
ಮುಂಬೈ (ಮಾ. 04): ಕಳೆದ ವಾರವಷ್ಟೇ ದುಬೈನಲ್ಲಿ ಅಕಾಲಿಕ ಮತ್ತು ನಿಗೂಢ ರೀತಿಯಲ್ಲಿ ಸಾವಿಗೀಡಾದ ನಟಿ ಶ್ರೀದೇವಿ ಸಾವಿನ ಕುರಿತು ಇದೇ ಮೊದಲ ಬಾರಿಗೆ ಅವರ ಪತಿ ಮತ್ತು ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಅವರು ತಮ್ಮ ಮೌನ ಮುರಿದಿದ್ದಾರೆ.
ಫೆ.24 ರಂದು ತಮ್ಮ ಪತ್ನಿ ಶ್ರೀದೇವಿ ಅವರಿಗೆ ಸರ್‌ಪ್ರೈಸ್ ನೀಡಲು ಮುಂಬೈನಿಂದ ಪುನಃ ವಾಪಸ್ ದುಬೈಗೆ ತೆರಳಿದಾಗ, ಶ್ರೀದೇವಿ ಅವರನ್ನು ಆಲಂಗಿಸಿದ, ಚುಂಬಿಸಿದ ಸೇರಿದಂತೆ ಸಾವಿಗೂ ಮುನ್ನ ಏನೆಲ್ಲ ಆಯಿತು ಎಂಬ ಬಗ್ಗೆ ವಾಣಿಜ್ಯ ವಿಶ್ಲೇಷಕ ಕೋಮಲ್ ನಹ್ತಾ ಎಂಬುವರ ಬಳಿ ನೆನಪಿನ ಬುತ್ತಿಯನ್ನು ಬಾಲಿವುಡ್ ನಿರ್ಮಾಪಕ ಮತ್ತು ಶ್ರೀದೇವಿ ಪತಿ ಬೋನಿ ಕಪೂರ್ ಅವರು ಈ ರೀತಿಯಾಗಿ ಬಿಚ್ಚಿಟ್ಟಿದ್ದಾರೆ.
‘ಫೆ. 24 ರ ಬೆಳಗ್ಗೆ ದುಬೈನ ಜುಮೆರಾಹ್ ಎಮಿರೇಟ್ಸ್ ಹೋಟೆಲ್‌ನಲ್ಲಿ ತಂಗಿದ್ದ ಶ್ರೀದೇವಿಗೆ ಕರೆ ಮಾಡಿ ಮಾತನಾಡಿದ್ದೆ. ಈ ವೇಳೆ ಆಕೆ ಪಾಪಾ (ಬೋನಿ ಕಪೂರ್‌ರನ್ನು ಶ್ರೀದೇವಿ ಕರೆಯುವ ರೀತಿ) ನಾನು ನಿಮ್ಮನ್ನು ಮಿಸ್ ಮಾಡ್ಕೊಳ್ತಿದ್ದೀನಿ ಅಂದಿದ್ದಳು. ಅದಕ್ಕಾಗಿ ಅಂದು ಸಂಜೆಯೇ ದುಬೈಗೆ ಹೋಗಲು ನಿಶ್ಚಯಿಸಿದ್ದೆ. ಆದರೆ, ಸರ್‌ಪ್ರೈಸ್ ಕೊಡಲು ಈ ಬಗ್ಗೆ ಶ್ರೀದೇವಿಗೆ ತಿಳಿಸಲಿಲ್ಲ. ಅಲ್ಲಿ ದಿಢೀರ್ ಪ್ರತ್ಯಕ್ಷವಾಗಿದ್ದನ್ನು ಕಂಡು ಸರ್‌ಪ್ರೈಸ್ ಆದ ಶ್ರೀದೇವಿ ಮತ್ತು ನಾನು ಪರಸ್ಪರ ಬಿಗಿದಪ್ಪಿ,
ಚುಂಬಿಸಿಕೊಂಡೆವು. ನಂತರ 15 ನಿಮಿಷ ಹರಟೆ ಹೊಡೆದೆವು. ಬಳಿಕ ಊಟಕ್ಕೆ ಕರೆದೊಯ್ಯುವುದಾಗಿ ಹೇಳಿದೆ. ಅದಕ್ಕಾಗಿ ತಯಾರಾಗಲು ಶ್ರೀದೇವಿ ಸ್ನಾನದ ಕೋಣೆಗೆ ಹೋದರು.
‘ಇತ್ತ ನಾನು ದಕ್ಷಿಣ ಆಫ್ರಿಕಾ ಮತ್ತು ಭಾರತದ ಕ್ರಿಕೆಟ್ ಪಂದ್ಯ ಮತ್ತು ಪಾಕಿಸ್ತಾನ ಸೂಪರ್ ಲೀಗ್ ಕ್ರಿಕೆಟ್ ಪಂದ್ಯದ ಹೈಲೈಟ್ಸ್ ನೋಡಿ ಮುಗಿಸಿದರೂ, ಶ್ರೀದೇವಿ ಮಾತ್ರ ಸ್ನಾನದ ಕೋಣೆಯಿಂದ ಹೊರಬಂದಿರಲಿಲ್ಲ. ಹೀಗಾಗಿ ಟೀವಿ ವಾಲ್ಯೂಮ್
ಕಡಿಮೆ ಮಾಡಿ ಅಲ್ಲಿಂದಲೇ ಕೂಗಿದೆ. ಆಗಲೂ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ ಸ್ನಾನ ಗೃಹದ ಬಳಿ ಬಂದು ಜೋರಾಗಿ ಜಾನ್...ಜಾನ್ ಎಂದು ಪ್ರೀತಿಯಿಂದ ಕರೆದೆ. ಅದಕ್ಕೂ ಉತ್ತರಬರಲಿಲ್ಲ. ಆಗ ವಿಚಲಿತನಾಗಿ ಒಳಗಿನಿಂದ ಬೋಲ್ಟ್ ಹಾಕದ ಬಾಗಿಲನ್ನು ದಬ್ಬಿದೆ. ಆಗ ಅಲ್ಲಿನ ದೃಶ್ಯ ಕಂಡು ದಿಗ್ಭ್ರಾಂತನಾದೆ. ನೀರಿಂದ ತುಂಬಿದ್ದ ಸ್ನಾನದ ಟಬ್'ನಲ್ಲಿ ಶ್ರೀದೇವಿಯ ಪ್ರಜ್ಞಾಹೀನದ ದೇಹ ತೇಲುತ್ತಿತ್ತು. ಬಳಿಕ ನೋಡಿದರೆ, ಆಕೆ ಸಾವಿಗೀಡಾಗಿದ್ದಾಳೆ ಎಂದು ವೈದ್ಯರು ಘೋಷಣೆ ಮಾಡಿದರು,’ ಎಂದು ಈ ಪರಿಯಾಗಿ ತಮ್ಮ ಪತ್ನಿಯ ಸಾವಿನ ಕಹಿ ಘಟನೆ ಕುರಿತು ಬೋನಿ ಕಪೂರ್ ವಿವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.