
ಬೆಂಗಳೂರು: ವಿಧಾನಸಭಾ ಚುನಾವಣೆ ದೃಷ್ಟಿಯಿಂದ ರಾಜ್ಯ ಬಿಜೆಪಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ‘ಕರ್ನಾಟಕ ನವನಿರ್ಮಾಣ ಪರಿವರ್ತನಾ ಯಾತ್ರೆ’ ನ.2ರಂದು ಆರಂಭವಾಗಲಿದೆ. ಈ ಮೊದಲು ಕನ್ನಡ ರಾಜ್ಯೋತ್ಸವ ದಿನವಾದ ನ.1ರಂದೇ ಯಾತ್ರೆಗೆ ಚಾಲನೆ ನೀಡಲು ನಿರ್ಧರಿಸಲಾಗಿತ್ತು.
ಆದರೆ, ಅಂದು ಕನ್ನಡ ಧ್ವಜದ ಬದಲು ಪಕ್ಷದ ಬಾವುಟ ಹಿಡಿದುಕೊಂಡು ಹೋದರೆ ಕೆಟ್ಟ ಸಂದೇಶ ರವಾನೆಯಾಗಬಹುದು. ಮೇಲಾಗಿ ಪ್ರತಿಪಕ್ಷಗಳು ಇದನ್ನೇ ರಾಜಕೀಯ ಅಸ್ತ್ರವನ್ನಾಗಿ ಬಳಸಬಹುದು ಎಂಬ ಮಾತು ಬಿಜೆಪಿಯಲ್ಲೇ ಕೇಳಿಬಂದಿತ್ತು. ಹೀಗಾಗಿ, ನ.2ರಂದು ಯಾತ್ರೆಗೆ ಚಾಲನೆ ನೀಡಲು ನಿರ್ಣಯ ಕೈಗೊಳ್ಳಲಾಗಿದೆ.
ಅಂದು ಯಾತ್ರೆಯ ಉದ್ಘಾಟನಾ ಸಮಾರಂಭವನ್ನು ಬೆಂಗಳೂರು ಹೊರವಲಯದ ತುಮಕೂರು ಮಾರ್ಗದಲ್ಲಿ ಆಯೋಜಿಸುವ ಸಾಧ್ಯತೆಯಿದ್ದು, ಯಾತ್ರೆ ಅಂಗವಾಗಿ ಎರಡು ಹಂತಗಳಲ್ಲಿ ಬೈಕ್ ರ್ಯಾಲಿ ನಡೆಸಲು ಉದ್ದೇಶಿಸಲಾಗಿದೆ.
ಮೊದಲ ಹಂತದ ಬೈಕ್ ರ್ಯಾಲಿ ಉದ್ಘಾಟನಾ ದಿನದಂದು ಆರಂಭವಾಗಲಿದ್ದರೆ ಮತ್ತೊಂದು ಹಂತ ಕೆಲವು ದಿನಗಳ ನಂತರ ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.
ಭಾನುವಾರ ತಡರಾತ್ರಿ ದೆಹಲಿಯಲ್ಲಿ ನಡೆದ ಪಕ್ಷದ ರಾಜ್ಯ ಘಟಕದ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆಯಲ್ಲಿ ಯಾತ್ರೆಯ ರೂಪರೇಷೆಗಳ ಬಗ್ಗೆ ವಿಸ್ತೃತವಾಗಿ ಸಮಾಲೋಚನೆ ನಡೆಸಲಾಯಿತು.
ಸುಮಾರು ಎರಡೂವರೆ ತಿಂಗಳ ಕಾಲ ನಡೆಯಲಿರುವ ಈ ಯಾತ್ರೆಯು ರಾಜ್ಯದ ಎಲ್ಲ ಜಿಲ್ಲೆಗಳ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಹಾದು ಹೋಗಲಿದ್ದು, ಪಕ್ಷ ಸಂಘಟನೆ ಬಲಪಡಿಸಲು ಉದ್ದೇಶಿಸಲಾಗಿದೆ. ಒಂದು ದಿನದಲ್ಲಿ ಎರಡು ಅಥವಾ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸುವ ಯೋಜನೆ ರೂಪಿಸಲಾಗಿದೆ.
ಯಾತ್ರೆ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅಥವಾ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಪೈಕಿ ಒಬ್ಬರು ಆಗಮಿಸುವ ಸಾಧ್ಯತೆ ಇದೆಯಾದರೂ ಯಾರು ಎಂಬುದು ಅಂತಿಮಗೊಂಡಿಲ್ಲ. ಇದೇ ವೇಳೆ ಯಾತ್ರೆಗೆ ರಾಜಧಾನಿ ಬೆಂಗಳೂರು ನಗರದಲ್ಲೇ ಚಾಲನೆ ನೀಡಲು ನಿರ್ಧರಿಸಲಾಗಿತ್ತು. ಆದರೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ನಿರ್ದೇಶನದ ಅನುಸಾರ ಯಾತ್ರೆ ಅಂಗವಾಗಿ ಒಂದು ಲಕ್ಷಕ್ಕೂ ಹೆಚ್ಚು ಬೈಕ್‌ಗಳ ರ್ಯಾಲಿ ನಡೆಸಲು ಉದ್ದೇಶಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.