
ಲಖನೌ: ವಿಮಾನಗಳಲ್ಲಿರುವಂತೆ ರೈಲ್ವೆ ಬೋಗಿಗಳಲ್ಲೂ ಬ್ಲ್ಯಾಕ್ ಬಾಕ್ಸ್ ಇರಿಸುವ ಭಾರತೀಯ ರೈಲ್ವೆಯ ಮಹತ್ವಾಕಾಂಕ್ಷಿ ಯೋಜನೆ ಶೀಘ್ರದಲ್ಲೇ ಜಾರಿಗೆ ಬರಲಿದೆ. ಬ್ಲ್ಯಾಕ್ ಬಾಕ್ಸ್ ಹೊಂದಿರುವ ಮೊದಲ ಬ್ಯಾಚ್‌ನ ಕೆಲ ಸ್ಮಾರ್ಟ್ ಬೋಗಿಗಳನ್ನು ಭಾರತೀಯ ರೈಲ್ವೆಯ ರಾಯ್ ಬರೇಲಿ ಕೋಚ್ ಫ್ಯಾಕ್ಟರಿ ಬಿಡುಗಡೆ ಮಾಡಿದೆ.
ವಿಮಾನಗಳಲ್ಲಿರುವ ಬ್ಲ್ಯಾಕ್ ಬಾಕ್ಸ್‌ಗಳು ವಿಮಾನದೊಳಗೆ ನಡೆಯುವ ಘಟನೆ ಹಾಗೂ ಸಂಭಾಷಣೆಗಳನ್ನು ದಾಖಲಿಸುವ ಕೆಲಸವನ್ನು ಮಾತ್ರ ಮಾಡುತ್ತವೆ. ವಿಮಾನ ಅಪಘಾತವಾದರೆ ಈ ಬ್ಲ್ಯಾಕ್ ಬಾಕ್ಸ್ ತೆರೆದು ಡಿ-ಕೋಡ್ ಮಾಡಿದಾಗ ಅಪಘಾತಕ್ಕೆ ಕಾರಣ ಏನೆಂಬುದು
ಗೊತ್ತಾಗುತ್ತದೆ. ಆದರೆ, ರೈಲ್ವೆಯ ಸ್ಮಾರ್ಟ್ ಬೋಗಿಯಲ್ಲಿ ಅಳವಡಿಸಿದ ಬ್ಲ್ಯಾಕ್ ಬಾಕ್ಸ್‌ಗಳು ಸಂಭಾಷಣೆ ದಾಖಲಿಸುವುದಷ್ಟೇ ಅಲ್ಲ, ರೈಲ್ವೆ ಅಪಘಾತಗಳನ್ನು ತಡೆಯುವ ಸಾಮರ್ಥ್ಯ ಕೂಡ ಹೊಂದಿವೆ.
ಈ ಬ್ಲ್ಯಾಕ್ ಬಾಕ್ಸ್‌ಗಳು ರೈಲು ಗಾಡಿ ಹಳಿ ತಪ್ಪುತ್ತಿದ್ದರೆ, ರೈಲಿನಲ್ಲಿ ತಾಂತ್ರಿಕ ದೋಷ ಉಂಟಾದರೆ ಅಥವಾ ಅಪಘಾತ ಆಗುವುದಿದ್ದರೆ ಬಹಳ ಮೊದಲೇ ಎಚ್ಚರಿಕೆ ನೀಡುತ್ತವೆ. ಅದಕ್ಕೆ ತಕ್ಕಂತೆ ರೈಲು ಗಾಡಿ ಹಾಗೂ ಎಂಜಿನ್‌ಗಳನ್ನು ನಿರ್ವಹಣೆ ಮಾಡಬಹುದು. ಇನ್ನು, ಈ ಬ್ಲ್ಯಾಕ್ ಬಾಕ್ಸ್‌ಗಳು ರೈಲ್ವೆಯಲ್ಲಿ ಹವಾನಿಯಂತ್ರಣ ವ್ಯವಸ್ಥೆ ವಿಫಲವಾಗುವುದಿದ್ದರೆ ಮೊದಲೇ ಎಚ್ಚರಿಕೆ ನೀಡುತ್ತವೆ.
ಅಷ್ಟೇ ಅಲ್ಲ, ರೈಲುಗಾಡಿಯ ಒಳಗಿನ ವೈರ್, ಕೇಬಲ್ ಹಾಗೂ ಕನೆಕ್ಟರ್‌ಗಳ ಉಷ್ಣತೆಯ ಮೇಲೆ ಕಣ್ಣಿಟ್ಟು ಎಚ್ಚರಿಕೆ ನೀಡುವುದರಿಂದ ಶಾರ್ಟ್ ಸರ್ಕ್ಯೂಟ್ ಹಾಗೂ ಬೆಂಕಿ ಅವಘಡ ತಪ್ಪಿಸಬಹುದಾಗಿದೆ. ರಾಷ್ಟ್ರೀಯ ತಾಂತ್ರಿಕ ದಿನದ ಅಂಗವಾಗಿ ರಾಯ್‌ಬರೇಲಿ ಕೋಚ್ ಫ್ಯಾಕ್ಟರಿಯ ವಿನ್ಯಾಸ ಎಂಜಿನಿಯರ್ ಇಂದ್ರಜೀತ್ ಸಿಂಗ್ ಹೊಸ ಮಾದರಿಯ ಸ್ಮಾರ್ಟ್ ಬೋಗಿಗಳನ್ನು ಬಿಡುಗಡೆ ಮಾಡಿದರು.
ಈ ಬೋಗಿಗಳಲ್ಲಿ ಬ್ಲ್ಯಾಕ್ ಬಾಕ್ಸ್ ಅಲ್ಲದೆ, ಸಿಸಿಟೀವಿ ಕ್ಯಾಮರಾ, ಪ್ರಯಾಣಿಕರಿಗೆ ಮಾಹಿತಿ ನೀಡುವ ವ್ಯವಸ್ಥೆ, ಇನ್ಫೋಟೇನ್ ಮೆಂಟ್ ಸಾಫ್ಟ್‌ವೇರ್ ಹಾಗೂ ವೈಫೈ ಕೂಡ ಇರುತ್ತವೆ. ಈ ಸ್ಮಾರ್ಟ್ ಬೋಗಿಗಳನ್ನು ಲಖನೌದಲ್ಲಿರುವ ಸಂಶೋಧನೆ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆಗೆ ಕಳುಹಿಸಲಾಗುತ್ತದೆ. ಅಲ್ಲಿ ಪರೀಕ್ಷಾರ್ಥ ಸಂಚಾರ ನಡೆಸಿದ ನಂತರ ಪ್ರಯಾಣಿಕರ ರೈಲ್ವೆಗೆ ಅಳವಡಿಸಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.