
ಲಂಡನ್: ಮಕ್ಕಳ ಮನಸ್ಸು ಎಷ್ಟು ಪರಿಶುದ್ಧ, ನಿಷ್ಕಲ್ಮಷ, ಅಮಾಯಕ, ಮುಗ್ಧ ಎಂಬುದಕ್ಕೆ ಇದೊಂದು ಸುದ್ದಿ ಉದಾಹರಣೆಯಾಗಬಹುದು. ಭಾರತ ಮೂಲದ 4 ವರ್ಷದ ಬಾಲಕ ಶಾನ್ ದುಲೇ ತನ್ನ ಹುಟ್ಟುಹಬ್ಬಕ್ಕೆ ಬರಬೇಕೆಂದು ಬ್ರಿಟನ್ ರಾಣಿ ಎಲಿಜಬೆತ್ ಅವರಿಗೆಯೇ ಆಹ್ವಾನ ಕೊಟ್ಟಿದ್ದಾನೆ. ರಾಣಿ ಎಂದರೆ ತನಗೆ ತುಂಬಾ ಇಷ್ಟ. ಅವರು ತನ್ನ ಮನೆಗೆ ಬಂದರೆ ಚೆನ್ನಾಗಿರುತ್ತೆ ಎಂದು ಈ ಪುಟ್ಟ ಪೋರ ಹೇಳುತ್ತಾನೆ.
93 ವರ್ಷದ ರಾಣಿಗೆ ಶಾನ್ ದುಲೇ ಪತ್ರದಲ್ಲಿ ಹೀಗೆ ಬರೆಯುತ್ತಾನೆ...
"ಪ್ರಿಯ ರಾಣಿ ಎಲಿಜಬೆತ್, ನೀವು ಜಗತ್ತಿನ ಅತ್ಯುತ್ತಮ ರಾಣಿ ಎಂಬುದು ನನ್ನ ಭಾವನೆ. ನಿಮ್ಮ ಮುಕುಟ ಮತ್ತು ನಿಮ್ಮ ಕೆಂಪು ಶಾಲು ನನಗೆ ತುಂಬಾ ಇಷ್ಟ. ಅವನ್ನು ಧರಿಸಿದರೆ ಸೂಪರ್'ಹೀರೋ ಥರ ಕಾಣಿಸುತ್ತೀರಿ... ಕುದುರೆ, ವಿಮಾನ ಮತ್ತು ಬಡಮಕ್ಕಳ ಬಗ್ಗೆ ನಿಮ್ಮೊಂದಿಗೆ ನಾನು ಮಾತನಾಡಬೇಕು," ಎಂದು ಬಹಳ ಮುಗ್ಧವಾಗಿ ಬಾಲಕ ಬರೆಯುತ್ತಾನೆ.
ಜೂನ್ 25ರಂದು ಈತ ಜನ್ಮದಿನವಿರುವುದು. ಬಹಳ ಮುಂಚಿತವಾಗಿಯೇ ಹುಟ್ಟುಹಬ್ಬಕ್ಕೆ ಪ್ಲಾನ್ ಮಾಡಿದ ಶಾನ್ ದುಲೇ ಮಾರ್ಚ್ 13ರಂದೇ ರಾಣಿ ಎಲಿಜಬೆತ್'ಗೆ ಪತ್ರ ಬರೆದು ಆಹ್ವಾನಿಸುತ್ತಾನೆ.
ರಾಣಿ ನಿವಾಸದಿಂದ ಪತ್ರ:
ಬಾಲಕ ಪತ್ರ ಬರೆದ ಬಳಿಕ ದಿನಗಳು ಗತಿಸುತ್ತವೆ, ಅತ್ತಲಿಂದ ಯಾವುದೇ ಸ್ಪಂದನೆ ಬರುವುದಿಲ್ಲ. ಬಾಲಕ ಬಹುತೇಕ ಮರೆತುಬಿಡುತ್ತಾನೆ. ಆದರೆ, ಶಾನ್ ದುಲೇ ಹುಟ್ಟುಹಬ್ಬಕ್ಕೆ ಐದಾರು ವಾರ ಇರುವಂತೆ ರಾಣಿಯಿಂದ ಪ್ರತಿಕ್ರಿಯೆ ಬರುತ್ತದೆ. ಮೇ 3ರಂದು ಅರಮನೆಯಿಂದ ಬಾಲಕನಿಗೆ ಪತ್ರವೊಂದು ಬರುತ್ತದೆ.
"ರಾಣಿಯವರಿಗೆ ಬಿಡುವಿಲ್ಲದಿರುವುದರಿಂದ ನಿಮ್ಮ ಮನೆಗೆ ಬಂದು ಚಹಾ ಕುಡಿಯುವ ಆಹ್ವಾನವನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ. ಆದರೆ, ನೀವು ಅವರ ಬಗ್ಗೆ ಒಳ್ಳೆಯದು ಯೋಚಿಸಿದ್ದನ್ನು ಅವರು ಮೆಚ್ಚಿಕೊಂಡಿದ್ದಾರೆ. ನೀವೂ ಕೂಡ ಕುದುರೆಗಳನ್ನು ಇಷ್ಟಪಡುತ್ತಿರುವುದು ಅವರಿಗೆ ಖುಷಿ ಕೊಟ್ಟಿದೆ... ಜೂನ್ 25ರಂದು ನಿಮ್ಮ ಜನ್ಮದಿನಕ್ಕೆ ರಾಣಿಯವರು ಶುಭಾಶಯ ತಿಳಿಸಿದ್ದಾರೆ," ಎಂದು ಆ ಪತ್ರದಲ್ಲಿ ಬರೆಯಲಾಗಿತ್ತು.
ರಾಣಿ ಮನೆಗೆ ಹೋಗುತ್ತೇನೆ:
ಮಹಾರಾಣಿಯವರಿಂದ ತನ್ನ ಪತ್ರಕ್ಕೆ ಪ್ರತಿಕ್ರಿಯೆ ಬಂದಿದ್ದು ಬಾಲಕನಿಗೆ ಸಖತ್ ಖುಷಿ ಕೊಟ್ಟಿದೆ. "ನನಗೆ ನಿರಾಸೆಯಾಯಿತು. ಆದರೆ, ಅವರು ನನ್ನ ಪತ್ರ ಓದಿದ್ದಾರೆಂದು ತಿಳಿದು ಖುಷಿಯಾಯಿತು. ನನಗೆ ನಿಜವಾಗಲೂ ರಾಣಿ ಎಂದರೆ ಇಷ್ಟ. ಅವರ ಕುದುರೆಗಳು ಮತ್ತು ನಾಯಿಗಳೂ ಇಷ್ಟ. ಬೇಸಿಗೆಯಲ್ಲಿ ನಾನು ಅವರ ಮನೆಗೆ ಹೋಗುತ್ತೇನೆ. ಆಗ ಅವರನ್ನು ಭೇಟಿಯಾಗುವ ಆಸೆ ಇಟ್ಟುಕೊಂಡಿದ್ದೇನೆ," ಎಂದು ಶಾನ್ ಹೇಳುತ್ತಾನೆ.
(ಮಾಹಿತಿ: ಪಿಟಿಐ ಸುದ್ದಿ ಸಂಸ್ಥೆ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.