
ಬೆಂಗಳೂರು (ನ.02): ನವ ಕರ್ನಾಟಕ ನಿರ್ಮಾಣಕ್ಕಾಗಿ ನಡೆದ ಪರಿವರ್ತನಾ ಯಾತ್ರೆ ವೇಳೆಯಲ್ಲಿ ಸಾಕಷ್ಟು ಗೊಂದಲಗಳು, ಅಸಮಾಧಾನಗಳು ಹಾಗೂ ಅವ್ಯವಸ್ಥೆಗಳದ್ದೇ ಕಾರುಬಾರು. ಲಕ್ಷಾಂತರ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಬಹುದು ಅನ್ನೋ ಬಿಜೆಪಿ ಲೆಕ್ಕಾಚಾರ ಕೂಡಾ ಇಲ್ಲಿ ತಲೆಕೆಳಕಾಗಿತ್ತು.
ಎಲ್ಲಿ ನೋಡಿದರೂ ಖಾಲಿ ಖಾಲಿ ಕುರ್ಚಿಗಳು..!
ಇಂದು ನಡೆದ ಬಿಜೆಪಿಯ ಪರಿವರ್ತನಾ ಯಾತ್ರೆ ನಿರೀಕ್ಷಿತ ಪ್ರಮಾಣದಲ್ಲಿ ಜನರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಸುಮಾರು ಮೂರು ಲಕ್ಷ ಜನ ಸೇರುತ್ತಾರೆ. ರಾಜ್ಯದ ನಾನಾ ಭಾಗಗಳಿಂದ ಬೈಕ್ ಗಳಲ್ಲಿ ಕಾರ್ಯಕರ್ತರು ಸೇರುತ್ತಾರೆ ಅಂತೆಲ್ಲಾ ಹೇಳಿಕೊಂಡು ಬಂದಿದ್ದ ಬಿಜೆಪಿಯ ನಾಯಕರು ಇಂದಿನ ಕಾರ್ಯಕ್ರಮಕ್ಕೆ ಜನ ಸೇರಿಸುವಲ್ಲೇ ಎಡವಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಕಾರ್ಯಕರ್ತರ ಕೊರತೆಯಿಂದ ಒಂದು ಗಂಟೆಯಾದರೂ ಆರಂಭವಾಗಲಿಲ್ಲ. ಇಡೀ ಮೈದಾನದಲ್ಲಿ ಖಾಲಿಖಾಲಿ ಕುರ್ಚಿಗಳೇ ಕಣ್ಣಿಗೆ ರಾಚುತ್ತಿದ್ದವು.
ಅಮಿತ್ ಶಾ ಬರುವ ವೇಳೆಗೆ ಹೇಗಾದರೂ ಜನರನ್ನು ತುಂಬಿಸಬೇಕು ಅಂತಾ ರಾಜ್ಯ ಬಿಜೆಪಿ ನಾಯಕರು ಚಡಪಡಿಸುತ್ತಿದ್ದುದು ಎದ್ದು ಕಾಣುತ್ತಿತ್ತು. ರಾಜ್ಯ ಬಿಜೆಪಿ ಸಹ ಚುನಾವಣಾ ಉಸ್ತುವಾರಿ ಹೊಣೆ ಹೊತ್ತಿರುವ ಪಿಯೂಷ್ ಗೋಯಲ್ ತಾವೇ ಖುದ್ದು ಶಾಸಕರ ಜೊತೆಗೂಡಿ ಕಾರ್ಯಕರ್ತರನ್ನು ಖಾಲಿ ಕುರ್ಚಿಗಳಲ್ಲಿ ಕೂರಿಸುವ ಕೆಲಸ ಮಾಡತೊಡಗಿದರು. ಇನ್ನು ಕಾರ್ಯಕ್ರಮಕ್ಕೆ ಆಗಮಿಸಿದ ಅಮಿತ್ ಶಾ ಕೂಡಾ ಜನರೇ ಇಲ್ಲದ್ದನ್ನು ಕಂಡು ರಾಜ್ಯ ನಾಯಕರ ಮೇಲೆ ಸಿಡಿಮಿಡಿಗೊಂಡರು.
ಮುನಿಸು ಮರೆತು ಒಂದಾದ ಬಿಎಸ್'ವೈ ಮತ್ತು ಸಂತೋಷ್
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ಬಿ ಎಲ್ ಸಂತೋಷ್ ಮುನಿಸು ಮರೆತು ಪರಸ್ಪರ ಹಸ್ತಲಾಘವ ಮಾಡಿ ಶುಭಾಶಯ ಹೇಳಿಕೊಂಡಿದ್ದು ಪರಿವರ್ತನಾ ಯಾತ್ರೆಯ ಪ್ರಮುಖ ಪರಿವರ್ತನೆ ಅಂತಾ ಹೇಳಬಹುದು.ಇನ್ನು ಇತ್ತೀಚಿಗಷ್ಟೇ ಬಿಜೆಪಿ ಸೇರಿದ್ದ ಶ್ರೀನಿವಾಸ ಪ್ರಸಾದ್, ಎಸ್ ಎಂ ಕೃಷ್ಣ, ಸೊಗಡು ಶಿವಣ್ಣ ರನ್ನು ಇಂದಿನ ಕಾರ್ಯಕ್ರಮಕ್ಕೆ ಗಣನೆಗೇ ತೆಗೆದುಕೊಂಡಿಲ್ಲ. ಈ ಬಗ್ಗೆ ಈ ನಾಯಕರೇ ತಮ್ಮ ಆಪ್ತರ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.
ಪರಿವರ್ತನಾ ಯಾತ್ರೆಯಲ್ಲಿ ಕಳ್ಳರ ಕೈ ಚಳಕ
ಇವತ್ತಿನ ಬಿಜೆಪಿ ಕಾರ್ಯಕ್ರಮದಲ್ಲಿ ಕಳ್ಳರೂ ತಮ್ಮ ಕರಾಮತ್ತು ತೋರಿದ್ದಾರೆ, ಗುಲ್ಬರ್ಗದಿಂದ ಬಂದಿದ್ದ ಕಾರ್ಯಕರ್ತರೊಬ್ಬರ ಜೇಬನ್ನು ಕತ್ತರಿಸಿದ ಖದೀಮರು ಇಪ್ಪತ್ತೆರಡು ಸಾವಿರ ರೂಗಳನ್ನು ಎಗರಿಸಿದ್ರು. ಬೈಕಿನಲ್ಲಿ ರ್ಯಾಲಿ ಬಂದಿದ್ದ ಮಂಡ್ಯದ ಕಾರ್ಯಕರ್ತರು ತಮ್ಮ ಬೈಕನ್ನೇ ಕಳೆದುಕೊಂಡು ಪೇಚಾಡ್ತಿದ್ರು. ಒಟ್ಟಿನಲ್ಲಿ ಬಾರಿ ನಿರೀಕ್ಷೆ ಮೂಡಿಸಿದ್ದ ಇಂದಿನ ಪರಿವರ್ತನಾ ಯಾತ್ರೆ, ಅಂದುಕೊಂಡಷ್ಟು ಯಶಸ್ವಿಯಾಗದೇ ಬಿಜೆಪಿಯ ನಾಯಕರಲ್ಲೇ ನಿರಾಸೆ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.