ಸಿದ್ದರಾಮಯ್ಯ ಪುತ್ರ v/s ಬಿಎಸ್‌ವೈ ಪುತ್ರ..?

By Suvarna Web DeskFirst Published Mar 27, 2018, 9:12 AM IST
Highlights

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಷೇತ್ರ ವರುಣಾದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಕಣಕ್ಕಿಳಿಸುವ ಪ್ರಯತ್ನ ಆರಂಭವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು/ ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಷೇತ್ರ ವರುಣಾದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಕಣಕ್ಕಿಳಿಸುವ ಪ್ರಯತ್ನ ಆರಂಭವಾಗಿದೆ.

ಈ ಬಾರಿ ಸಿದ್ದರಾಮಯ್ಯ ಅವರು ವರುಣಾದಿಂದ ತಮ್ಮ ಪುತ್ರ ಯತೀಂದ್ರ ಅವರನ್ನು ಕಣಕ್ಕಿಳಿಸಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ವಲಸೆ ಹೋಗಲಿದ್ದಾರೆ ಎಂಬ ಮಾಹಿತಿಯಿದೆ. ಆದರೆ, ಕೊನೆಯ ಹಂತದಲ್ಲಿ ಸಿದ್ದರಾಮಯ್ಯ ವರುಣಾ ಕ್ಷೇತ್ರಕ್ಕೇ ವಾಪಸಾಗಲಿದ್ದಾರೆ ಎಂಬುದು ಬಿಜೆಪಿಯ ಎಣಿಕೆ. ಒಟ್ಟಿನಲ್ಲಿ ಅಪ್ಪ-ಮಗನ ಪೈಕಿ ಯಾರೇ ಸ್ಪರ್ಧಿಸಿದರೂ ಈ ಕ್ಷೇತ್ರದಿಂದ ಪ್ರಬಲ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಬೇಕು ಎಂಬ ಚಿಂತನೆ ಪಕ್ಷದ ಕೆಲವು ಮುಖಂಡರಲ್ಲಿ ಮೊಳಕೆಯೊಡೆದಿದೆ.

ಆದರೆ, ವಿಜಯೇಂದ್ರ ಅವರಿಗೆ ಟಿಕೆಟ್‌ ನೀಡುವ ಬಗ್ಗೆ ಸಾಕಷ್ಟುಅನುಮಾನಗಳೂ ಇವೆ. ಪಕ್ಷದಲ್ಲಿ ಯಾರೇ ಆಗಿರಲಿ, ಅಪ್ಪ-ಮಕ್ಕಳಿಗೆ ಟಿಕೆಟ್‌ ನೀಡುವ ಬಗ್ಗೆ ಪಕ್ಷದ ವರಿಷ್ಠರು ಇದುವರೆಗೆ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಯಡಿಯೂರಪ್ಪ ಅವರ ಮತ್ತೊಬ್ಬ ಪುತ್ರ ಹಾಗೂ ಹಾಲಿ ಶಾಸಕ ಬಿ.ವೈ.ರಾಘವೇಂದ್ರ ಅವರು ಕಣದಿಂದ ಹಿಂದೆ ಸರಿಯುತ್ತಿರುವುದರಿಂದ ವಿಜಯೇಂದ್ರಗೆ ಟಿಕೆಟ್‌ ನೀಡುವುದರಲ್ಲಿ ತಪ್ಪೇನಿಲ್ಲ ಎಂಬ ವಾದವೂ ಕೇಳಿಬರುತ್ತಿದೆ. ಆದರೆ, ಇದಕ್ಕೆ ವರಿಷ್ಠರು ಎಷ್ಟರ ಮಟ್ಟಿಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

ಪುತ್ರ ವಿಜಯೇಂದ್ರ ಅವರನ್ನು ಚುನಾವಣಾ ರಾಜಕೀಯಕ್ಕೆ ತರುವ ಬಗ್ಗೆ ಯಡಿಯೂರಪ್ಪ ಅವರಿಗೆ ವಿಶೇಷ ಒಲವೇನೂ ಇಲ್ಲ. ಹೀಗಾಗಿ ಈಗಲೂ ಯಡಿಯೂರಪ್ಪ ಅವರು ಪುತ್ರನ ಪರವಾಗಿ ಲಾಬಿ ನಡೆಸುತ್ತಿಲ್ಲ. ಆದರೆ, ಮೈಸೂರು ಜಿಲ್ಲೆಯ ಕೆಲವು ಮುಖಂಡರು ವಿಜಯೇಂದ್ರ ಅವರನ್ನು ಚುನಾವಣಾ ರಾಜಕಾರಣಕ್ಕೆ ಕರೆತರುವ ಪ್ರಯತ್ನ ನಡೆಸಿದ್ದಾರೆ. ಇದಕ್ಕೆ ವಿಜಯೇಂದ್ರ ಅವರ ಸಹಮತವೂ ಇದೆ ಎಂದು ಮೂಲಗಳು ತಿಳಿಸಿವೆ.

