ಬಿಜೆಪಿ ಸರ್ಕಾರದಲ್ಲಿ ಡಿಸಿಎಂ ಹುದ್ದೆ ಡೌಟ್!

By Web DeskFirst Published Jul 25, 2019, 8:12 AM IST
Highlights

ಬಿಜೆಪಿ ಸರ್ಕಾರದಲ್ಲಿ ಡಿಸಿಎಂ ಹುದ್ದೆ ಅನುಮಾನ| ಉಪ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು ಹೆಚ್ಚಿರುವುದರಿಂದ ಆ ಹುದ್ದೆ ಯಾರಿಗೂ ಇಲ್ಲ?| 

ಬೆಂಗಳೂರು[ಜು.25]: ರಾಜ್ಯದಲ್ಲಿ ಈ ಬಾರಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಇರುವ ಬಗ್ಗೆ ಅನುಮಾನವಿದೆ.

ಹೆಚ್ಚಾಗಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅವಕಾಶ ನೀಡಿಲ್ಲ. ಕೆಲವು ರಾಜ್ಯಗಳಲ್ಲಿ ಅನಿವಾರ್ಯ ಕಾರಣಗಳಿಂದ ಸೃಷ್ಟಿಸಲಾಗಿದೆ. ಆದರೆ, ಈ ಬಾರಿ ಕರ್ನಾಟಕದಲ್ಲಿ ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಮುಂದೆ ಅದು ತೊಂದರೆ ಉಂಟುಮಾಡಬಹುದು ಎಂಬ ಕಾರಣಕ್ಕಾಗಿ ಆ ಹುದ್ದೆ ಸೃಷ್ಟಿಸುವುದೇ ಬೇಡ ಎಂಬ ಚರ್ಚೆ ಪಕ್ಷದ ಹೈಕಮಾಂಡ್‌ ಮಟ್ಟದಲ್ಲಿ ನಡೆಯುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಹಿಂದಿನ ಬಿಜೆಪಿ ಸರ್ಕಾರದ ಕೊನೆಯ ಅವಧಿಯಲ್ಲಿ ಕೆ.ಎಸ್‌.ಈಶ್ವರಪ್ಪ ಮತ್ತು ಆರ್‌.ಅಶೋಕ್‌ ಅವರನ್ನು ಆಗಿನ ಅನಿವಾರ್ಯ ಕಾರಣಗಳಿಂದಾಗಿ ಉಪಮುಖ್ಯಮಂತ್ರಿಗಳನ್ನಾಗಿ ಮಾಡಲಾಗಿತ್ತು. ಈಗ ಅವರಿಬ್ಬರನ್ನು ಬಿಟ್ಟು ಬೇರೆಯವರನ್ನು ಮಾಡುವುದು ಕಷ್ಟ. ಪಕ್ಷದ ಹಿರಿಯ ನಾಯಕರಾದ ದಲಿತ ಸಮುದಾಯಕ್ಕೆ ಸೇರಿದ ಗೋವಿಂದ ಕಾರಜೋಳ ಹಾಗೂ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಬಿ.ಶ್ರೀರಾಮುಲು ಅವರ ಹೆಸರುಗಳು ಕಳೆದ ಚುನಾವಣೆ ನಂತರ ಉಪಮುಖ್ಯಮಂತ್ರಿ ಸ್ಥಾನಕ್ಕೆ ಬಲವಾಗಿ ಕೇಳಿಬಂದಿದ್ದವು.

ಅಲ್ಲಿಗೆ ಈಶ್ವರಪ್ಪ, ಅಶೋಕ್‌, ಕಾರಜೋಳ ಮತ್ತು ಶ್ರೀರಾಮುಲು ಅವರ ಹೆಸರುಗಳು ಉಪಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿ ಇದ್ದಂತಾಯಿತು. ಇದರೊಂದಿಗೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಮೊದಲಿಗೆ ಬಂಡಾಯ ಸಾರಿದ ರಮೇಶ್‌ ಜಾರಕಿಹೊಳಿ ಅವರೂ ಉಪಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದ ಜಗದೀಶ್‌ ಶೆಟ್ಟರ್‌ ಅವರು ವಿಧಾನಸಭೆಯ ಸ್ಪೀಕರ್‌ ಸ್ಥಾನಕ್ಕೆ ಒಪ್ಪದಿದ್ದರೆ ಮಂತ್ರಿಯನ್ನಾಗಿ ಮಾಡಬೇಕಾಗುತ್ತದೆ. ಉಳಿದ ಕೆಲವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿ ಶೆಟ್ಟರ್‌ ಅವರನ್ನು ಕೇವಲ ಮಂತ್ರಿಯನ್ನಾಗಿ ಮಾಡುವುದು ಸರಿ ಹೊಂದುವುದಿಲ್ಲ. ಆಗ ಆರು ಮಂದಿಯನ್ನು ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಪರಿಗಣಿಸಬೇಕಾಗುತ್ತದೆ.

ಈ ಪೈಕಿ ಒಬ್ಬರನ್ನು ಮಾಡಿ ಮತ್ತೊಬ್ಬರನ್ನು ಬಿಟ್ಟರೆ ಅದು ಅಸಮಾಧಾನಕ್ಕೆ ಕಾರಣವಾಗಬಹುದು. ಅದರ ಬದಲು ಉಪಮುಖ್ಯಮಂತ್ರಿ ಹುದ್ದೆಯನ್ನೇ ಸೃಷ್ಟಿಮಾಡುವುದನ್ನು ಕೈಬಿಟ್ಟು ಆ ಸ್ಥಾನದ ಆಕಾಂಕ್ಷಿಗಳಾಗಿದ್ದವರಿಗೆ ಪ್ರಮುಖ ಖಾತೆಗಳನ್ನು ನೀಡುವ ಮೂಲಕ ಸಮಾಧಾನಪಡಿಸಲು ತಂತ್ರ ರೂಪಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

click me!