
ಹುಬ್ಬಳ್ಳಿ : ಲಿಂಗಾಯತ ಮುಖ್ಯಮಂತ್ರಿಗಳಿಂದ ಉತ್ತರ ಕರ್ನಾಟಕ ಭಾಗಕ್ಕೆ ಕೊಡುಗೆ ಏನು ಎಂದು ಕೇಳಿದವರು ಯಾರು? ಚನ್ನಪಟ್ಟಣದಲ್ಲಿ ಜಾತಿ ಮತ್ತು ಹಣದ ಆಮಿಷಕ್ಕೆ ಬಲಿಯಾಗಿ ಮತಹಾಕಿದಿರಿ ಎಂದು ಹೇಳಿದವರು ಯಾರು?
ಉತ್ತರ ಕರ್ನಾಟಕದಿಂದ ರಾಜ್ಯಕ್ಕೆ ಬರುವ ಆದಾಯ ಏನು ಎಂದು ಕೇಳಿದವರು ಕುಮಾರಸ್ವಾಮಿ ಅವರಲ್ಲವೇ? ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ಹಾಕಿರುವ ಮೂರು ಪ್ರಶ್ನೆಗಳಿವು.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ಅಧಿಕಾರ ಸಿಗದೆ ಹತಾಶೆ ಭಾವನೆಯಿಂದ ಪ್ರತ್ಯೇಕ ಉತ್ತರ ಕರ್ನಾಟಕ ಕುರಿತು ಹೇಳಿಕೆ ನೀಡಲಾಗುತ್ತಿದೆ ಎಂಬ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ಪ್ರತಿಪಕ್ಷ ನಾಯಕನಾಗಿ ನನ್ನ ಕರ್ತವ್ಯ ಮಾಡಿದ್ದೇನೆ.
ಅಧಿಕಾರ ಸಿಗದ ಕಾರಣಕ್ಕಾಗಿ ಹತಾಶೆಗೊಳಗಾಗಿ ಮಾತನಾಡಿಲ್ಲ. ಹತಾಶೆ ಭಾವನೆ ನಮ್ಮಲಿಲ್ಲ. ಅವಕಾಶವಾದಿ ರಾಜಕಾರಣವನ್ನು ಬಿಜೆಪಿ ಮಾಡಿಲ್ಲ. ತತ್ವ ಸಿದ್ಧಾಂತ ಮೇಲೆ ರಾಜಕೀಯ ಮಾಡಲಾಗಿದೆ’ ಎಂದು ಬಲವಾಗಿ ಪ್ರತಿಪಾದಿಸಿದರು. ಹುಬ್ಬಳ್ಳಿಯಲ್ಲಿ ಲಿಂಗಾಯತ ಮುಖ್ಯ ಮಂತ್ರಿಗಳಿಂದ ಉತ್ತರ ಕರ್ನಾಟಕ ಭಾಗಕ್ಕೆ ಕೊಡುಗೆ ಏನು ಎಂದು ಕೇಳಿದವರು ಯಾರು? ಚನ್ನಪಟ್ಟಣದಲ್ಲಿ ಜಾತಿ ಮತ್ತು ಹಣದ ಆಮಿಷಕ್ಕೆ ಬಲಿಯಾಗಿ ಮತಹಾಕಿದಿರಿ ಎಂದು ಹೇಳಿದವರು ಯಾರು? ಉತ್ತರ ಕರ್ನಾಟಕದಿಂದ ರಾಜ್ಯಕ್ಕೆ ಬರುವ ಆದಾಯ ಏನು ಎಂದು ಕೇಳಿದವರು ಕುಮಾರಸ್ವಾಮಿ ಅವರಲ್ಲವೇ? ಈ ಪ್ರಶ್ನೆಗಳಿಗೆ ದೇವೇಗೌಡ ಅವರು ಉತ್ತರಿಸಬೇಕು ಎಂದು ತಿರುಗೇಟು ನೀಡಿದರು.
ಜೆಡಿಎಸ್ ವರಿಷ್ಠ ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬೇಜವಾಬ್ದಾರಿ ಹೇಳಿಕೆಯಿಂದ ಉತ್ತರ ಕರ್ನಾಟಕ ಹೊತ್ತಿ ಉರಿಯುವಂತಾಗಿದೆ. ಮಗ ಮಾಡಿದ ತಪ್ಪನ್ನು ತಿದ್ದಿಕೊಳ್ಳುವಂತೆ ಹೇಳುವ ಬದಲು ಇಲ್ಲದ ಆರೋಪಗಳನ್ನು ಮಾಡುವುದು ಸರಿಯಲ್ಲ. ಬೆಳಗಾವಿಯಲ್ಲಿ ಮಠಾಧೀಶರ ಪ್ರತಿಭಟನೆಯಲ್ಲಿ ಭಾಗಿಯಾಗಿ ಅಖಂಡ ಕರ್ನಾಟಕಕ್ಕೆ ಬೆಂಬಲ ನೀಡಿದ್ದೇನೆ. ಮುಖ್ಯಮಂತ್ರಿ ಮಾಡುವ ಕೆಲಸವನ್ನು ಮಾಡಿರುವುದು ತಪ್ಪಾ? ನನ್ನ ಕೆಲಸವನ್ನು ನಾನು ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದೇನೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.