ವರುಣಾ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಮತಗಳೂ ನಿರ್ಣಾಯಕವಾಗಿವೆ. ಮೇಲಾಗಿ ವಾಲ್ಮೀಕಿ ಸಮುದಾಯದ ಮತಗಳೂ ಹೆಚ್ಚಿನ ಸಂಖ್ಯೆಯಲ್ಲಿವೆ. ಪರಿಶಿಷ್ಟಜಾತಿಯಲ್ಲಿ ಎಡಗೈ ಪಂಗಡದ ಬೆಂಬಲ ಸಿಗುವ ನಿರೀಕ್ಷೆಯಿದೆ. ಆದರೆ, ಇವೆಲ್ಲ ಮತಗಳನ್ನು ಸೆಳೆಯುವಂಥ ಪ್ರಬಲ ಅಭ್ಯರ್ಥಿಯ ಕೊರತೆ ಕಾಡುತ್ತಿದೆ. ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಕಾ.ಪು.ಸಿದ್ದಲಿಂಗಸ್ವಾಮಿ ಅವರು ಸುಮಾರು 54 ಸಾವಿರ ಮತಗಳನ್ನು ಗಳಿಸಿದ್ದರು. ಆದರೆ, ಆ ವೇಳೆ ಬಿಜೆಪಿ ಅಭ್ಯರ್ಥಿ ಠೇವಣಿಯನ್ನೂ ಉಳಿಸಿಕೊಂಡಿರಲಿಲ್ಲ. ಈಗ ಸಿದ್ದರಾಮಯ್ಯ ಅವರು ಬಲಾಢ್ಯಲರಾಗಿರುವುದರಿಂದ ಸಿದ್ದಲಿಂಗಸ್ವಾಮಿ ಬದಲು ವಿಜಯೇಂದ್ರ ಅವರನ್ನೇ ಕಣಕ್ಕಿಳಿಸಿದರೆ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಜೆಪಿ ನಾಯಕರೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಸಂಘಟಿತರಾಗಿ ಕೆಲಸ ಮಾಡಿ ಗೆಲ್ಲಿಸುತ್ತೇವೆ:

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ವರುಣಾ ಕ್ಷೇತ್ರದಿಂದ ಸ್ಪರ್ಧಿಸುವುದಾದರೆ ತಾವೆಲ್ಲರೂ ಸಂಘಟಿತರಾಗಿ ಕೆಲಸ ಮಾಡಿ ಗೆಲ್ಲಿಸುವುದಾಗಿ ಜಿ.ಪಂ. ಮಾಜಿ ಅಧ್ಯಕ್ಷ ಕೆ.ಎನ್‌.ಪುಟ್ಟಬುದ್ಧಿ ತಿಳಿಸಿದ್ದಾರೆ.

ಸೋಮವಾರ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ವಿಜಯೇಂದ್ರ ವರುಣಾ ಕ್ಷೇತ್ರದ ಅಭ್ಯರ್ಥಿ ಎಂಬುದು ಅಧಿಕೃತವಲ್ಲ. ಒಂದು ವೇಳೆ ಅವರು ಸ್ಪರ್ಧಿಸುವುದಾದರೆ ಎಲ್ಲರೂ ಸಂಘಟಿತರಾಗಿ ಗೆಲ್ಲಿಸುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ವಿರುದ್ಧ ವಿಜಯೇಂದ್ರ ಅವರು ಪ್ರಬಲ ಅಭ್ಯರ್ಥಿಯಾಗಲಿದ್ದಾರೆ. ಅಲ್ಲದೆ ನಾವೂ ಕೂಡ ಟಿಕೆಟ್‌ ಆಕಾಂಕ್ಷಿಗಳಾಗಿದ್ದು, ಯತೀಂದ್ರ ಅವರನ್ನು ಎದುರಿಸಲು ಸಿದ್ಧರಿದ್ದೇವೆ. ಆದರೆ ಪಕ್ಷ ಯಾವ ತೀರ್ಮಾನ ಕೈಗೊಳ್ಳುವುದೋ ಅದಕ್ಕೆ ಬದ್ಧರಾಗಿ ಇರುತ್ತೇವೆ ಎಂದು ತಿಳಿಸಿದರು.

ಆರು ತಿಂಗಳಿನಿಂದಲೂ ಕ್ಷೇತ್ರದಲ್ಲಿ ನಾವು ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಅವರ ಆಡಳಿತ ವೈಖರಿ ಜನರಿಗೆ ಮೆಚ್ಚುಗೆಯಾಗಿದೆ. ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮುಂದಿನ ಆಡಳಿತ ನಡೆಸುವ ವಿಶ್ವಾಸವಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಕಾ.ಪು. ಸಿದ್ದಲಿಂಗಸ್ವಾಮಿ, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್‌.ಡಿ. ಮಹೇಂದ್ರ, ಜಿ.ಪಂ. ಮಾಜಿ ಅಧ್ಯಕ್ಷ ಬಿ.ಎಂ. ರಾಮ…, ಜಿ.ಪಂ. ಸದಸ್ಯ ಎ.ಎಂ. ಗುರುಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಎಸ್‌.ಸಿ. ಅಶೋಕ್‌ ಇದ್ದರು.

click me!