
ನವದೆಹಲಿ(ಜ.20): ಯೋಧರು ತಮ್ಮ ಕಷ್ಟ, ತಮಗಿರುವ ಸಮಸ್ಯೆಗಳನ್ನು ತೋಡಿಕೊಳ್ಳುವ ಸೆಲ್ಫೀ ವಿಡಿಯೋಗಳು ಸಾಮಾಜಿಕ ಜಾಲಾತಾಣಗಳಲ್ಲಿ ಒಂದಾದ ಬಳಿಕ ಒಂದರಂತೆ ಕಂಡು ಬರುತ್ತಿವೆ. ಆದರೆ ಇದೀಗ ಭಾರತ- ಬಾಂಗ್ಲಾ ದೇಶದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ ಇರ್ಫಾನ್ ಅಹಮದ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾನೆ. ಇದರಲ್ಲಿ ಈತ ಬೆಚ್ಚಿ ಬೀಳಿಸುವ ಮಾಹಿತಿಯನ್ನು ಬಿಚ್ಚಿಟ್ಟಿದ್ದು, ಬಾಂಗ್ಲಾ ದೇಶಿಗರು ಭಾರತಕ್ಕೆ ನುಸುಳುತ್ತಿರುವುದು ಹೇಗೆ ಎಂಬುವುದನ್ನು ಬಹಿರಂಗಪಡಿಸಿದ್ದಾನೆ.
ಯೋಧ ಇರ್ಫಾನ್ ಹರಿಬಿಟ್ಟ ಸೆಲ್ಫೀ ವಿಡಿಯೋದಲ್ಲಿ ತನ್ನ ಹಿರಿಯ ಅಧಿಕಾರಿಗಳ(ಕಮಾಂಡರ್) ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ನಮ್ಮ ಕಮಾಂಡರ್ ಬಾಂಗ್ಲಾ ದೇಶಿಗರನ್ನು ಅಕ್ರಮವಾಗಿ ಭಾರತದ ಗಡಿಯೊಳಗೆ ಪ್ರವೇಶಿಸಲು ಬಿಡುತ್ತಾರೆ. ಇವರ ಆದೇಶ ಉಲ್ಲಂಘಿಸಿದ ಯೋಧರಿಗೆ ಕಠೋರ ಶಿಕ್ಷೆ ನೀಡಲಾಗುತ್ತದೆ ಎಂಬ ಶಾಕಿಂಗ್ ಮಾಹಿತಿ ಹೊರ ಹಾಕಿದ್ದಾರೆ. ಜೊತೆಗೆ ಈ ವಿಚಾರವನ್ನು ಹೊರ ಜಗತ್ತಿಗೆ ತಿಳಿಸಲು ಪ್ರಯತ್ನಿಸಿದ ಯೋಧರನ್ನು ನಕಲಿ ಎನ್'ಕೌಂಟರ್ ಮೂಲಕ ಹತ್ಯೆಗೈಯ್ಯಲಾಗುತ್ತದೆ ಎಂಬುವುದನ್ನೂ ತಿಳಿಸಿದ್ದಾರೆ.
ಇರ್ಫಾನ್'ಗೂ ಇಂತಹುದೇ ಪರಿಸ್ಥಿತಿ ಎದುರಾಗಿದ್ದು, ಇವರ ಹಿರಿಯ ಅಧಿಕಾರಿಗಳು ಬಾಂಗ್ಲಾ ದೇಶಿಗರನ್ನು ಬಾರತದ ಗಡಿಯೊಳಗೆ ನುಸುಳಲು ಬಿಡುವಂತೆ ಆದೇಶಿಸಿದ್ದರಂತೆ. ಇದನ್ನು ವಿರೋಧಿಸಿದಾಗ ಮನಬಂದಂತೆ ಥಳಿಸಿ, ಕತ್ತಲ ಕೋಣೆಯಲ್ಲಿ ಕೂಡಿ ಹಾಕಿದ್ದರಂತೆ . ಆದರೆ ಇರ್ಫಾನ್ ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತನಗೆದುರಾದ ಪರಿಸ್ಥಿತಿ, ಅಧಿಕಾರಿಗಳ ದುವರ್ತನೆ ಹಾಗೂ ತನ್ನದೊಂದು ಪುಟ್ಟ ಸಂದೇಶವುಳ್ಳ ಈ ಬೆಚ್ಚಿ ಬೀಳಿಸುವ ವಿಡಿಯೋದಲ್ಲಿ ಯೋಧ ಇರ್ಫಾನ್ ಅಹಮದ್ ಹೇಳಿದ್ದಿಷ್ಟು.
