
ಬೆಂಗಳೂರು(ಎ.20): ಬಸ್‌ನಲ್ಲಿ ಮೂವರು ಯುವತಿಯರು ಇಂಗ್ಲಿಷ್‌ನಲ್ಲಿ ಸಂಭಾಷಣೆ ನಡೆಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಬಿಎಂಟಿಸಿ ಬಸ್ ನಿರ್ವಾಹಕ, ಮೂವರನ್ನು ಮಾರ್ಗ ಮಧ್ಯೆ ಕೆಳಗಿಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಏಪ್ರಿಲ್ 13ರಂದು ಈ ಘಟನೆ ನಡೆದಿದ್ದು, ಉತ್ತರ ಭಾರತ ಮೂಲದ ಯುವತಿಯೊಬ್ಬರು ಘಟನೆ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ನಗರ ಪೊಲೀಸರಿಗೆ ದೂರು ನೀಡಿದ್ದು, ನಿರ್ವಾಹಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಆಕೆ ದೂರಿನಲ್ಲಿ ‘ನಾವು ಮೂವರು ಸ್ನೇಹಿತೆಯರು ಏಪ್ರಿಲ್ 13ರಂದು ಬಿಎಂಟಿಸಿ ಬಸ್‌ನ ಒಂದು ದಿನದ ಪಾಸ್ ಖರೀದಿಸಿದ್ದೆವು. ಅಂದು ಸಂಜೆ 4.30ರ ಸುಮಾರಿಗೆ ಕೆಎ-01 ಎಫ್‌ಎ-2274 ನೋಂದಣಿ ಸಂಖ್ಯೆಯ ಬಿಎಂಟಿಸಿ ಬಸ್‌ನಲ್ಲಿ ಬನ್ನೇರುಘಟ್ಟರಾಷ್ಟ್ರೀಯ ಉದ್ಯಾನದಿಂದ ಕೋರಮಂಗಲಕ್ಕೆ ಪ್ರಯಾಣಿಸುತ್ತಿದ್ದೆವು. ಈ ವೇಳೆ ವ್ಯಾಸಂಗದ ವಿಚಾರವಾಗಿ ಇಂಗ್ಲಿಷ್‌ನಲ್ಲಿ ಮೂವರು ಪರಸ್ಪರ ಸಂಭಾಷಣೆ ನಡೆಸುತ್ತಿದ್ದವು. ಈ ವೇಳೆ ಬಸ್ ನಿರ್ವಾಹಕ ಏಕಾಏಕಿ ಜೋರಾಗಿ ಕಿರುಚಿದರು. ಆಗ ನಾನು ಏನಾಯಿತು ಎಂದು ಪ್ರಶ್ನೆ ಮಾಡಿದೆ. ಅದಕ್ಕೆ ಆತ ಇಂಗ್ಲಿಷ್‌ನಲ್ಲಿ ಸಂಭಾಷಣೆ ನಿಲ್ಲಿಸುವಂತೆ ಹೇಳಿದರು. ಇದರಿಂದ ನಾವು ಮೂವರು ಆಶ್ಚರ್ಯ ವ್ಯಕ್ತಪಡಿಸಿದೆವು'.
‘ನಮ್ಮ ದೇಶದ ವಾಕ್ ಮತ್ತು ಸ್ವಾತಂತ್ರ್ಯದ ಹಕ್ಕಿನ ಪ್ರಕಾರ ನಾವು ಯಾವುದೇ ಭಾಷೆಯಲ್ಲಿ ಮಾತನಾಡಬಹುದು. ಹಾಗಾಗಿ ಮಾತನಾಡುವುದನ್ನು ನಿಲ್ಲಿಸಿ ಎಂದು ಹೇಳಲು ನಿಮಗೆ ಯಾವುದೇ ಹಕ್ಕಿಲ್ಲ ಎಂದು ನಿರ್ವಾಹಕನಿಗೆ ಹೇಳಿದೆ. ಅಲ್ಲದೆ, ನಾವು ಯಾವ ಪ್ರಯಾಣಿಕರಿಗೂ ತೊಂದರೆ ನೀಡುತ್ತಿಲ್ಲ ಅಥವಾ ಹೊಡೆದಾಡುತ್ತಿಲ್ಲ ಎಂದೂ ಹೇಳಿದೆ. ಬಳಿಕ ನಾವು ಸಂಭಾಷಣೆ ಮುಂದುವರಿಸಿದೆವು. ಈ ವೇಳೆ ಆ ನಿರ್ವಾಹಕ, ಬಸ್ ಪಾಸ್ ಹೊಂದಿರುವವರು ಈ ಬಸ್‌ನಲ್ಲಿ ಪ್ರಯಾಣಿಸುವಂತಿಲ್ಲ. ಹಾಗಾಗಿ ಕೆಳಗೆ ಇಳಿಯಿರಿ ಎಂದು ಹೇಳಿದರು. ಆಗ ಕೆಲ ಪ್ರಯಾಣಿಕರು ಕೂಡ ನಿರ್ವಾಹನಕ ಜತೆ ಸೇರಿಕೊಂಡು ಕೆಳಗಿಳಿಯುವಂತೆ ಒತ್ತಡ ಹೇರಿದರು'.
'ಪಾಸ್ ಹೊಂದಿರುವ ಪ್ರಯಾಣಿಕರು ಹವಾ ನಿಯಂತ್ರಿತ ಬಸ್ ಹೊರತುಪಡಿಸಿ ಸಾಮಾನ್ಯ ಬಸ್'ಗಳಲ್ಲಿ ಪ್ರಯಾಣಿಸಬಹುದು ಎಂದು ನಿಯಮ ಹೇಳುತ್ತದೆ. ಹಾಗಾಗಿ ನಾವು ಬಸ್'ನಿಂದ ಕೆಳಗಿಳಿಯಲು ನಿರಾಕರಿಸಿದೆವು. ಅಲ್ಲದೇ, ಆ ನಿರ್ವಾಹಕ ಜೇಬು ತುಂಬಾ ಚಿಲ್ಲರೆ ತುಂಬಿಕೊಂಡಿದ್ದರೂ ಹಲವು ಪ್ರಯಾಣಿಕರಿಗೆ ಚಿಲ್ಲರೆ ಇಲ್ಲ ಎನ್ನುತ್ತಿದ್ದರು. ಇದು ತಪ್ಪಲ್ಲವೇ? ಇಷ್ಟಾದರೂ ನಾವು ಡೈರಿ ಸರ್ಕಲ್'ವರೆಗೂ ಆ ಬಸ್'ನಲ್ಲಿ ಪ್ರಯಾಣಿಸಿ ಬಳಿಕ ಬೇರೆ ಬಸ್'ನಲ್ಲಿ ಪ್ರಯಾಣ ಮುಂದುವರೆಸಿದೆವು'. ಎಂದು ಆಕೆ ಘಟನೆಯನ್ನು ವಿವರಿಸಿದ್ದಾರೆ.
ಅಲ್ಲದೇ ನಾವು ಇಂಗ್ಲೀಷ್'ನಲ್ಲಿ ಸಂಭಾಷಣೆ ನಡೆಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಕರ್ತವ್ಯದ ನಿಯಮ ಉಲ್ಲಂಘಿಸಿದ ಆ ನಿರ್ವಾಹಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾಋಎ.
ವರದಿ: ಕನ್ನಡಪ್ರಭ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.