ನ.1ರಂದು ಬಿಜೆಪಿ ಪರಿವರ್ತನಾ ರ‍್ಯಾಲಿ ಆರಂಭ

By Suvarna Web DeskFirst Published Sep 13, 2017, 4:36 PM IST
Highlights

ಮುಂಬರುವ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ರಾಜ್ಯ ಬಿಜೆಪಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ‘ನವಕರ್ನಾಟಕ ನಿರ್ಮಾಣ ಪರಿವರ್ತನಾ ರ‍್ಯಾಲಿ’ ಬರುವ ನವೆಂಬರ್ 1ರಂದು ರಾಜ್ಯೋತ್ಸವ ದಿನದಂದು ಆರಂಭವಾಗಲಿದ್ದು, ಹೊಸವರ್ಷದ ಜನವರಿ 15ರವರೆಗೆ ಸಂಚರಿಸಲಿದೆ.

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ರಾಜ್ಯ ಬಿಜೆಪಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ‘ನವಕರ್ನಾಟಕ ನಿರ್ಮಾಣ ಪರಿವರ್ತನಾ ರ‍್ಯಾಲಿ’ ಬರುವ ನವೆಂಬರ್ 1ರಂದು ರಾಜ್ಯೋತ್ಸವ ದಿನದಂದು ಆರಂಭವಾಗಲಿದ್ದು, ಹೊಸವರ್ಷದ ಜನವರಿ 15ರವರೆಗೆ ಸಂಚರಿಸಲಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಈ ವಿಷಯ ಪ್ರಕಟಿಸಿದ್ದಾರೆ. ಮಂಗಳವಾರ ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪಕ್ಷದ ದಕ್ಷಿಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳ ಚುನಾವಣಾ ಉಸ್ತುವಾರಿಗಳ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಈ ಪರಿವರ್ತನಾ ಯಾತ್ರೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಸಂಚರಿಸಲಿದೆ. ರಾಜ್ಯೋತ್ಸವ ದಿನವಾಗಿರುವುದರಿಂದ ಕನ್ನಡ ಬಾವುಟ ಹಾರಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಲಾಗುವುದು. ಪಕ್ಷದ ರಾಷ್ಟ್ರೀಯ ನಾಯಕರು ಈ ಯಾತ್ರೆಯ ಉದ್ಘಾಟನೆ ವೇಳೆ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಯಾತ್ರೆಯ ಅಂಗವಾಗಿ ಪ್ರತಿ ಜಿಲ್ಲೆಯಲ್ಲಿ ‘ನವಶಕ್ತಿ ಸಮಾವೇಶ’ ನಡೆಸಲಾಗುವುದು. ಜಿಲ್ಲೆಯ ಪ್ರತಿ ಬೂತ್‌ನಿಂದ ಒಂಬತ್ತು (ನವ) ಜನ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಒಂದು ಜಿಲ್ಲೆಯಲ್ಲಿ ಎರಡು ದಿನ ಪ್ರವಾಸ ಆಯೋಜಿಸಲಾಗುತ್ತದೆ. ಒಂದೊಂದು ದಿನ ಎರಡು ಅಥವಾ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ಸಂಚಾರ ನಡೆಸಲಿದೆ.

ರಾಜ್ಯದಲ್ಲಿ ಒಟ್ಟು 58 ಸಾವಿರ ಬೂತ್ ಕಮಿಟಿಗಳಿವೆ. ಒಟ್ಟು ಸುಮಾರು 3.30 ಲಕ್ಷ ಕಾರ್ಯಕರ್ತರು ಒಟ್ಟಾರೆ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಯಾತ್ರೆಯ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ವಿವರಿಸಿದರು.

ಮೋದಿ ಹುಟ್ಟುಹಬ್ಬ ವಿಶಿಷ್ಟ ಆಚರಣೆ: ಇದೇ ತಿಂಗಳ 17ರಂದು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ಈ ಬಾರಿ ರಾಜ್ಯದಲ್ಲಿ ವಿಶಿಷ್ಟವಾಗಿ ಆಚರಿಸಲು ಉದ್ದೇಶಿಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಮಳೆಯಿಂದ ಹಾನಿ ಸಂಭವಿಸಿರುವ ಪ್ರದೇಶಗಳಿಗೆ ತೆರಳಿ ಸಂತ್ರಸ್ತರ ಮನೆಗಳಿಗೆ ಅಕ್ಕಿ ವಿತರಿಸಲಾಗುವುದು. ಅದೇ ರೀತಿ ಇತರ ಜಿಲ್ಲೆ-ತಾಲೂಕುಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿರುವ ಗಣ್ಯರ ಪ್ರತಿಮೆಗಳನ್ನು ಸ್ವಚ್ಛಗೊಳಿಸುವ ಮೂಲಕ ಆಚರಿಸಲು ಉದ್ದೇಶಿಸಲಾಗಿದೆ ಎಂದರು.

 

click me!