ಮಂಡ್ಯ[ಸೆ.26]: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಕೆ.ಆರ್.ಪೇಟೆ ಕ್ಷೇತ್ರದಿಂದ ಕಣಕ್ಕಿಳಿಸುವ ವಿಷಯ ಪಕ್ಷದಲ್ಲಿ ಪ್ರಸ್ತಾಪವಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್‌್ಥನಾರಾಯಣ್ ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಅವರನ್ನು ಕಣಕ್ಕಿಳಿಸಬೇಕೆಂಬುದು ಸ್ಥಳೀಯರ ಅಭಿಪ್ರಾಯವಾಗಿರಬಹುದು. ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಆ ಬಗ್ಗೆ ನಿರ್ಧಾರ ಮಾಡಲಿದೆ ಎಂದು ಹೇಳಿದರು.
undefined
ಸಂಸದೆ ಸುಮಲತಾ ಅವರು ಬಿಜೆಪಿಗೆ ಬೆಂಬಲ ಕೊಡುತ್ತಾರಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಹಿಂದೆ ಸುಮಲತಾ ಅವರಿಗೆ ನಾವು ಬೆಂಬಲ ನೀಡಿದ್ದೆವು. ಈಗ ನಮಗೆ ಅವರ ಬೆಂಬಲ ಬೇಕು. ಕೊಡುವುದು ಬಿಡುವುದು ಅವರಿಗೆ ಬಿಟ್ಟವಿಷಯ ಎಂದು ತಿಳಿಸಿದರು. ಇದೇ ವೇಳೆ ಸಂಸದೆ ಸುಮಲತಾ ಅವರೊಂದಿಗೆ ನಾವು ಈ ವಿಚಾರ ಕುರಿತು ಮಾತನಾಡಿಲ್ಲ ಎಂದು ತಿಳಿಸಿದರು.
ಬಿಜೆಪಿ ಉಪಚುನಾವಣೆಗೆ ತಯಾರಿ ನಡೆಸುತ್ತಿದ್ದು, ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಹಾಕಬೇಕು? ಯಾವ ಕ್ಷೇತ್ರದ ಉಸ್ತುವಾರಿಯನ್ನು ಯಾರಿಗೆ ನೀಡಬೇಕು ಎಂಬುದು ಚರ್ಚೆ ಆಗುತ್ತದೆ. ಈ ಪ್ರಕ್ರಿಯೆ ಮುಗಿದ ಮೇಲೆ ಚುನಾವಣೆಯನ್ನು ಗೆಲ್ಲುವ ತಂತ್ರಗಾರಿಕೆ ಮಾಡಲಾಗುವುದು ಎಂದರು. ಅನರ್ಹ ಶಾಸಕರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡುವ ತೀರ್ಪು ನೋಡಿಕೊಂಡು ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಆದರೆ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಅಭಿಪ್ರಾಯವೂ ಅಷ್ಟೇ ಮುಖ್ಯವಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನಡುವೆ ನಡೆದಿರುವ ಗಲಾಟೆ ವಿಚಾರ ಹೇಳುವುದಾದರೆ ಅವರು ಯಾವಾಗ ಒಂದಾಗುತ್ತಾರೆ, ಯಾವಾಗ ದೂರಾಗುತ್ತಾರೆ ಎಂದು ಹೇಳುವುದೇ ಕಷ್ಟ. ಅವರ ಮಧ್ಯೆ ನಡೆಯುವ ವಾಕ್ ಸಮರ ನಮಗೆ ಲಾಭವಾಗುತ್ತದೆ ಎಂದಷ್ಟೇ ಹೇಳಬಲ್ಲೆ ಎಂದರು.