'
'ನಾವು ಮುಸಲ್ಮಾನರು ದೇಶಭಕ್ತರಲ್ಲವೇ? ಇದನ್ನು ನಾನು ನಿಮ್ಮೆಲ್ಲರಲ್ಲಿ ಕೇಳ ಬಯಸುತ್ತೇನೆ. ಪ್ರಧಾನ ಮಂತ್ರಿ, ಮಾನ್ಯ ನರೇಂದ್ರ ಮೋದಿಜೀಯ ಈ ದೇಶದಲ್ಲಿ ದೇಶಭಕ್ತಿಯ ಕುರಿತಾಗಿ ಮಾತನಾಡುವವರು ಹಾಗೂ ಕೆಲ BSF ಯೋಧರು ನಮ್ಮಲ್ಲಿರುವ ದೇಶಭಕ್ತಿಯ ಬಗ್ಗೆ ಅದ್ಯಾವ ರೀತಿ ತಮಾಷೆ ಮಾಡಿದ್ದಾರೆಂದರೆ ಇಂದು ನಾನು ನನ್ನ ಜೀವ ಉಳಿಸಿಕೊಳ್ಳಲು ಹಾಗೂ ನ್ಯಾಯಕ್ಕಾಗಿ ಅಲೆದಾಡಬೇಕಾಗಿ ಬಂದಿದೆ. ನಾನು ಇರ್ಫಾನ್ ಅಹಮದ್ BSF ಯೋಧ. 2016ರ ಜನವರಿ 15ರಂದು ಬೆಳಿಗ್ಗೆ 8 ಗಂಟೆಗೆ ನನ್ನ ಕಮಾಂಡರ್ ಒತ್ತಾಯಪೂರ್ವಕವಾಗಿ 50 ಬಾಂಗ್ಲಾದೇಶಿಗರನ್ನು ಭಾರತದ ಗಡಿಯೊಳಗೆ ಪ್ರವೇಶಿಸಲು ಬಿಡುವಂತೆ ನನಗೆ ಆದೇಶ ನೀಡಿದರು. ಆದರೆ ನಾನು ಈ ರೀತಿ ಮಾಡುವುದು ತಪ್ಪು ಎಂದು ಕಮಾಂಡರ್'ಗೆ ತಿಳಿಸಿದೆ. ಇದಕ್ಕವರು ಇಲ್ಲಿ ಆದೇಶ ನೀಡುವ ಕೆಲಸ ನನ್ನದು, ಆ ಅಧಿಕಾರ ನಿನಗಿಲ್ಲ ಎಂದರು. ಆದರೂ ಇದು ತಪ್ಪು ನಾನು ಅವರನ್ನು ಒಳ ಬರಲು ಬಿಡುವುದಿಲ್ಲ ಇಲ್ಲಿ ಡ್ಯೂಟಿ ಮಾಡುತ್ತಿರುವುದು ಎಂದು ಅವರ ಮಾತನ್ನು ವಿರೋಧಿಸಿದೆ. ಇದಕ್ಕವರು ನೀನು ಯಾರ ಬಳಿ ಬೇಕಾದರೂ ತಿಳಿಸು ಯಾಕೆಂದರೆ ಈ ಆದೇಶ ನನ್ನ ಹಿರಿಯ ಅಧಿಕಾರಿಗಳಿಂದ ಬಂದಿದ್ದು ಎಂದರು. ಆದರೆ ನಾನು ಮತ್ತೊಮ್ಮೆ ಸರ್, ನಿಮ್ಮ ಆದೇಶವನ್ನು ನಾನು ಪಾಲಿಸಲು ತಯಾರಿಲ್ಲ ಎಂದು ತಿಳಿಸಿದೆ. ಆದರೆ ಅವರು ಇಂತಹ ಯಾವುದೇ ನಿಯಮ ಹಾಗೂ ಆದೇಶ ಇಲ್ಲದಿದ್ದರೂ ನನ್ನ ಮೇಲೆ ಒತ್ತಡ ಹೇರಿದರು. ನನ್ನ ಹಿರಿಯ ಅಧಿಕಾರಿ ಎಂಬ ನೆಲೆಯಲ್ಲಿ ಅವರ ಮಾತಿಗೆ ಗೌರವ ನೀಡಿ ಅವರ ಆದೇಶ ಪಾಲಿಸಬೇಕಾಯಿತು. ಬಳಿಕ ನಾನು ಅವರ ವಿರುದ್ಧ ದೂರು ನೀಡಲು ಪ್ರಯತ್ನಿಸಿದೆ. ಈ ಸಂದರ್ಭದಲ್ಲಿ ಅವರು ನನ್ನನ್ನೇ ತಪ್ಪಿತಸ್ಥನಾಗಿ ಬಿಂಬಿಸಲು ಪ್ರಯತ್ನಿಸಿದರು ಆದರೆ ಅವರ ಯಾವುದೇ ತಂತ್ರ ಯಶಸ್ವಿಯಾಗಲಿಲ್ಲ. ಈ ಪ್ರಕರಣ ನಡೆದ ತುಂಬಾ ಸಮಯದ ಬಳಿಕ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2016ರ ಎಪ್ರಿಲ್ 19ರಂದು ನನ್ನನ್ನು ಮತ್ತೆ ಅಜ್ಞಾತ ಸ್ಥಳಕ್ಕೆ ಕೊಂಡೊಯ್ದರು, ಆದರೆ ಅಲ್ಲಿಂದ ನಾನು ತಪ್ಪಿಸಿಕೊಂಡು ಸಹಾಯಕ್ಕಾಗಿ ಕರೆ ಮಾಡಿದೆ, ನನಗೆ ಯಾವುದೇ ಸಹಾಯ ಸಿಗಲಿಲ್ಲ. ಬಳಿಕ ನಾನು ಅಲ್ಲಿಂದ ಬೆಟಾಲಿಯನ್ ಮುಖ್ಯ ಕಚೇರಿಗೆ ತೆರಳಿ ದೂರು ನೀಡಿದೆ. ಇದನ್ನು ಆಲಿಸಿದ ಅವರು ನನ್ನನ್ನು ಕತ್ತಲ ಕೋಣೆಯಲ್ಲಿ ಬಂಧಿಸಿ, ಹಿಂಸಿಸಿದರು. ಅಲ್ಲಿ ನನ್ನನ್ನು ಥಳಿಸಿ, ದೇಹದ ಮೇಲೆ ಸುಟ್ಟ ಸಿಗರೇಟ್ ಇಟ್ಟರು ಹಾಗೂ ನನ್ನದೇ ತಪ್ಪು ಎಂದು ಒಪ್ಪಿಕೊಳ್ಳುವಂತೆ ಒತ್ತಡ ಹೇರಿದರು. ಕತ್ತಲ ಕೋಣೆಗೆ ಹಾಕುವ ಮುನ್ನ ನಾನು ನನ್ನ ಇನ್ಸ್ಪೆಕ್ಟರ್ ಜನರಲ್ ಐಜಿ ಸಾಹೇಬರಿಗೂ ಕರೆ ಮಾಡಿದ್ದೆ ಆದರೆ ಅವರು ನಾನೀಗ ಮೀಟಿಂಗ್'ನಲ್ಲಿ ಬ್ಯೂಸಿಯಾಗಿದ್ದೇನೆ, ನಿಮ್ಮ ಸಮಸ್ಯೆ ಆಲಿಸಲು ನನ್ನ ಬಳಿ ಸಮಯ ಇಲ್ಲ ಎಂದು ಕರೆ ಕಟ್ ಮಾಡಿದ್ದರು.
