾಗೂ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾಪಕ್ಕೂ ಒಪ್ಪಿಗೆ ದೊರೆತಿದೆ ಎಂದು ಸಭೆಯ ನಂತರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಸುದ್ದಿಗಾರರಿಗೆ ತಿಳಿಸಿದರು.

ಮನೆಯಲ್ಲೇ 'ಗನ್' ತಯಾರಿಸೋದು ಹೇಳಿಕೊಟ್ಟ ಮಹಿಳಾ IPS

ಅಕ್ರಮವಾಗಿ ಠೇವಣಿ ಸಂಗ್ರಹಿಸಿ ಜನರಿಗೆ ವಂಚನೆ ಮಾಡುವ ಪ್ರಕರಣಗಳನ್ನು ತಡೆಯುವ ಸಲುವಾಗಿ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಮಸೂದೆಗೂ ಸಂಪುಟ ಒಪ್ಪಿಗೆ ನೀಡಿದೆ. ಈಗಾಗಲೇ ಈ ಕುರಿತ ಸುಗ್ರೀವಾಜ್ಞೆಯೊಂದು ಚಾಲ್ತಿಯಲ್ಲಿದೆ.

click me!