ಬಸ್ ಪ್ರಯಾಣ ದರ ಏರಿಕೆ ; ಸೆ. 16 ರಿಂದಲೇ ಜಾರಿ

By Web DeskFirst Published Sep 11, 2018, 7:54 AM IST
Highlights

ಸೆ.16 ರ ನಂತರ ಬಸ್ ಪ್ರಯಾಣ ದರ ಹೆಚ್ಚಳ | ಶೇ.18 ಏರಿಕೆಗೆ ಸಿಎಂ ಒಪ್ಪುವುದು ಕಷ್ಟ |ದರ ಏರಿಕೆ ನಿರ್ಧಾರ ಕೈ ಬಿಡಲ್ಲ: ತಮ್ಮಣ್ಣ
 

ಬೆಂಗಳೂರು (ಸೆ. 11): ಗಣೇಶ ಚತುರ್ಥಿಯ ನಂತರ ಬಸ್ ಪ್ರಯಾಣ ದರ ಏರಿಕೆ ಬಹುತೇಕ ನಿಶ್ಚಿತವಾಗಿದ್ದು, ಎಷ್ಟು ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂಬುದು ನಿರ್ಧಾರವಾಗಬೇಕಾಗಿದೆ.

ಸಾರಿಗೆ ಸಂಸ್ಥೆಗಳ ನಷ್ಟದ ಹಿನ್ನೆಲೆಯಲ್ಲಿ ಸಚಿವ ಡಿ.ಸಿ.ತಮ್ಮಣ್ಣ ಅವರು ಶೇ.18 ರಷ್ಟು ಹೆಚ್ಚಿಸಬೇಕು ಎಂದು ಪಟ್ಟು ಹಿಡಿದಿದ್ದು, ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಅವರು ಇದಕ್ಕೆ ಒಪ್ಪುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಡೀಸೆಲ್ ಮೇಲಿನ ತೆರಿಗೆ ಇಳಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿರುವುದರಿಂದ ಪ್ರಯಾಣ ದರ ಶೇ.18 ರಷ್ಟು ಹೆಚ್ಚಳಕ್ಕೆ ಒಪ್ಪಿಗೆ ನೀಡುವುದು ಅನುಮಾನ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. 

ಈ ನಡುವೆ, ಬಸ್ ಪ್ರಯಾಣ ದರ ಏರಿಸುವ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ದಿನೇ ದಿನೇ ಪೆಟ್ರೋಲ್, ಡೀಸೆಲ್ ದರವನ್ನು ಪೈಸೆ ಲೆಕ್ಕದಲ್ಲಿ ಹೆಚ್ಚಿಸಲಾಗಿದೆ. ಹೀಗಾಗಿ ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೀಸೆಲ್ ದರ ಏರಿಕೆಯಿಂದ ಮೂರು ತಿಂಗಳ ಅವಧಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಷ್ಟವಾಗಿದೆ. ಶೇ.18 ರಷ್ಟು ಬಸ್ ಟಿಕೆಟ್ ದರ ಹೆಚ್ಚಿಸುವ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಆದರೂ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು. ಸೆ.16 ರ ನಂತರ ಹೊಸ ದರ ಜಾರಿಗೆ ಬರಲಿದೆ ಎಂದು ತಿಳಿಸಿದರು.

ನಾವು ಡೀಸೆಲ್ ದರ ಏರಿಕೆಯಿಂದ ರೋಸಿ ಹೋಗಿದ್ದೇವೆ. ನಷ್ಟ ಸರಿದೂಗಿಸಲು ಸಾಧ್ಯವೇ ಆಗುತ್ತಿಲ್ಲ ಎನ್ನುವ ಸ್ಥಿತಿ ಇದೆ. ಹೀಗಾಗಿ ಅನಿವಾರ್ಯವಾಗಿ ಬಸ್ ಪ್ರಯಾಣ ದರ ಏರಿಕೆ ಮಾಡುತ್ತಿದ್ದೇವೆ. ಈ ಸತ್ಯ ಸಂಗತಿ ಜನರಿಗೂ ಗೊತ್ತಿದೆ. ಒಂದು ವರ್ಷದ ಅವಧಿಯಲ್ಲಿ ಅನೇಕ ಬಂದ್ಗಳು ನಾನಾ ಕಾರಣಕ್ಕೆ ನಡೆಯುತ್ತವೆ.

ಆಗ ಸಾರಿಗೆ ಇಲಾಖೆಗೆ ನೂರಾರು ಕೋಟಿ ನಷ್ಟ ಆಗುತ್ತದೆ. ಒಂದು ದಿನ ಬಂದ್ ನಡೆದರೆ ಸಾರಿಗೆ ಇಲಾಖೆಗೆ ₹ 15ರಿಂದ 16 ಕೋಟಿ ರು. ನಷ್ಟವಾಗುತ್ತದೆ. ಈಗ ಒಳ್ಳೆಯ ಉದ್ದೇಶದಿಂದ ಬಂದ್ ಮಾಡಲಾಗಿದೆ. ಆದರೆ, ಸೋಮವಾರ ಒಂದೇ ದಿನ ಸಂಸ್ಥೆಗೆ ₹16 ಕೋಟಿ ನಷ್ಟ ಸಂಭವಿಸಿದೆ ಎಂದು ತಿಳಿಸಿದರು.

ಬಸ್ ದರ ಶೇ.18 ಏರಿಕೆಯಾದರೆ ಎಷ್ಟಾಗಬಹುದು ಹೆಚ್ಚಳ? ಇಲ್ಲಿದೆ ವರದಿ
click me!