ನನ್ನ ಮನೆಯವರೂ ಈಗ ನನ್ನ ಬೆಂಬಲಕ್ಕಿಲ್ಲ ಎಂಬ ವಿಚಾರವನ್ನು ಹೇಳಲು ತುಂಬಾ ದುಃಖವಾಗುತ್ತಿದೆ. ಈಗ ನನ್ನ ಜೀವಕ್ಕೂ ಅಪಾಯವಿದೆ. ಆದರೆ ಈ ವಿಡಿಯೋ ಮೂಲಕ ಈ ವಿಚಾರವನ್ನು ಮಾನ್ಯ ಪ್ರಧಾನಿ, ಗೃಹ ಸಚಿವಾಲಯ, ಡೈರೆಕ್ಟರ್ ಜನರಲ್ ಹಾಗೂ BSF ಅಧಿಕಾರಿಗಳಿಗೆ ತಲುಪಿಸಲು ಇಚ್ಛಿಸುತ್ತೇನೆ. ಮೋದಿಜೀ ನನ್ನ ಧ್ವನಿ ನಿಮ್ಮ ಬಳಿ ತಲುಪಿದರೆ ನನಗೆ ನ್ಯಾಯ ಕೊಡಿಸಿ. ಯಾಕೆಂದರೆ ಯಾವ ದಿನ ನೀವು ಪ್ರಧಾನಿ ಸ್ಥಾನವನ್ನು ಪಡೆದಿದ್ದಿರೋ ಕೇವಲ ನಾನು ಮಾತ್ರವಲ್ಲ, ಬದಲಾಗಿ ಈ ದೇಶದ ಪ್ರತಿಯೊಬ್ಬ ಯೋಧನೂ 'ಮೋದಿಜೀ ಅಧಿಕಾರ ಸ್ವೀಕರಿಸಿದ್ದಾರೆ. ಇನ್ನು ಏನಾದರೂ ಒಳ್ಳೆಯದಾಗುತ್ತದೆ, ಯೋಧರ ಸಮಸ್ಯೆ ಪರಿಹರಿಸುತ್ತಾರೆ. ಸೈನ್ಯವೂ ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತದೆ ಹಾಗೂ ಭಾರತ ಸುರಕ್ಷಿತವಾಗಿರುತ್ತದೆ ಎಂಬ ನಂಬಿಕೆ ಇಟ್ಟಿದ್ದೆವು. ಆದರೆ ಇಂದು ಇಲ್ಲಿ ಅಕ್ರಮ ನಡೆಯುತ್ತಿದ್ದು, ಇದನ್ನು ನಾವು ಅನುಭವಿಸಬೇಕಾಗಿದೆ. ನಾವು ನಿಮ್ಮ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದೇವೆ. ಆದರೂ ಇಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ತೇಜ್ ಯಾದವ್ ಈಗಾಗಲೇ ನಮಗೆ ನೀಡುತ್ತಿರುವ ಆಹಾರದ ಬಗ್ಗೆ ಕುರಿತು ವಿಡಿಯೋ ಕಳುಹಿಸಿದ್ದಾನೆ. ಈಗ ನಾನು ಈ ಕಠೋರ ಸತ್ಯವನ್ನು ಬಹಿರಂಗಪಡಿಸುತ್ತಿದ್ದೇನೆ. ದಯವಿಟ್ಟು ಇದನ್ನು ಗಂಭೀರವಾಗಿ ಪರಿಗಣಿಸಿ, ಈ ಮೂಲಕ ನಮ್ಮ ಭಾರತೀಯ ಸೇನೆ ಉಳಿಸಿ ಇದರಿಂದ ದೇಶವೂ ಸುರಕ್ಷಿತವಾಗಿರುತ್ತದೆ. ನನ್ನ ಜೀವಕ್ಕೆ ಅಪಾಯವಿದೆ, ಇದು ತಿಳಿದಿದ್ದರೂ ವಿಡಿಯೋ ಮೂಲಕ ನಿಮಗೆ ಇದನ್ನು ತಿಳಿಸಲು ಪ್ರಯತ್ನಿಸಿದ್ದೇನೆ. ಜೈ ಹಿಂದ್, ಜೈ ಭಾರತ್'
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.