
ಬೆಂಗಳೂರು(ಜು.21): ದಿಢೀರ್ ಬೆಳವಣಿಗೆಯೊಂದರಲ್ಲಿ ಕೇಂದ್ರ ಮಾಜಿ ಸಚಿವ, ಬಿ.ಎಸ್.ಯಡಿಯೂರಪ್ಪ ಆಪ್ತ ಧನಂಜಯಕುಮಾರ್ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ಅವರ 176ನೇ ಜಯಂತಿ ಅಂಗವಾಗಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದ ರಾಹುಲ್‌ಗಾಂಧಿ ಅವರ ಸಮ್ಮುಖದಲ್ಲಿ ಧನಂಜಯಕುಮಾರ್ ಪಕ್ಷ ಸೇರುವ ವೇದಿಕೆ ಸಜ್ಜಾಗಿತ್ತು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸಚಿವ ಆರ್.ವಿ.ದೇಶಪಾಂಡೆ ಅವರೆಲ್ಲರ ಸಮ್ಮುಖದಲ್ಲಿ ರಾಹುಲ್‌ಗಾಂಧಿ ಅವರು ಪಕ್ಷದ ಬಾವುಟ ನೀಡುವ ಮೂಲಕ ಬರ ಮಾಡಿಕೊಂಡರು.
ಇದೇವೇಳೆ, ರಾಹುಲ್‌ಗಾಂಧಿ ಅವರಿಗೆ ಮೈಸೂರು ಪೇಟ ಮತ್ತು ಶಾಲು ಹೊದಿಸುವ ಮೂಲಕ ಧನಂಜಯಕುಮಾರ್ ಅಭಿನಂದಿಸಿದರು. ಧನಂಜಯ ಕುಮಾರ್ ಅವರ ಈ ಸೇರ್ಪಡೆಯ ಹಿಂದೆ ಕರಾವಳಿ ಭಾಗದ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರನ್ನು ಕ್ರಮೇಣ ರಾಜಕೀಯದಿಂದ ಹಿನ್ನೆಲೆಗೆ ಕಳುಹಿಸುವ ಪ್ರಯತ್ನವೆಂದೇ ವ್ಯಾಖ್ಯಾನಿಸಲಾಗುತ್ತಿದೆ. ರಾಜ್ಯ ನಾಯಕತ್ವದ ವಿರುದ್ಧ ಸದಾ ಬುಸುಗುಡುವ ಜನಾರ್ದನ ಪೂಜಾರಿ ಅವರಿಗೆ ಬದಲಾಗಿ ಧನಂಜಯಕುಮಾರ್ ಅವರು ಲೋಕಸಭೆಯ ಅಭ್ಯರ್ಥಿಯೂ ಆಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ಕೇಂದ್ರದಲ್ಲಿ ವಾಜಪೇಯಿ ಸರ್ಕಾರದಲ್ಲಿ ಜವಳಿ ಸಚಿವರಾಗಿ, ಹಣಕಾಸು ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದ ಧನಂಜಯಕುಮಾರ್, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಪ್ರಮುಖ ವಕ್ತಾರರಾಗಿದ್ದರು. ಯಡಿಯೂರಪ್ಪ ಅವರ ಪರಮಾಪ್ತರಾಗಿದ್ದರು. ಅಷ್ಟೇ ಅಲ್ಲ, ಬಿಜೆಪಿಯೊಳಗಿನ ಭಿನ್ನಮತ ಸ್ಫೋಟವಾದಾಗ ಯಡಿಯೂರಪ್ಪ ಕಟ್ಟಿದ್ದ ಕರ್ನಾಟಕ ಜನತಾ ಪಕ್ಷದಲ್ಲಿ ಧನಂಜಯಕುಮಾರ್ ಅವರೇ ಅಧ್ಯಕ್ಷರಾಗಿದ್ದರು. ಆನಂತರ ಇಡೀ ಕೆಜೆಪಿ ಪಕ್ಷ ಬಿಜೆಪಿಯಲ್ಲಿ ವಿಲೀನವಾದಾಗ ಧನಂಜಕುಮಾರ್ ಅವರನ್ನು ವಾಪಸ್ ಸೇರಿಸಿಕೊಳ್ಳಲು ಬಿಜೆಪಿ ನಿರಾಕರಿಸಿತ್ತು. ಬಿಜೆಪಿ ಸೇರ್ಪಡೆ ಅಸಾಧ್ಯ ಎನಿಸಿದಾಗ ಧನಂಜಯಕುಮಾರ್ ಜೆಡಿಎಸ್ ತೆನೆ ಹೊತ್ತರು. ಅಷ್ಟರಲ್ಲಿ ಎದುರಾದ ಲೋಕಸಭಾ ಚುನಾವಣೆಯಲ್ಲಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಈಗಿನ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧವೇ ಸ್ಪರ್ಧಿಸಿ ಸೋಲನುಭವಿಸಿದ್ದರು. ಅಂದಿನಿಂದ ಧನಂಜಕುಮಾರ್ ಸಕ್ರಿಯ ರಾಜಕಾರಣದಿಂದ ಕೊಂಚ ದೂರದಲ್ಲೇ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.