
ಬೆಂಗಳೂರು : ‘ಪ್ರಣಾಳಿಕೆಯಲ್ಲಿ ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆ ಎಂದಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನಿಯೋಜಿತ ಮುಖ್ಯಮಂತ್ರಿಯಾದ ಬಳಿಕ ರೈತರ ಖಾಸಗಿ ಸಾಲವನ್ನೂ ಮನ್ನಾ ಮಾಡುವುದಾಗಿ ಹೇಳಿದ್ದಾರೆ. ಒಂದು ವೇಳೆ ರೈತರ 53 ಸಾವಿರ ಕೋಟಿ ರು. ಸಾಲ ಮತ್ತು ಖಾಸಗಿ ಸಾಲವನ್ನು ಮನ್ನಾ ಮಾಡದಿದ್ದರೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಂದ್ ಆಚರಿಸುವ ಮೂಲಕ ಜೆಡಿಎಸ್‌ನ ನಿಜ ಬಣ್ಣ ಬಟಾಬಯಲು ಮಾಡುವೆ. ಇಲ್ಲದಿದ್ದರೆ ನನ್ನ ಹೆಸರು ಯಡಿಯೂರಪ್ಪನೇ ಅಲ್ಲ!’
ಇದು ಖುದ್ದು ಯಡಿಯೂರಪ್ಪ ಅವರು ನೂತನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನೀಡಿರುವ ಎಚ್ಚರಿಕೆ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ರಚಿಸಿದ ಹಿನ್ನೆಲೆಯಲ್ಲಿ ನಗರದ ಆನಂದರಾವ್ ವೃತ್ತದಲ್ಲಿರುವ ಗಾಂಧಿ ಪ್ರತಿಮೆ ಬಳಿ ಬುಧವಾರ ಬಿಜೆಪಿ ನಾಯಕರು ಹಾಗೂ ಮುಖಂಡರು ಕಪ್ಪು ಪಟ್ಟಿಧರಿಸಿ ‘ಜನಮತ ವಿರೋಧಿ ದಿನ’ ಆಚರಿಸಿ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಯಡಿಯೂರಪ್ಪ ಮಾತನಾಡಿದರು.
ಈಗ ಮೈತ್ರಿ ಸರ್ಕಾರ ರಚನೆಯಾಗಿರುವುದರಿಂದ ಬಹುಮತ ಬಂದಿಲ್ಲ. ಹೀಗಾಗಿ ಸಾಲ ಮನ್ನಾ ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ನೀಡಿರುವ ಭರವಸೆ ಈಡೇರಿಸದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು. ಮುಖ್ಯಮಂತ್ರಿ ಸ್ಥಾನ ತ್ಯಜಿಸಿ ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ಕುಳಿತುಕೊಳ್ಳಲು ನನಗೆ ಸಂಕೋಚವಿಲ್ಲ. ಆದರೆ, ಚುನಾವಣೆಯಲ್ಲಿ ಬಹುಮತ ಬಾರದಿದ್ದರೆ ವಿರೋಧ ಪಕ್ಷದಲ್ಲಿರುತ್ತೇವೆ ಅಥವಾ ಚುನಾವಣೆಗೆ ಹೋಗುತ್ತೇವೆ ಎಂದು ರಾಜ್ಯದ ಜನರಿಗೆ ನೀಡಿದ್ದ ಭರವಸೆ ಎಲ್ಲಿ ಹೋಯಿತು ದೇವೇಗೌಡ ಹಾಗೂ ಕುಮಾರಸ್ವಾಮಿ ಅವರೇ? ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬನ್ನಿ, ಬಿಜೆಪಿ 130 ಸ್ಥಾನ ಗೆಲ್ಲದಿದ್ದರೆ ನೀವು ಹೇಳಿದಂತೆ ಕೇಳುತ್ತೇವೆ ಎಂದು ಸವಾಲು ಹಾಕಿದರು.
ಮೂರು ತಿಂಗಳ ಸರ್ಕಾರ:
ಸರ್ಕಾರ ರಚನೆಗೂ ಮುನ್ನವೇ ಕಿತ್ತಾಟ ಶುರುವಾಗಿದೆ. ಯಾವುದೇ ದೇವರು ದಿಂಡರ ಬಳಿ ಹೋದರೂ ಮೂರು ತಿಂಗಳ ಮೇಲೆ ಸರ್ಕಾರ ಉಳಿಯುವುದಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅನುಕೂಲಸಿಂಧು ರಾಜಕಾರಣ ಮಾಡುತ್ತಿರುವ ಮೈತ್ರಿ ಸರ್ಕಾರವನ್ನು ರಾಜ್ಯದ 10ರಲ್ಲಿ 8 ಜನರು ಅಪಹಾಸ್ಯ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕೆ ಗೌರವ ಕೊಡದ ಹಾಗೂ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ಗೆ ಜಯಪ್ರಕಾಶ್ ನಾರಾಯಣ್ ಅವರ ಭಾವಚಿತ್ರ ಹಾಕಿಕೊಳ್ಳುವ ನೈತಿಕತೆ ಇಲ್ಲ ಎಂದು ಟೀಕಿಸಿದರು.
ಸರ್ಕಾರದ ಪದಗ್ರಹಣಕ್ಕೆ ಬಂದಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಟೀಕಿಸಿದ ಯಡಿಯೂರಪ್ಪ, ರಾಜ್ಯದ ಜನ ನಿಮ್ಮನ್ನು ತಿರಸ್ಕರಿಸಿ ಅಡ್ರೆಸ್ ಇಲ್ಲದಂತೆ ಮಾಡಿದ್ದಾರೆ. ನೀವು ಯಾವ ಸಾಧನೆ ಮಾಡಿದ್ದೀರಿ ಎಂದು ಬೆಂಗಳೂರಿಗೆ ಬರುತ್ತಿದ್ದೀರಿ? ಕುಮಾರಸ್ವಾಮಿ ಅವರ ವಿಜಯೋತ್ಸವ ಆಚರಿಸಲು ಬೆಂಗಳೂರಿಗೆ ಬಂದಿದ್ದೀರಾ ಎಂದು ಕುಟುಕಿದರು.
ಪ್ರತಿಭಟನೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಸಂಸದರಾದ ಪಿ.ಸಿ. ಮೋಹನ್, ಶೋಭಾ ಕರಂದ್ಲಾಜೆ, ಸಹ ವಕ್ತಾರರಾದ ಮಾಳವಿಕಾ, ತೇಜಸ್ವಿನಿ ರಮೇಶ್, ಶಾಸಕರಾದ ರವಿ ಸುಬ್ರಹ್ಮಣ್ಯ, ಎಸ್.ರಘು, ನಗರ ಘಟಕದ ಅಧ್ಯಕ್ಷ ಮುನಿರಾಜು ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.