ಗಣಿ ರೆಡ್ಡಿ ಬಗ್ಗೆ ಶಾ ಹೇಳಿಕೆ: ಬಿಎಸ್‌ವೈ, ರಾಮುಲು ಚರ್ಚೆ

By Suvarna Web DeskFirst Published Apr 3, 2018, 7:32 AM IST
Highlights

ಗಣಿಧಣಿ ಜನಾರ್ದನ ರೆಡ್ಡಿ ಮತ್ತು ಬಿಜೆಪಿಗೆ ಯಾವುದೇ ಸಂಬಂಧ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸಂಸದ ಶ್ರೀರಾಮುಲು ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಬಳ್ಳಾರಿ ರಾಜಕಾರಣ ಕುರಿತು ಚರ್ಚಿಸಿದರು.

ಬೆಂಗಳೂರು : ಗಣಿಧಣಿ ಜನಾರ್ದನ ರೆಡ್ಡಿ ಮತ್ತು ಬಿಜೆಪಿಗೆ ಯಾವುದೇ ಸಂಬಂಧ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸಂಸದ ಶ್ರೀರಾಮುಲು ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಬಳ್ಳಾರಿ ರಾಜಕಾರಣ ಕುರಿತು ಚರ್ಚಿಸಿದರು.

ಯಡಿಯೂರಪ್ಪ ಅವರ ಡಾಲ​ರ್ಸ್ ಕಾಲೋನಿ ನಿವಾಸದಲ್ಲಿ ಅಮಿತ್‌ ಶಾ ಹೇಳಿಕೆ ಕುರಿತು ಚರ್ಚೆ ನಡೆಸಿದರು. ಜನಾರ್ದನ ರೆಡ್ಡಿ ಪಕ್ಷಕ್ಕಾಗಿ ಸಾಕಷ್ಟುಕೆಲಸ ಮಾಡುತ್ತಿದ್ದಾರೆ. ಕೇವಲ ಬಳ್ಳಾರಿ ಮಾತ್ರವಲ್ಲದೇ, ಬೆಂಗಳೂರಿನಲ್ಲಿಯೂ ಪಕ್ಷವನ್ನು ಸಂಘಟನೆ ಮಾಡಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳಿಕೆಯಿಂದ ಸಮಸ್ಯೆಯಾಗಿದೆ. ಹೀಗಾದರೆ ರೆಡ್ಡಿ ಅವರ ರಾಜಕೀಯ ಭವಿಷ್ಯ ಹೇಗೆ ಎಂದು ಶ್ರೀರಾಮುಲು ಅವರು ಯಡಿಯೂರಪ್ಪ ಗಮನಕ್ಕೆ ತಂದರು ಎಂದು ಹೇಳಲಾಗಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಸಮಯ ಎಲ್ಲವನ್ನೂ ಸರಿ ಮಾಡುತ್ತದೆ. ಸದ್ಯ ಕಳಂಕಿತರಿಗೆ ಟಿಕೆಟ್‌ ಬೇಡ ಎಂದು ಹೈಕಮಾಂಡ್‌ ತೀರ್ಮಾನ ಮಾಡಿದೆ. ಕಾಂಗ್ರೆಸ್‌ ಮುಕ್ತ ಮಾಡುವುದೇ ಬಿಜೆಪಿ ಗುರಿಯಾಗಿದ್ದು, ಪ್ರತಿಪಕ್ಷಗಳಿಗೆ ನಮ್ಮ ವೀಕ್‌ನೆಸ್‌ ಬಿಟ್ಟುಕೊಡಬಾರದು. ಹೀಗಾಗಿ ಹೈಕಮಾಂಡ್‌ ಈ ತೀರ್ಮಾನ ಮಾಡಿದೆ ಎಂದು ಸಮಜಾಯಿಷಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸಭೆ ಬಳಿಕ ಜನಾರ್ದನ ರೆಡ್ಡಿ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಶ್ರೀರಾಮಲು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪ್ರವಾಸ ರದ್ದಾಗಿರುವ ಬಗ್ಗೆ ಚರ್ಚಿಸಲು ಬಂದಿದ್ದೆ ಎಂದಷ್ಟೇ ಹೇಳಿ ತೆರಳಿದರು.

click me!