‘ಕಾಂಗ್ರೆಸ್ ಮುಕ್ತ ಕರ್ನಾಟಕ ಅವರಪ್ಪನಾಣೆಗೂ ಸಾಧ್ಯವಿಲ್ಲ’

Published : Nov 28, 2017, 11:08 AM ISTUpdated : Apr 11, 2018, 12:53 PM IST
‘ಕಾಂಗ್ರೆಸ್ ಮುಕ್ತ ಕರ್ನಾಟಕ ಅವರಪ್ಪನಾಣೆಗೂ ಸಾಧ್ಯವಿಲ್ಲ’

ಸಾರಾಂಶ

ಮತ್ತೆ ಕಾಂಗ್ರೆಸ್ಸೇ ಅಧಿಕಾರಕ್ಕೆ ಬಿಜೆಪಿಯ ಮಿಷನ್ 50ಕ್ಕಿಳಿದಿದೆ: ಸಿದ್ದರಾಮಯ್ಯ

ನರಗುಂದ: ಕಾಂಗ್ರೆಸ್ ಮುಕ್ತ ರಾಜ್ಯ ಮಾಡುತ್ತೇವೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ, ಅವರಪ್ಪನಾಣೆಗೂ ಅದು ಸಾಧ್ಯವಿಲ್ಲ. ಬಿಜೆಪಿಯ ಮಿಷನ್- 150 ಠುಸ್ ಆಗಿದೆ. ಈಗ ಬಿಜೆಪಿಯದ್ದು ಮಿಷನ್ 50ಕ್ಕೆ ಬಂದು ನಿಂತಿದೆ. ಮುಂದಿನ ಬಾರಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಟ್ಟಣದಲ್ಲಿ ಸೋಮವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು,  ಹಿಂದೆ 5 ವರ್ಷದ ಅಧಿಕಾರದಲ್ಲಿ ಬಿಜೆಪಿ 1 ಸೈಕಲ್, 1 ಹರಕು ಸೀರೆ ಕೊಟ್ಟಿದ್ದು ಬಿಟ್ಟರೆ, ಜೈಲಿಗೆ ಹೋಗಿದ್ದೇ ಹೆಚ್ಚು. ಗುಂಡ್ಲುಪೇಟೆ ಮತ್ತು ನಂಜನಗೂಡು ಉಪ ಚುನಾವಣೆಯಲ್ಲೇ ಬಿಜೆಪಿಯ ಮಿಷನ್-150 ಠುಸ್ ಆಗಿದೆ ಎಂದರು.

ಮಹದಾಯಿಯಲ್ಲಿ ರಾಜಕೀಯ ಬೇಡ: ಒಂದು ತಿಂಗಳಲ್ಲಿ ಮಹದಾಯಿ ಮತ್ತು ಕಳಸಾ- ಬಂಡೂರಿ ನೀರು ಹರಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ. ತಿಂಗಳಲ್ಲಿ ನೀರು ತಂದರೆ ಅದು ನಮಗೂ ಸಂತಸವೇ. ಆದರೆ, ಅದನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಬೇಡ. ಕೇಂದ್ರಕ್ಕೆ ಸರ್ವಪಕ್ಷದ ನಿಯೋಗ ಹೋದಾಗ, ರಾಜ್ಯ ಬಿಜೆಪಿ ನಾಯಕರಿಗೆ ನಾನು ಕೇಳಿಕೊಂಡರೂ ಯಾರೂ ತುಟಿಪಿಟಿಕ್ ಎನ್ನಲಿಲ್ಲ. ಈಗ ಚುನಾವಣಾ ರಾಜಕೀಯಕ್ಕಾಗಿ ತಿಂಗಳಲ್ಲಿ ನೀರು ತರುತ್ತೇನೆ ಎನ್ನುತ್ತಿದ್ದಾರೆ. ಆದರೆ, ಆಗಸ್ಟ್ 2018ಕ್ಕೆ ಮಹದಾಯಿ ನ್ಯಾಯಾಧಿಕರಣ ಅಂತಿಮ ತೀರ್ಪು ನೀಡಲೇಬೇಕು. ರಾಜ್ಯದ ಪರ ತೀರ್ಪು ಹೊರಬೀಳುವುದು ನೂರರಷ್ಟು ಸತ್ಯ ಎಂದರು.

