
ಬೆಂಗಳೂರು(ನ.02): ಕನ್ನಡ ನಾಡಲ್ಲಿದ್ದು, ಕನ್ನಡ ಭಾಷೆ ಕಗ್ಗೊಲೆ ಮಾಡಲೆತ್ನಿಸುವ ಪರಭಾಷಿಕರ ವಿರುದ್ಧ ದಂಗೆ ಏಳಬೇಕಾಗಿದೆ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.
ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕರ್ನಾಟಕ ರಾಜ್ಯೋತ್ಸವ ಸಮಿತಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಮತ್ತು ನಾಡದೇವಿ ಅಣ್ಣಮ್ಮ ಹಾಗೂ ಸಾಂಸ್ಕೃತಿಕ ವೈಭವ ಮೆರವಣಿಗೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಗರದಲ್ಲಿರುವ ಪರಭಾಷಿಕರು ಮುಂದಿನ ದಿನಗಳಲ್ಲಿ ಕನ್ನಡ ಕಲಿಯಲು ಮುಂದಾಗದಿದ್ದರೆ ದಂಗೆ ಏಳಬೇಕಾಗುತ್ತದೆ. ದೇಶದ ಇತರೆ ರಾಜ್ಯಗಳಲ್ಲಿ ಕರ್ನಾಟಕದಂತಹ ವಾತಾವರಣವಿಲ್ಲ. ಅನ್ಯ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆ ಕಡ್ಡಾಯಗೊಳಿಸಲಾಗಿದೆ. ಆದರೆ, ನಮ್ಮಲ್ಲಿಯೂ ಅದೇ ರೀತಿ ಬೆಳವಣಿಗೆ ಆಗಬೇಕಾಗಿದೆ. ಇದು ಯಾರ ವಿರುದ್ಧ ಹೋರಾಟವೂ ಅಲ್ಲ, ಭಾಷೆ ಉಳಿವಿಗಾಗಿ ನಡೆಸುತ್ತಿರುವ ಸ್ವಾಭಿಮಾನದ ಹೋರಾಟ ಎಂದು ತಿಳಿಸಿದರು.
ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ಎಲ್ಲರೂ ಕನ್ನಡ ಕಲಿತಾಗ ಮಾತ್ರ ಪ್ರಾದೇಶಿಕ ಭಾಷೆ ಬೆಳೆಯಲು ಸಾಧ್ಯ. ಮುಂದಿನ ದಿನಗಳಲ್ಲಿ ಕನ್ನಡ ಕಡೆಗಣಿಸುವ ಕೆಲ ಮಾಧ್ಯಮಗಳ ಕಚೇರಿಗಳಿಗೂ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದರು.
ಪಾಲಿಕೆ ಮೇಯರ್ ಆರ್. ಸಂಪತ್‌ರಾಜು ಮಾತನಾಡಿ, ಮೈಸೂರು ಬ್ಯಾಂಕ್ ವೃತ್ತದಿಂದ ಸಿವಿಲ್ ಕೋರ್ಟ್ ಮಾರ್ಗದ ದ್ವಾರ ಭಾಗದಲ್ಲಿ (ವಿಜಯನಗರ ಹೆಬ್ಬಾಗಿಲು) ಶಾಶ್ವತವಾಗಿ ಹೆಬ್ಬಾಗಿಲು ನಿರ್ಮಾಣ ಮಾಡಲಾಗುವುದು, ವಾಟಾಳ್ ನಾಗಾರಜ್ ಅವರು ನೀಲಿ ನಕ್ಷೆ ನೀಡಿದರೆ ನಾವು ಅದೇ ಮಾದರಿಯಲ್ಲಿ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್, ಮುಂದಿನ ಕನ್ನಡ ರಾಜ್ಯೋತ್ಸವದ ವೇಳೆಗೆ ಹೆಬ್ಬಾಗಿಲು ಸಿದ್ಧ ಮಾಡುವ ಜವಾಬ್ದಾರಿ ನಮ್ಮದು. ಅಲ್ಲದೆ, ಕನ್ನಡ ನಾಮಫಲಕ ಇಲ್ಲದ ಮಳಿಗೆಗಳ ಟ್ರೇಡ್ ಲೈಸೆನ್ಸ್ ರದ್ದುಗೊಳಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ನಗರದಲ್ಲಿರುವ ಸುಮಾರು ಒಂದೂವರೆ ಸಾವಿರ ಉದ್ಯಾನವನದಲ್ಲಿ ಕನ್ನಡ ಸಾಹಿತಿಗಳ ಭಾವಚಿತ್ರ ಮತ್ತು ನುಡಿಮುತ್ತಗಳ ನಾಮಫಲಕಗಳನ್ನು ಪ್ರಕಟಿಸುವ ಮೂಲಕ ಕನ್ನಡದ ಬಗ್ಗೆ ನಮಗಿರುವ ಕಾಳಜಿ ತೋರಿದ್ದೇವೆ ಎಂದರು.
ಉತ್ತರ ಕರ್ನಾಟಕದ ರೈತ ಹೋರಾಟಗಾರರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು .ಕನ್ನಡಪರ ಹೋರಾಟಗಾರದ ಪ್ರವೀಣ್ ಶೆಟ್ಟಿ, ಕೆ.ಆರ್. ಕುಮಾರ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.