ಕೃಷಿ ಹೊಂಡ ಜಾರಿಗೆ ತಂದ ಪ್ರಥಮ ರಾಜ್ಯ: ರೈತರ ಅನುಕೂಲಕ್ಕಾಗಿ ಕೃಷಿ ಹೊಂಡ ಯೋಜನೆ ಜಾರಿಗೆ ತಂದಿದ್ದು, ದೇಶದಲ್ಲಿ ಈ ಯೋಜನೆ ಜಾರಿಗೆ ತಂದ ಪ್ರಥಮ ರಾಜ್ಯ ನಮ್ಮದು. ಮೋದಿ ಅಧಿಕಾರಕ್ಕೆ ಬಂದು 3 ವರ್ಷವಾದರೂ ಯಾವ ಅಚ್ಛೇ ದಿನ ಬಂದಿದೆ ಹೇಳಲಿ. ದೇಶದ 16 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಯಾವ ರಾಜ್ಯದಲ್ಲಿ ಈ ಯೋಜನೆ ಇದೆ ಹೇಳಲಿ ಎಂದು ಸವಾಲು ಹಾಕಿದರು.

ರೈತ ಹೋರಾಟದಿಂದಲೇ ಬಂದವ: ಗಜೇಂದ್ರಗಢದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾನು ರೈತರ ಮಗ, ರೈತ ಸಂಘದಲ್ಲಿ ಕೆಲಸ ಮಾಡಿದ್ದೇನೆ. ಆದರೆ ಹೆಗಲ ಮೇಲೆ ಹಸಿರು ಶಾಲು ಹಾಕಿಕೊಂಡ ಯಡಿಯೂರಪ್ಪನಂತೆ ಮೋಸ ಮಾಡಿಲ್ಲ. ನಾನು ರೈತರ ಪರ ಎಂದು ಬಿಂಬಿಸಿಕೊಳ್ಳಲಿಲ್ಲ. ಬದಲಾಗಿ ರೈತರ ಸಾಲ ಮನ್ನಾ ಮಾಡಿದ್ದೇನೆ. ರೈತರಿಗೆ ಕೃಷಿ ಭಾಗ್ಯದಂತಹ ಸಾಕಷ್ಟು ಯೋಜನೆ ತಂದಿದ್ದೇನೆ. ಇದು ರೈತಪರ ಕಾಳಜಿ ಎಂದರು.

ಇದೇ ವೇಳೆ ಇಷ್ಟೇಲ್ಲ ಸಾಧನೆ ಮಾಡಿ ಸತ್ಯ ಹೇಳುವ ನಾವು ಬೇಕಾ ಸುಳ್ಳು ಹೇಳುವ ಬಿಜೆಪಿಯವರು ಬೇಕಾ ಎಂದು ಪ್ರಶ್ನಿಸಿದಾಗ ಸಮಾರಂಭದಲ್ಲಿ ನೆರೆದಿದ್ದವರು, ಅವರೆಲ್ಲ ಮತ್ತೆ ನೀವೇ ಮುಖ್ಯಮಂತ್ರಿ ಎಂದಾಗ.. ಓಕೆ ಹಾಗಾದ್ರೆ ಮತ್ತೊಮ್ಮೆ ಜಿ.ಎಸ್. ಪಾಟೀಲ ಅವರನ್ನು ಗೆಲ್ಲಿಸಿ ಎಂದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಾಯಕತ್ವ ಬದಲಾವಣೆ ಹೇಳಿಕೆ ಒಂದು ತಿಂಗಳ ಮೌನವ್ರತ : ಪಿ.ರವಿಕುಮಾರ್
ಡಿಕೆ ಊಟ ವರ್ಸಸ್‌ ಸಿದ್ದು ನಾಷ್ಟ! ಕಾಂಗ್ರೆಸ್‌ ಬಣಗಳ ಔತಣ ಸಮರ